29ಕ್ಕೆ ದೇಶದಾದ್ಯಂತ ಬ್ಯಾಂಕ್ ನೌಕರರ ಮುಷ್ಕರ

0
626

ಕಳೆದ ಅನೇಕ ದಿನಗಳಿಂದ ಬ್ಯಾಂಕ್ ನೌಕರರ ಮುಷ್ಕರ ಕಾವು ಪಡೆಯುತ್ತಲೇ ಇದೆ. ಕೇಂದ್ರ ಸರ್ಕಾರದ ಜನವಿರೋಧಿ ಬ್ಯಾಂಕಿಂಗ್ ನೀತಿ ಖಂಡಿಸಿ ಸರ್ಕಾರಿ ಮತ್ತು ಖಾಸಗಿ ವಲಯದ ಹತ್ತು ಲಕ್ಷಕ್ಕೂ ಹೆಚ್ಚು ಬ್ಯಾಂಕ್ ನೌಕರರು ಜುಲೈ 29ರಂದು ದೇಶದಾದ್ಯಂತ ಒಂದು ದಿನದ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ಚೆನೈನಲ್ಲಿ ಬುಧವಾರ ನಡೆದ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ(ಯುಎಫ್ ಬಿಯು) ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.ಯುಎಫ್ ಬಿಯು ಅಡಿಯಲ್ಲಿ ಬರುವ 9 ಬ್ಯಾಂಕ್ ನೌಕರರ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸಲಿವೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸೇರಿದಂತೆ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕುಗಳ ಖಾಸಗೀಕರಣ ಮತ್ತು ವಿಲೀನ ಕೈಬಿಡಬೇಕು. ಬ್ಯಾಂಕಿಂಗ್ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಖಾಸಗಿ ಬಂಡವಾಳ ಪ್ರಮಾಣ ಹೆಚ್ಚಿಸುವುದು ಸೇರಿದಂತೆ ಇನ್ನಿತರ ಹಲವು ಬೆಡಿಕೆಗಳನ್ನು ಮುಂದಿಟ್ಟುಕೊಂಡು ಈ ಮುಷ್ಕರ ನಡೆಸಲಾಗುತ್ತದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ತಿಳಿಸಿದೆ.

ಪ್ರಸ್ತುತ ಬೆಳವಣಿಗೆ ಗಮನಿಸುತ್ತಿದ್ದರೆ ಸದ್ಯಕ್ಕೆ ಬ್ಯಾಂಕ್ ಮುಷ್ಕರದ ಕಾವು ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.