ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ತಯಾರಿ ಮಾಡುತ್ತಿರುವವರೇ ಎಚ್ಚರ, ಹೊಸ ವೀಸಾ ಹಗರಣದಲ್ಲಿ 129 ಭಾರತೀಯ ವಿದ್ಯಾರ್ಥಿಗಳು ಈಗ ವಿದೇಶದಲ್ಲಿ ಜೈಲುಪಾಲು!!

0
332

ಅಮೇರಿಕಾದಲ್ಲಿ ಪೇ ಅಂಡ್​ ಸ್ಟೇ ವೀಸಾ ಹಗರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 129 ಭಾರತೀಯ ವಿದ್ಯಾರ್ಥಿಗಳನ್ನ ಬಂಧಿಸಲಾಗಿದೆ. ನಕಲಿ ಯೂನಿರ್ವಸಿಟಿ ದಾಖಲೆ ನೀಡಿ ಅಕ್ರಮವಾಗಿ ನೆಲೆಸಿ ಅಮೆರಿಕಾದ ವಲಸೆ ಕಾಯ್ದೆಯನ್ನು ಉಲ್ಲಂಘಿಸಿರುವ ಆರೋಪ ವಿದ್ಯಾರ್ಥಿಗಳ ಮೇಲೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನ್ಯೂ ಜೆರ್ಸಿ, ಅಟ್ಲಾಂಟಾ, ಹೂಸ್ಟನ್​​, ಮಿಚಿಗನ್​​, ಕ್ಯಾಲಿಫೋರ್ನಿಯಾ, ಲೂಸೀನಿಯಾ, ನಾರ್ತ್​​ ಕ್ಯಾರೋಲೀನಾ ಹಾಗೂ ಸೇಂಟ್​​ ಲೂಯಿಸ್​​ ಸೇರಿದಂತೆ ಅಮೇರಿಕಾದ್ಯಂತ 130 ವಿದೇಶಿಗರನ್ನು ಬಂಧಿಸಲಾಗಿದೆ. ಅದರಲ್ಲಿ 129 ಭಾರತೀಯ ವಿದ್ಯಾರ್ಥಿಗಳಾಗಿದ್ದಾರೆ.

ಹೌದು ಯೂನಿವರ್ಸಿಟಿ ವೀಸಾ ಹಗರಣದ ಸಂಬಂಧ ಅಮೇರಿಕ ಅಧಿಕಾರಿಗಳು ಭಾರತದ 129 ವಿದ್ಯಾರ್ಥಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣದಿಂದಾಗಿ ಭಾರತದಲ್ಲಿರುವ ವಿದ್ಯಾರ್ಥಿಗಳ ಪೋಷಕರು ಮತ್ತು ಬಂಧುಮಿತ್ರರಲ್ಲಿ ಆತಂಕದಲ್ಲಿ ಮುಳುಗಿದ್ದಾರೆ. ಅಮೆರಿಕದಲ್ಲಿ ಮತ್ತಷ್ಟು ಕಾಲ ಇರುವ ಉದ್ದೇಶದಿಂದ ನಕಲಿ ವಿಶ್ವವಿದ್ಯಾಲಯವೊಂದನ್ನು ನೋಂದಣಿ ಮಾಡಿದ ಆರೋಪದ ಮೇಲೆ 129 ಭಾರತೀಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಅಮೆರಿಕದ ವಲಸೆ ಮತ್ತು ಸೀಮಾಸುಂಕ ಜಾರಿ(ಐಸಿಇ) ಅಧಿಕಾರಿಗಳು ತಿಳಿಸಿದ್ದಾರೆ.

ಗ್ರೇಟರ್ ಡೆಟ್ರಾಯಿಟ್ ಪ್ರದೇಶದಲ್ಲಿ ನೋಂದಣಿಯಾಗದ ನಕಲಿ ಫರ್ಮಿಂಗ್‍ಟನ್ ಯೂನಿವರ್ಸಿಟಿಯ 129 ವಿದ್ಯಾರ್ಥಿಗಳು ಮತ್ತು ಒಬ್ಬ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಇಷ್ಟು ಬೃಹತ್ ಪ್ರಮಾಣದಲ್ಲಿ ಭಾರತೀಯ ವಿದ್ಯಾರ್ಥಿಗಳು ಬಂಧನಕ್ಕೆ ಒಳಗಾಗಿರುವುದು ಅಮೆರಿಕದಲ್ಲಿನ ಭಾರತೀಯ ಸಮುದಾಯದಲ್ಲಿ ಅದರಲ್ಲೂ ವಿದ್ಯಾರ್ಥಿಗಳಲ್ಲಿ ಗೊಂದಲ ಮತ್ತು ಆತಂಕದ ವಾತಾವರಣ ಸೃಷ್ಟಿಸಿದೆ. ಈ ಹಗರಣದಿಂದಾಗಿ ಇನ್ನೂ 600ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತೊಂದರೆಯಲ್ಲಿ ಸಿಲುಕಿದ್ದಾರೆ.

ಈ ಹಿನ್ನೆಲೆಯಲ್ಲಿ ಬಾಧಿತರಾದ ವಿದ್ಯಾರ್ಥಿಗಳು ಮತ್ತು ಪೋಷಕರು/ಬಂಧುಮಿತ್ರರೊಂದಿಗೆ ಸಂಪರ್ಕ ಹೊಂದಲು ನೆರವಾಗುವಂತೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ 24/7 ಹಾಟ್‍ಲೈನ್ ಸಹಾಯವಾಣಿಯನ್ನು ಸಹ ಆರಂಭಿಸಿ ಇದಕ್ಕಾಗಿ ನೋಡಲ್ ಅಧಿಕಾರಿಯನ್ನೂ ಸಹ ನೇಮಿಸಿದೆ. 202-322-1190 ಮತ್ತು 202-340-2590 ಈ ಎರಡು ಸಂಖ್ಯೆಗಳನ್ನು ದಿನದ 24 ತಾಸುಗಳ ಕಾಲ ರಾಯಭಾರಿ ಕಚೇರಿ ಹಿರಿಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. cons3.washington@mea.gov.in ಈ ಸಂಪರ್ಕದ ಮೂಲಕವೂ ವಿದ್ಯಾರ್ಥಿಗಳ ಪೋಷಕರು ಮತ್ತು ಬಂಧುಮಿತ್ರರು ರಾಯಭಾರಿ ಕಚೇರಿಯನ್ನು ಯಾವುದೇ ಸಮಯದಲ್ಲಿ ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿದೆ.

ಗ್ರೇಟರ್ ಡೆಟ್ರಾಯಿಟ್ ಪ್ರದೇಶದಲ್ಲಿ ಫರ್ಮಿಂಗ್‍ಟನ್ ಯೂನಿವರ್ಸಿಟಿ ಅಧಿಕೃತವಾಗಿ ನೋಂದಣಿಯಾಗಿಲ್ಲ. ಈ ವಿಶ್ವವಿದ್ಯಾಲಯದ ಕಾನೂನುಬಾಹಿರ ಎಂದು ತಿಳಿದಿದ್ದರೂ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮತ್ತಷ್ಟು ಕಾಲ ಇರುವ ಉದ್ದೇಶದಿಂದ ಪೇ ಅಂಡ್ ಸ್ಟೇ ಯೂನಿವರ್ಸಿಟಿ ವೀಸಾ ಹಗರಣದಲ್ಲೂ ವಿದ್ಯಾರ್ಥಿಗಳು ಶಾಮೀಲಾಗಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಈ ವಿಶ್ವವಿದ್ಯಾಲಯಗಳ ಅಕ್ರಮ ಅವ್ಯವಹಾರಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಒಳನಾಡು ಭದ್ರತಾ ಇಲಾಖೆ(ಡಿಎಚ್‍ಎಸ್) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮ ವಲಸೆ ಹಗರಣವನ್ನು ಪತ್ತೆ ಮಾಡಿದ್ದಾರೆ. ಇದರಿಂದ ಭಾರತದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

Also read: ಎಳೆ ಕಂದಮ್ಮಗಳಿಗೆ ಹಚ್ಚುವ ಜಾನ್ಸನ್ ಬೇಬಿ ಪೌಡರ್-ನಿಂದ ಮಕ್ಕಳಿಗೆ ಭೇಕರ ಕ್ಯಾನ್ಸರ್ ಬರಬಹುದು ಎಂದು ಶ್ರೀಲಂಕಾದಲ್ಲಿ ಬ್ಯಾನ್ ಮಾಡಲಾಗಿದೆ.. ನಮ್ಮ ದೇಶದಲ್ಲೂ ಹೀಗೆ ಮಾಡಬೇಕಾ?