ಈಗ ಮತ್ತೊಬ್ಬ ಪೊಲೀಸ್ಗೆ ಧಮ್ಕಿ: ಹೆಬ್ಟಾಳ್ಕರ್ ವಿರುದ್ಧ ಆರೋಪ

0
3673

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಪೊಲೀಸರೂ ಸೇರಿದಂತೆ ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ, ಕಿರುಕುಳ ಹೆಚ್ಚಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಮತ್ತೂಂದು ಆಘಾತಕಾರಿ ಘಟನೆ ಬಹಿರಂಗಗೊಂಡಿದೆ. ಮರಳು ಸಾಗಣೆ ಲಾರಿ ವಶಪಡಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಭಾವಿ ಕಾಂಗ್ರೆಸ್ ನಾಯಕಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ ಅವರು ಬೆಳಗಾವಿ ಸಿಸಿಬಿ ಪೊಲೀಸ್ ಅಧಿಕಾರಿಗೆ ದೂರವಾಣಿ ಮೂಲಕ ಆವಾಜ್ ಹಾಕಿ ಧಮಕಿ ಒಡ್ಡಿದ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ. ಜುಲೈ 1ರಂದೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದೀಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.

ಈ ಬಗ್ಗೆ ಮಾಧ್ಯಮದಲ್ಲಿ ಭಾರೀ ಸುದ್ದಿಯಾಗುತ್ತಿದ್ದಂತೆ ಲಕ್ಷ್ಮೀ ಹೆಬ್ಟಾಳಕರ ಅವರು ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ. ಪಾಸ್ ಇದ್ದರೂ ತಮ್ಮ ಬೆಂಬಲಿಗರ ಲಾರಿಗಳನ್ನು ಹಿಡಿಯಲಾಗಿತ್ತು. ಇತರರ ಲಾರಿಗಳನ್ನು ತಪಾಸಣೆ ನಡೆಯದೆಯೇ ಬಿಡುಗಡೆ ಮಾಡಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಎಸ್‌ಐ ಉದ್ಧಟತನದಿಂದ ವರ್ತಿಸಿದರು. ಅದಕ್ಕಾಗಿ ಏರಿದ ದನಿಯಲ್ಲಿ ಮಾತನಾಡಬೇಕಾಯಿತು. ಅಷ್ಟಕ್ಕೂ ಈ ಘಟನೆಯಾಗಿ 15 ದಿನಗಳಾಗಿವೆ. ಇದರ ಆಡಿಯೋ ಈಗ ಬಹಿರಂಗವಾಗಿದೆ ಎಂದರೆ ಇದರ ಹಿಂದೆ ರಾಜಕೀಯ ದುರುದ್ದೇಶವಿರುವ ಅನುಮಾನಗಳು ಏಳುತ್ತವೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಅವರು ಹೇಳಿದ್ದಾರೆ.

ಮಾತಿನ ಚಕಮಕಿ: ಮೊನ್ನೆ ಜುಲೈ 1ರಂದು ರಾತ್ರಿ 10:30ಕ್ಕೆ ಬೆಳಗಾವಿಯ ಸಿಸಿಬಿ ಪಿಎಸ್‌ಐ ಉದ್ದಪ್ಪ ಕಟ್ಟೀಕಾರ ಅವರು ರಾಮದುರ್ಗದಿಂದ ಬೆಳಗಾವಿಗೆ ಬರುತ್ತಿದ್ದ 17 ಮರಳು ತುಂಬಿದ ಲಾರಿಗಳನ್ನು ಹಿಡಿದಿದ್ದರು. ಈ ಸಂಬಂಧ ಲಕ್ಷ್ಮೀ ಹೆಬ್ಟಾಳಕರ ಅವರು ಉದ್ದಪ್ಪ ಅವರಿಗೆ ದೂರವಾಣಿ ಕರೆ ಮಾಡಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಸುಮಾರು ನಾಲ್ಕು ನಿಮಿಷಗಳ ಕಾಲ ಏರಿದ ಧ್ವನಿಯಲ್ಲಿ ಈ ಸಂಭಾಷಣೆ ನಡೆದಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.

ಸಂಭಾಷಣೆ ವಿವರ:

ಹೆಬ್ಟಾಳಕರ: ಲಾರಿಗಳಿಗೆ ಪಾಸ್ ಇದ್ರೂ ಹೇಗೆ ಹಿಡಿದೀರಿ?
ಪಿಎಸ್‌ಐ: ಅಲ್ರೀ ನೀವು ಯಾರು ಮಾತನಾಡುವುದು? ನೀವು ಕಂಪ್ಲೇಟ್ ಕೊಟ್ಟಿದೀರಿ ಮಾಳಮಾರುತಿ ಸ್ಟೇಶನ್ದಲ್ಲಿ ಅಲ್ಲಿ ಹೋಗಿ ಮಾತನಾಡಿ?
ಹೆಬ್ಟಾಳಕರ: ನನಗೆ ಅದು ಗೊತ್ತಿಲ್ಲ. ಪಾಸ್ ಇದ್ದರೂ ಹೇಗೆ ಲಾರಿಗಳನ್ನು ಹಿಡಿದೀರಿ?
ಪಿಎಸ್‌ಐ: ನಮಗೆ ಯಾರೂ ಪಾಸ್ ತೋರಿಸಿಲ್ಲ, ನಮಗೆ ಡಿಸಿ ಆರ್ಡರ್ ಇದೆ. ಆ ಆರ್ಡರ್ ಮೇಲೆ ನಾನು ಸೀಜ್ ಮಾಡಿದ್ದೇನೆ. ನೀವು ಏನಿದ್ದರೂ ಡಿಸಿಗೆ ಕೇಳಿ. ಅವರು ಕ್ರಮ ಕೈಗೊಳ್ಳುತ್ತಾರೆ.
ಹೆಬ್ಟಾಳಕರ: ಒಬ್ಬ ಪಿಎಸ್‌ಐ ಆಗಿ ಈ ತರಹ ಮಾಡುತ್ತಿದ್ದೀರಿ ಎಂದರೆ ನಿಮ್ಮಂಥವರಿಂದಲೇ ನಮ್ಮ ಸರಕಾರಕ್ಕೆ ಕೆಟ್ಟು ಹೆಸರು ಬರುತ್ತಿದೆ.
ಪಿಎಸ್‌ಐ: ನೋಡ್ರಿ ಮೇಡಮ್ ನಮ್ಮ ಡ್ಯೂಟಿ ನಾವು ಮಾಡುತ್ತಿದ್ದೇವೆ. ಯಾರಿಗೂ ಕೆಟ್ಟ ಹೆಸರು ತರುವ ಉದ್ದೇಶ ನಮಗಿಲ್ಲ.
ಹೆಬ್ಟಾಳಕರ: ನಿಮ್ಮಂಥ ಕೆಲವೊಂದು ಆಫೀಸರ್ಗಳಿಂದಲೇ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ.
ಪಿಎಸ್‌ಐ: ಮೇಡಮ್ ರೀ, ನೀವು ತಪ್ಪು ತಿಳ್ಕೊಂಡಿದ್ದೀರಿ, ಬೇರೆ ಏನೂ ಕೆಟ್ಟ ಉದ್ದೇಶ ಇಲ್ಲ. ನಮ್ಮ ಡ್ಯೂಟಿ ನಾವು ಮಾಡುತ್ತಿದ್ದೇವೆ.
ಹೆಬ್ಟಾಳಕರ: ಇಲ್ಲ ನೀವು ಬಂದು ಭೇಟಿ ಆಗ್ರಿ. ನೀವು ಈಗ ಎಲ್ಲಿ ಅದೀರಿ?
ಪಿಎಸ್‌ಐ: ಯಾರ್ರೀ, ನಾವು ಯಾಕೆ ನಿಮ್ಮನ್ನು ಭೇಟಿ ಆಗಬೇಕು?
ಹೆಬ್ಟಾಳಕರ: ಅಂದ ಮೇಲೆ ಬೇಕಾದವರ ಮೇಲೆ ಓಣಿಯಲ್ಲಿ ಸಿಗುವವರ ಮೇಲೆ ಕೇಸ್ ಹಾಕುತ್ತಾ ಹೋಗುತ್ತೀರಾ ನೀವು?
ಪಿಎಸ್‌ಐ: ನೋಡ್ರಿ ಯಾರು ತಪ್ಪು ಮಾಡ್ತಾರೆ ಅವರ ಮೇಲೆ ಕೇಸ್ ಹಾಕೋದು ನಮ್ಮ ಡ್ನೂಟಿ. ನಿಮ್ಮದು ತಪ್ಪಿಲ್ಲ ಅಂದ್ರೆ ಪ್ರಶ್ನೆ ಮಾಡಿ.
ಹೆಬ್ಟಾಳಕರ: ಅಂದ್ರೆ ಕಾನೂನು ಕೈಯಲ್ಲಿ ಹಿಡಿದುಕೊಂಡು ಅಡ್ಡಾಡ್ತೀರಾ ನೀವು?
ಪಿಎಸ್‌ಐ: ಕಾನೂನು ನೋಡ್ರಿ ಯಾರ ಕೈಯಲ್ಲೂ ಇಲ್ಲ. ಕಾನೂನು ಪಾಲಿಸುವವರಿಗೆ ಅಷ್ಟೇ ಇದೆ ಅದು.
ಹೆಬ್ಟಾಳಕರ: ನಮಗೆ ಕಲಿಸಕ್ಕೆ ಬಂದಿದೀರಿ ಅಷ್ಟೇ.
ಪಿಎಸ್‌ಐ: ತಪ್ಪು ತಿಳಿದುಕೊಂಡಿದೀರಿ .
ಹೆಬ್ಟಾಳಕರ: ತಪ್ಪಿಲ್ಲ, ಏನಿಲ್ಲ, ಯಾರ ಕಡೆಯಿಂದ ಹೇಳಸಬೇಕೋ ಎಲ್ಲವನ್ನೂ ಹೇಳಿಸ್ತೀನಿ.
ಪಿಎಸ್‌ಐ: ಆಯ್ತು ನೀವು ಹೇಳಸ್ರಿ, ನಮ್ಮ ಕರ್ತವ್ಯ ನಾವು ಮಾಡುತ್ತೇವೆ.
ಹೆಬ್ಟಾಳಕರ: ಕರ್ತವ್ಯ ಏನು ಮಾಡಾಕತ್ತಿ¤ರಿ ಅನ್ನೋದು ಎಲ್ಲರಿಗೂ ಗೊತ್ತೈತೆ. ಪಾಸ್ ಇದ್ದವರ ಲಾರಿ ಹಿಡಿದಿದ್ದೀರಿ. ಏನ್ರೆ ಐತಿ ಅದಕ್ಕ ಸ್ವಲ್ಪಾದರೂ?
ಪಿಎಸ್‌ಐ: ಪಾಸ್ ಇದ್ದರೆ ತೋರಿಸಬೇಕು. ಆರ್ಡರ್ ಇದ್ದರೂ ಡಿಸಿ ಆರ್ಡರ್ ಪಾಲಿಸಬೇಕು. ಅದೆಲ್ಲ ಇಲ್ಲ.
ಹೆಬ್ಟಾಳಕರ: ನೋಡ್ರಿ ರೈಟಿಂಗ್ನಲ್ಲಿ (ಲಿಖೀತ) ನಿಮ್ಮ ಹತ್ತಿರ ಆದೇಶವಿದೆಯಾ?
ಪಿಎಸ್‌ಐ: ಅಲ್ರೀ ಮೇಡಮ್ ಓರಲ್(ಮೌಖಿಕ) ಆದೇಶ ಕೊಟ್ಟಿದ್ದಾರೆ.
ಹೆಬ್ಟಾಳಕರ: ಅಂದ್ರೆ 5627 ಯಾಕೆ ಬಿಟ್ರಿ?
ಪಿಎಸ್‌ಐ: ಅಲ್ರೀ ಓರಲ್(ಮೌಖಿಕ) ಇನ್ಸ್ಟ್ರಕ್ಷನ್ ಇದ್ರ ಮುಗದೋಯ್ತು.
ಹೆಬ್ಟಾಳಕರ: ಏನು ಓರಲ್ ಇನ್ಸ್ಟ್ರಕ್ಷನ್?
ಪಿಎಸ್‌ಐ: ಅದನ್ನು ಪ್ರೂಫ್ ತೋರಸ್ತೀನಿ..
ಹೆಬ್ಟಾಳಕರ: ಏನ್ ಮಾತಾಡ್ತೀರಿ ಅಂದ್ರ.
ಪಾಸ್ ಇದ್ದರೂ ಲಾರಿ ಹಿಡಿದಿದ್ರು

ಪಾಸ್ ಇದ್ದರೂ ನಮ್ಮವರ ಲಾರಿ ಹಿಡಿಯಲಾಗಿತ್ತು. ಇತರರ ಲಾರಿಗಳನ್ನು ತಪಾಸಣೆ ನಡೆಸದೆಯೇ ಬಿಡುಗಡೆ ಮಾಡಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಎಸ್‌ಐ ಉದ್ಧಟತನದಿಂದ ವರ್ತಿಸಿದರು. ಅದಕ್ಕಾಗಿ ಏರಿದ ದನಿಯಲ್ಲಿ ಮಾತನಾಡಬೇಕಾಯಿತು. ಇದಾಗಿ 15 ದಿನಗಳಾಗಿವೆ. ಈಗ ಆಡಿಯೋ ಬಹಿರಂಗವಾದುದರ ಹಿಂದೆ ರಾಜಕೀಯ ದುರುದ್ದೇಶವಿದೆ. ಈ ಬಗ್ಗೆ ತನಿಖೆಯಾಗಬೇಕು. – ಲಕ್ಷ್ಮೀ ಹೆಬ್ಟಾಳಕರ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ

Source: dailyhunt