ಸಾಕ್ಷಿ ಸಮೇತ ಅನುಪಮಾ ಶೆಣೈ ದೂರು: ಹೊಸ ಟ್ವಿಸ್ಟ್

0
1166

ಮುಂಬೈ: ಜಿಲ್ಲಾ ಉಸ್ತುವಾರಿ ಸಚಿವರೊಂದಿಗಿನ ವಾಗ್ವಾದ ಹಿನ್ನಲೆಯಲ್ಲಿ ಕೂಡ್ಲಿಗಿಯಿಂದ ವರ್ಗಾವಣೆಗೊಂಡಿದ್ದ ಮಾಜಿ ಪೊಲೀಸ್ ಅಧಿಕಾರಿ ಅನುಮಪ ಶೆಣೈ ಅವರು ಸತತ 8 ತಿಂಗಳ ಬಳಿಕ ತಮ್ಮ ವರ್ಗಾವಣೆಗೆ ಕಾರಣವಾದ ದೂರವಾಣಿ ಕರೆಗಳ ರೆಕಾರ್ಡ್ ಅನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಡಿವೈಎಸ್‌ಪಿ ಆಗಿದ್ದ ಅನುಪಮಾ ಶೆಣೈ ಅವರ ವರ್ಗಾವಣೆಗೂ ಮುನ್ನ ನಡೆದ ಮತುಕತೆ ಇದಾಗಿದ್ದು. ಇದನ್ನು ಅಂದು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದನ್ನು ಈಗ ಬಿಡುಗಡೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಅವರು ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದಾರೆ.

ನಿನ್ನೆ ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಅನುಪಮಾ ಶೆಣೈ ಅವರು, ತಮ್ಮ ವರ್ಗಾವಣೆಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪಿಟಿ ಪರಮೇಶ್ವರ ನಾಯ್ಕ್ ಅವರೇ ಕಾರಣ ಎಂದು ನೇರವಾಗಿ ಆರೋಪ ಮಾಡಿದರು. ಈ ಕುರಿತಂತೆ ಆಡಿಯೋ ಟೇಪ್ ಬಿಡುಗಡೆ ಮಾಡಿದ ಅವರು, ತಮ್ಮ ಮತ್ತು ಪರಮೇಶ್ವರ್ ನಾಯಕ್ ಅವರ ನಡುವಿನ ಸಂಭಾಷಣೆಯನ್ನು ಪ್ರಸ್ತಾಪಿಸಿದರು. ಅಲ್ಲದೆ ಈ ಘಟನೆ ಬಳಿಕ ತಮ್ಮ ಪ್ರಭಾವ ಬಳಿಸಿದ ಪರಮೇಶ್ವರ ನಾಯ್ಕ್ ಅವರು ತಮ್ಮನ್ನು ವರ್ಗಾವಣೆ ಮಾಡಿಸಿದರು ಎಂದು ಹೇಳಿದ್ದಾರೆ.

ಪರಮೇಶ್ವರ್ ನಾಯ್ಕ್‌- ಅನುಪಮಾ ಶೆಣೈ

ಪರಮೇಶ್ವರ್ ನಾಯ್ಕ್‌: ನಿಮಗೆ ಒಂದು ನಿಮಿಷ ಫೋನ್ ಹೋಲ್ಡ್ ಮಾಡೋಕೆ ಪೇಷನ್ಸ್ ಇಲ್ವಾ?

ಅನುಪಮಾ ಶೆಣೈ: ಇಲ್ಲಾ, ಎಸ್ ಪಿ ಅವರ ಕಾಲ್ ಬಂದಿತ್ತು, ಬ್ಯುಸಿ ಇದ್ದೆ ನಾನು..

ಪರಮೇಶ್ವರ್ ನಾಯ್ಕ್‌: ಎಸ್‌ಪಿ ಅವರ ಕಾಲ್ ಬಂದ್ರೆ, ಡಿಸ್ಟಿಕ್ ಮಿನಿಸ್ಟ್ರು ಫೋನ್ ಮಾಡ್ತಾವ್ರೆ ಅಂತ ಹೇಳೋಕಾಗಲ್ವಾ ನಿಮಗೆ?

ಅನುಪಮಾ ಶೆಣೈ: ಇಲ್ಲ ಹೇಳೋಕೆ ಆಗಲ್ಲ

ಪರಮೇಶ್ವರ್ ನಾಯ್ಕ್: ಯಾಕೆ?

ಅನುಪಮಾ ಶೆಣೈ: ಮರ್ಯಾದೆ ಕೊಟ್ಟು ಮಾತಾಡಿ ನೀವು… ಗೊತ್ತಾಯ್ತಾ..?

***

ಓಂ ಪ್ರಕಾಶ್- ಅನುಪಮಾ ಶೆಣೈ

ಓಂ ಪ್ರಕಾಶ್: ಯಾವ್ ಬ್ಯಾಚ್ ನೀವು..?

ಅನುಪಮಾ: 2012 ಸರ್

ಓಂ ಪ್ರಕಾಶ್: ಇವಾಗ ಕೆಲಸ ಮಾಡ್ತಿರೋದು ನಿಮ್ಮ ಮೊದಲ ಸಬ್ ಡಿವಿಷನ್ ಅಲ್ವಾ?

ಅನುಪಮಾ: ಹೌದು ಸಾರ್

ಓಂ ಪ್ರಕಾಶ್: ಎಷ್ಟು ಸಮಯ ಆಗಿದೆ?

ಅನುಪಮಾ: ಒಂದು ವರ್ಷ ನಾಲ್ಕು ತಿಂಗಳು ಕಳೆದಿದೆ ಸಾರ್.

ಓಂ ಪ್ರಕಾಶ್: ನಿಮ್ಮ ಕುಟುಂಬ ಎಲ್ಲಿ ವಾಸವಾಗಿರೋದು?

ಅನುಪಮಾ: ನಾನಿನ್ನೂ ಮದುವೆಯಾಗಿಲ್ಲ ಸಾರ್, ಅಪ್ಪ ಅಮ್ಮ ಉಡುಪಿಯಲ್ಲಿದಾರೆ.

ಓಂ ಪ್ರಕಾಶ್: ನೀವು ಬೇರೆ ಎಲ್ಲಾದ್ರೂ ಡ್ಯೂಟಿ ಮಾಡೋಕೆ ಏನಾದ್ರು ಸಮಸ್ಯೆ ಇದೆಯಾ?

ಅನುಪಮಾ: ಇಲ್ಲ ಸಾರ್, ಯಾವ ಸ್ಥಳ?

ಓಂ ಪ್ರಕಾಶ್: ಕೆಲವೇ ಸ್ಥಳಗಳಲ್ಲಿ ಮಾತ್ರ ಖಾಲಿ ಇದೆ. ಅಥಣಿ ಸಬ್ ಡಿವಿಷನ್ ಈಗ ಖಾಲಿ ಇದೆ. ಆಳಂದ ಒಂದು ಖಾಲಿ ಇದೆ. ಉಡುಪಿ ಖಾಲಿ ಇದೆ, ಬಟ್ ನೀವು ಉಡುಪಿಯವರೇ ಆಗಿರುವುದರಿಂದ ಅಲ್ಲಿಗೆ ಹೋಗೋಕಾಗಲ್ಲ. ಬಳ್ಳಾರಿ ಮತ್ತು ಮಂಗಳೂರು ಐಜಿಪಿ ಕಚೇರಿಯಲ್ಲಿ ಖಾಲಿ ಇದೆ. ನೀವು ನಾನ್ ಎಕ್ಸಿಕ್ಯೂಟೀವ್‌ನಲ್ಲಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ. ನೀವಿನ್ನೂ ಹೊಸಬರು ಚೆನ್ನಾಗಿ ಕೆಲಸ ಮಾಡಬೇಕು. ಇಂಡಿ ಉಪವಿಭಾಗದಲ್ಲಿ ಖಾಲಿ ಇದೆ. ಇಷ್ಟೇ ಖಾಲಿ ಇರೋದು.

ಅನುಪಮಾ: ಸರ್ ಇದು ಪನಿಶ್‌ಮೆಂಟ್ ಟ್ರಾನ್ಸ್‌ಫರ್?

ಓಂ ಪ್ರಕಾಶ್: ಇದು ಪನಿಶ್‌ಮೆಂಟ್ ಅಲ್ಲ, ಇದು ರಿವಾರ್ಡ್ ಟ್ರಾನ್ಸ್‌ಫರ್. ಅದಕ್ಕೋಸ್ಕರ ನಿಮಗೆ ಆಯ್ಕೆಗಳನ್ನು ನೀಡುತ್ತಿದ್ದೇನೆ.

ಅನುಪಮಾ: ನೀವು ಒತ್ತಡಕ್ಕೊಳಗಾಗಿ ನನ್ನನ್ನು ವರ್ಗಾ ಮಾಡುತ್ತಿದ್ದೀರಾ?

ಓಂ ಪ್ರಕಾಶ್: ನೀವು ಅದನ್ನೆಲ್ಲಾ ಮರೆತುಬಿಡಿ. ಅಥಣಿ, ಆಳಂದ ಮತ್ತು ಇಂಡಿ ಇದರೊಳಗೆ ಯಾವುದು ಬೇಕು. ಇದರ ಜತೆಗೆ ಸಿಐಡಿ ಇದೆ, ಐಜಿಪಿ ಕಚೇರಿಗಳಿವೆ. ನೀವು ಯೋಚನೆ ಮಾಡಿ ನನಗೆ ಯಾವುದು ಬೇಕು ಎಂದು ತಿಳಿಸಿ.

ಅನುಪಮಾ: ಸರಿ ಸರ್

***

ಮುರುಗನ್- ಅನುಪಮಾ ಶೆಣೈ

ಮುರುಗನ್: ಏನ್ ಅದು ಡಿಸ್ಟಿಕ್ ಮಿನಿಸ್ಟ್ರು ನಿಮ್ ಮೇಲೆ ರೇಗ್ತಾಯಿದಾರೆ?

ಅನುಪಮಾ: ಒಂದು ಫೋನ್ ಬಂತು ಸರ್, ಅವ್ರ ಫೋನ್ ಬಂತು, ಅವ್ರ ಕಡೆಯವ್ರು ಹೋಲ್ಡ್ ಮಾಡಿದ್ರು. ಅಷ್ಟರಲ್ಲಿ ಬಳ್ಳಾರಿ ರೂರಲ್ ಡಿವೈಎಸ್‌ಪಿ ಫೋನ್ ಮಾಡಿದ್ರು. ನಾನು ಅವರ ಕಾಲ್ ಕಟ್ ಮಾಡಿ ಇದನ್ನು ರಿಸೀವ್ ಮಾಡಿದೆ. ಒಂದ್ ಮೆಡಿಕಲ್ ಸ್ಟೋರ್‌ಗೆ ನುಗ್ಗಿ ಒಬ್ಬ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದ. ಇದರ ಬಗ್ಗೆ ಎಫ್‌ಐಆರ್ ರಿಜಿಸ್ಟರ್ ಮಾಡಿದ್ದೆ. ಅದು ಬಳ್ಳಾರಿ ರೂರಲ್ ಲಿಮಿಟ್ಸ್‌ ಅಂತ ಅಲ್ಲಿನ ಡಿವೈಎಸ್‌ಪಿಗೆ ಮಿನಿಸ್ಟರ್ ಫೋನ್ ಮಾಡಿದಾರೆ. ಆಮೇಲೆ ಇದು ಕೂಡ್ಲಿಗಿ ಲಿಮಿಟ್ಸ್‌ ಅಂತ ನನಗೆ ಮಾಡಿದಾರೆ. ಇದೇ ವಿಚಾರ ಮಾತಾಡೋಕೆ ಅದೇ ಸಮಯಕ್ಕೆ ರೂರಲ್ ಡಿವೈಎಸ್‌ಪಿ ನನಗೆ ಫೋನ್ ಮಾಡಿದ್ರು. ಮತ್ತೆ ಕಾಲ್ ಮಾಡಿ ಮಿನಿಸ್ಟ್ರು ಒಂದ್ ನಿಮಿಷ ಹೋಲ್ಡ್ ಮಾಡೋಕೆ ಆಗಲ್ವಾ ಅಂತ ಅಂದ್ರು. ಇಲ್ಲಾ ಸಾರ್ ಎಸ್‌ಪಿ ಹತ್ರ ಮಾತಾಡ್ತಿದ್ದೆ ಸಾರ್ ಅಂದೆ. ಅದಕ್ಕೆ ನಿಮಗೆ ಎಸ್‌ಪಿನೇ ದೊಡ್ಡವರಾ ಅಂತ ಕೇಳಿದ್ರು. ಅದಕ್ಕೆ ನಾನು ನೀವು ಮರ್ಯಾದೆ ಕೊಟ್ಟು ಮಾತನಾಡಿ ಅಂತ ಅವರಿಗೆ ಹೇಳಿದೆ. ಸಾರಿ ಸರ್..

ಮುರುಗನ್: ನಗು…

ಅನುಪಮಾ: ಇಲ್ಲ ಸಾರ್ ಎರಡು ಮೂರು ಸರಿ ಇದೇ ತರ ರಬ್ಬಿಂಗ್ ಆಗಿ ಮಾತನಾಡಿದ್ದಾರೆ

ಮುರುಗನ್: ಸಾರಿ ನನಗೆ ಯಾಕೆ, ನೀವು ಹೇಳಿದ್ದು ತಪ್ಪೇನಿಲ್ಲ. ಇವ್ರ ಜತೆ ನಾವು ಜಾಸ್ತಿ ಹತ್ರಾನು ಹೋಗ್ಬಾರ್ದು, ದೂರಾನು ಹೋಗ್ಬಾರ್ದು. ಮುಂದೆ ಸ್ವಲ್ಪ ಎಚ್ಚರ ವಹಿಸಿ, ಏನ್ ಮಾತಾಡ್ತೀರಾ ಅಂತ

ಅನುಪಮಾ: ಇಲ್ಲ ಸಾರ್ ಬೇರೆ ಎಂಎಲ್‌ಎಗಳಿದ್ದಾರೆ ಸಾರ್ ಅವರು ಯಾರೂ ಈತರ ಮಾತಾಡಲ್ಲ.

ಮುರುಗನ್: ನಾನ್ ಹೇಳ್ತೀನಿ ಕೇಳಿ. ನಾವು ಈ ರೀತಿಯ ಜನರನ್ನು ನೋಡಿದೀವಿ. ಎಲ್ಲರೂ ಕರೆಕ್ಟಾಗಿ ಇರಲ್ಲ ಅಲ್ವಾ. ನಾವು ಅವರೊಂದಿಗೆ ಹೇಗೆ ಇರುತ್ತೇವೆ ಎಂಬುದನ್ನು ತಿಳಿದುಕೊಳ್ಳಬೇಕು. ಮುಂದಿನ ಸರಿ ತಿರುಗಿ ಮಾತನಾಡೋದು ಬೇಡ. ಇಲ್ಲಾಂದ್ರೆ ಸಿಎಂ, ಹೋಮ್ ಮಿನಿಸ್ಟರ್‌ಗೆ ಕಂಪ್ಲೆಂಟ್ ಮಾಡ್ತಾರೆ. ಒಂದಲ್ಲಾ ಒಂದು ಸಮಯ ಇದು ನಮಗೆ ತೊಂದರೆ ಆಗುತ್ತದೆ. ನಾನು ಅವ್ರಿಗೆ ಹೇಳ್ತೀನಿ ಡಿವೈಎಸ್‌ಪಿ ಜತೆ ಮಾತನಾಡಿದೀನಿ ಅಂತ. ನೀವು ಮುಂದೆ ಅವ್ರೊಂದಿಗೆ ಮಾತನಾಡುವಾಗ ಎಚ್ಚರ ವಹಿಸಿ.

ಅನುಪಮಾ: ಸರಿ ಸರ್.

ಅಂತೆಯೇ ವರ್ಗಾವಣೆಯಾದ ಬಳಿಕ ಕರ್ನಾಟಕ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ತಾವು ನಡೆಸಿದ ಸಂಭಾಷಣೆಯ ದಾಖಲೆಯನ್ನೂ ಕೂಡ ಅನುಪಮ ಬಿಡುಗಡೆ ಮಾಡಿದ್ದಾರೆ.

ಲಿಕ್ಕರ್ ಮಾಫಿಯಾ ಮತ್ತು ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಅನುಪಮ ಶೆಣೈ ಅವರ ಕರ್ತವ್ಯಕ್ಕೆ ಪರಮೇಶ್ವರ್ ನಾಯ್ಕ್ ಅಡ್ಡಿ ಪಡಿಸಿದರು. ಇದಕ್ಕೆ ಅನುಪಮ ಶೆಣೈ ಇದನ್ನು ಧಿಕ್ಕರಿಸಿ ತಮ್ಮ ಕರ್ತವ್ಯ ಮುಂದುವರೆಸಿದಾಗ ಅವರಿಗೆ ಕರೆ ಮಾಡಿದ್ದ ಪರಮೇಶ್ವರ್ ನಾಯಕ್ ಅವರು ಅನುಪಮಾ ಶೆಣೈ ಅವರನ್ನು ಏಕವಚನದಲ್ಲಿ ಮಾತನಾಡಿಸಿದ್ದಾರೆ. ಇದರಿಂದ ಕೋಪಗೊಂಡ ಅನುಪಮ ಶೈಣೈ ಗೌರವ ನೀಡಿ ಮಾತನಾಡಿಸುವಂತೆ ಹೇಳಿರುವ ಸಂಭಾಷಣೆಗಳು ಪ್ರಸ್ತುತ ಬಿಡಗಡೆಯಾಗಿರುವ ದೂರವಾಣಿ ಸಂಭಾಷಣೆಯಲ್ಲಿ ದಾಖಲಾಗಿದೆ.

ಈ ದೂರವಾಣಿ ಸಂಭಾಷಣೆಯಿಂದ ಕೋಪಗೊಂಡ ಪರಮೇಶ್ವರ ನಾಯ್ಕ್ ಅವರು ಅನುಪಮ ಶೆಣೈರನ್ನು ವರ್ಗಾವಣೆ ಮಾಡಿಸಿದ್ದಾರೆ. ಈ ವಿಚಾರವನ್ನು ಸ್ವತಃ ಪರಮೇಶ್ವರ ನಾಯ್ಕ್ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿಕೊಂಡಿರುವ ವಿಡಿಯೋ ಈಗಾಗಲೇ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಯಾಗಿತ್ತು. ಇನ್ನು ವರ್ಗಾವಣೆ ಬಳಿಕ ತಾವು ಮಾನಸಿಕವಾಗಿ ಖುದ್ದುಹೋಗಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದೆವು. ಈ ಬಗ್ಗೆ ತಮ್ಮ ಬಳಿ ದಾಖಲೆಗಳಿದ್ದು, ಈ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಲು ಹೋದಾಗ ಅಲ್ಲೂ ತಮಗೆ ಅಪಮಾನವಾಯಿತು. ಹೀಗಾಗಿಯೇ ತಾವು ಕೆಲಸ ತೊರೆಯುವ ನಿರ್ಧಾರಕ್ಕೆ ಬಂದಿದ್ದಾಗಿ ಅನುಪಮಾ ಶೆಣೈ ಹೇಳಿಕೊಂಡಿದ್ದಾರೆ.

ಕೇಂದ್ರ ಸಚಿವರಿಗೆ ದೂರು

ಇನ್ನು ಈ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಪರಮೇಶ್ವರ್ ನಾಯ್ಕ್ ಅವರ ವಿರುದ್ಧ ಸಮರವೇ ಸಾರಿರುವ ತಮಗಾದ ಅನ್ಯಾಯದ ಕುರಿತು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಖಾಸಗಿ ಮಾಧ್ಯಮವೊಂದು ವರದಿ ಮಾಡಿರುವಂತೆ ದೆಹಲಿ ತೆರಳಿರುವ ಅನುಪಮಾ ಶೆಣೈ ಅವರು ಅಲ್ಲಿ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ರನ್ನು ಭೇಟಿ ಮಾಡಿ ತಮ್ಮ ದೂರು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಅಲ್ಲಿಂದಲೇ ರಾಷ್ಟೀಯ ಮಾಧ್ಯಮವೊಂದರಲ್ಲಿ ತಮ್ಮ ದೂರವಾಣಿ ಸಂಭಾಷಣೆಯ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಒಟ್ಟಾರೆ ಕಳೆದೊಂದು ತಿಂಗಳಿಂದ ಮಾಧ್ಯಮಗಳಿಂದ ದೂರವುಳಿದಿದ್ದ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರು ಈದೀಗ ಏಕಾಏಕಿ ರಾಜ್ಯ ಸರ್ಕಾರ, ಕರ್ನಾಟಕ ಪೊಲೀಸ್ ಇಲಾಖೆ ಹಾಗೂ ಶಾಸಕ ಪರಮೇಶ್ವರ ನಾಯ್ಕ್ ಅವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.