ಇಂದು ಹಾಸ್ಯ ಸಾಮ್ರಾಟ ನರಸಿಂಹರಾಜು ಜನುಮದಿನ.

0
1039

ನರಸಿಂಹರಾಜು ಅವರು ಕನ್ನಡ ಚಿತ್ರರಂಗದ ಸುವರ್ಣ ಕಾಲ ಎನ್ನಬಹುದಾದ ಅರವತ್ತು ಎಪ್ಪತ್ತರ ದಶಕದಲ್ಲಿ ಹಾಸ್ಯಚಕ್ರವರ್ತಿಯಾಗಿ ಕನ್ನಡಿಗರನ್ನು ರಂಜಿಸಿದ್ದರು.  ಇಂದು ಇವರ ಜನುಮದಿನ.

ಜುಲೈ 24, 1926ರಂದು ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಜನಿಸಿದ ನರಸಿಂಹರಾಜು ಅವರ ತಂದೆ ರಾಮರಾಜು ಪೋಲೀಸ್‌ ಇಲಾಖೆಯ ನೌಕರರಾಗಿದ್ದರು, ಇವರ ತಾಯಿ ವೆಂಕಟಲಕ್ಷ್ಮಮ್ಮ. ನಾಲ್ಕನೇ ವಯಸ್ಸಿನಲ್ಲೇ ರಂಗಭೂಮಿಯತ್ತ ಒಲವು ಹೊಂದಿದ್ದ ನರಸಿಂಹರಾಜು ಅವರು ಮಲ್ಲಪ್ಪನವರ ನಾಟಕ ಕಂಪೆನಿಯಲ್ಲಿ ಬಾಲಕಲಾವಿದನಾಗಿ ಸೇರಿಕೊಂಡರು.

ಹಾಸ್ಯ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖ, ಶರೀರ ಹೊಂದಿದ್ದ ನರಸಿಂಹರಾಜು ತೆರೆ ಮೇಲೆ ಬರುತ್ತಿದ್ದಂತೆಯೇ ನಗೆಹೊನಲು ಹರಿಸುತ್ತಿದ್ದರು. ರಾಜಣ್ಣ ಮತ್ತು ನರಸಿಂಹರಾಜು ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಜನಪ್ರಿಯ ಜೋಡಿಯಾಗಿ ಹೆಸರು ಮಾಡಿತ್ತು. ರಾಜ್ ಒಂದು ಮಾತು ಹೇಳುತ್ತಿದ್ದರು, ನಮ್ಮ ಕಾಲದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರು ಮೊದಲು ತಮ್ಮ ಚಿತ್ರಗಳಿಗೆ ನರಸಿಂಹರಾಜು ಅವರ ಕಾಲ್ಶೀಟ್ ಇದೆಯಾ ಎಂದು ಖಚಿತ ಪಡಿಸಿಕೊಂಡು ನಂತರ ನಮ್ಮಂತಹ ಕಲಾವಿದರನ್ನು ಸಂಪರ್ಕಿಸುತ್ತಿದ್ದರು ಎಂದು ತಿಳಿದಿದೆ. ನರಸಿಂಹರಾಜು ಅವರ ಹುಟ್ಟಿದದಿ ಇಂದು, ಅವರು ನಟಿಸಿದ ಕೆಲವು ಪ್ರಮುಖ ಚಿತ್ರಗಳು ಇಲ್ಲಿವೆ.

ಭಕ್ತ ಮಲ್ಲಿಕಾರ್ಜುನ,  ಭಕ್ತ ಮಾರ್ಕಂಡೇಯ,  ಅಣ್ಣ ತಂಗಿ,  ರಣಧೀರ ಕಂಠೀರವ,  ದಶಾವತಾರ,  ಜೇನುಗೂಡು, ಅಮರಶಿಲ್ಪಿ ಜಕಣಾಚಾರಿ ಮೊದಲಾದ ಚಿತ್ರಗಳಲ್ಲಿ ತಮ್ಮ ಅಪ್ರತಿಮ ನಟನಾ ಕೌಶಲ್ಯ,  ಮುಖಭಂಗಿ, ಸಂಭಾಷಣೆ, ಮಾತಿನಧಾಟಿಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ನರಸಿಂಹರಾಜು ಇಂದು ನಮ್ಮೊಂದಿಗಿಲ್ಲ ಆದರೆ ಅವರ ನೆನಪು ಸದಾ ಹಸಿರು.