3ನೇ ಟೆಸ್ಟ್‌ನಲ್ಲಿ ಬ್ರಿಟಿಷರನ್ನು ಹೊಡೆದುರಳಿದ ವಿರಾಟ್ ಪಡೆ

0
1129

ಮೊಹಾಲಿ: ಮೈಕೊಡವಿಕೊಂಡು ಎಲ್ಲಾ ವಿಭಾಗಗಳಲ್ಲೂ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ ಒಂದೂವರೆ ದಿನದಾಟ ಬಾಕಿ ಇರುವಾಗಲೇ 8 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ೫ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0ಯಿಂದ ಮೇಲುಗೈ ಸಾಧಿಸಿದೆ. ಇದರಿಂದ ಪ್ರವಾಸಿ ತಂಡದ ಸರಣಿ ಗೆಲುವಿನ ಆಸೆ ಕಮರಿತು. ಆದರೆ ಉಳಿದೆರಡು ಪಂದ್ಯ ಗೆದ್ದರೆ ಸರಣಿಯಲ್ಲಿ ಸಮಬಲ ಸಾಧಿಸುವ ಅವಕಾಶ ಇದ್ದರೂ ಈಗಿನ ಪರಿಸ್ಥಿತಿ ಗಮನಿಸಿದರೆ ಅದು ಕಷ್ಟಸಾಧ್ಯ.

ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ 78 ರನ್‌ಗೆ 4 ವಿಕೆಟ್‌ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್, 236 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಭಾರತ ಗೆಲ್ಲಲು 103 ರನ್‌ಗಳ ಸಾಧಾರಣ ಗುರಿ ಪಡೆಯಿತು.

ಭಾರತ 2 ವಿಕೆಟ್ ಕಳೆದುಕೊಂಡು ಚಹಾ ವಿರಾಮದ ವೇಳೆಗೆ ಗೆಲುವಿನ ಔಪಚಾರಿಕತೆ ಪೂರೈಸಿತು. ೮ ವರ್ಷಗಳ ನಂತರ ಟೆಸ್ಟ್‌ಗೆ ಮರಳಿದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಎರಡನೇ ಇನಿಂಗ್ಸ್ ನಲ್ಲಿ ಅಜೇಯ (67) ಅರ್ಧಶತಕ ಸಿಡಿಸುವ ಮೂಲಕ ಅವಿಸ್ಮರಣೀಯವಾಗಿಸಿಕೊಂಡರು. ಸರಣಿಯ ನಾಲ್ಕನೇ ಪಂದ್ಯ ಮುಂಬೈನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ 283 ಮತ್ತು 2ನೇ ಇನಿಂಗ್ಸ್ 236

ಭಾರತ 417 ಮತ್ತು 2ನೇ ಇನಿಂಗ್ಸ್ 2 ವಿಕೆಟ್ ಗೆ 104.