35 “ಗಂಡಂದಿರ’ ಬಲಿಪಡೆದ ರಕ್ಕಸ ರಾಷ್ಟ್ರೀಯ ಹೆದ್ದಾರಿ!

0
2532

ಪೆದ್ದಕುಂಟ (ತೆಲಂಗಾಣ): ಮಾತೆತ್ತಿದರೆ ಎಕ್ಸ್‌ಪ್ರೆಸ್ ಹೈವೇ ನಿರ್ಮಿಸುತ್ತೇವೆ ಎಂದು ಭಾಷಣ ಬಿಗಿಯುವ ಸರ್ಕಾರಗಳು, ಹೆದ್ದಾರಿ ನಿರ್ಮಾಣದಿಂದ ಅಕ್ಕಪಕ್ಕದ ಗ್ರಾಮದ ಊರುಗಳ ಜನರ ಸುರಕ್ಷತೆಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಕ್ತ ರೀತಿಯಲ್ಲಿ ಚಿಂತಿಸುವುದೇ ಇಲ್ಲ. ಇದರ ಫಲವೇ ತೆಲಂಗಾಣದ ಮೆಹಬೂಬನಗರ ಬಳಿಯ ಪೆದ್ದುಕುಂಟ ಗ್ರಾಮ.

ಈ ಗ್ರಾಮದಲ್ಲಿ ೨೦೦೬ರಲ್ಲಿ ರಾಷ್ಟ್ರೀಯ ಹೆದ್ದಾರಿ ೪೪, ಎಕ್ಸ್‌ಪ್ರೆಸ್ ಹೆದ್ದಾರಿಯಾಗಿ ಮಾರ್ಪಾಡಾಗಿದ್ದು, ಅಂದಿನಿಂದ, ಈ ಊರಿನ ಪಾಲಿಗೆ ಇದು ಯಮದೂತನಾಗಿ ಪರಿಣಮಿಸಿದೆ. ಈ ಇಡೀ ಊರಿನ ೩೫ ಕುಟುಂಬಗಳಲ್ಲಿ ಇಂದು ಉಳಿದಿರುವುದು ಕೇವಲ ಒಬ್ಬ ಪುರುಷ ವಯಸ್ಕ ವ್ಯಕ್ತಿ ಮಾತ್ರ. ಬಾಕಿ ಎಲ್ಲ ವಿಧವೆಯರು, ಮಕ್ಕಳು!
೯ ವರ್ಷದಲ್ಲಿ ಪೆದ್ದುಕುಂಟದ ೩೫ ಪುರುಷರು ರಸ್ತೆ ದಾಟುವಾಗ ಆಗಮಿಸುವ ವೇಗದ ವಾಹನಗಳಿಗೆ ಬಲಿಯಾಗಿದ್ದು, ಇದರಿಂದ ಗ್ರಾಮದ ಬಹುತೇಕ ವಿವಾಹಿತೆಯರು ವಿಧವೆಯರಾಗಿ ಮಾರ್ಪಾ ಡಾಗಿದ್ದಾರೆ. ಇದರಿಂದಾಗಿ ಪೆದ್ದುಕುಂಟಕ್ಕೆ ವಿಧವೆಯರ ಗ್ರಾಮ ಎಂಬ ಶಾಪ ಈಗ ತಗಲಿಕೊಂಡಿದೆ.

ಪೆದ್ದಕುಂಟವು ಲಂಬಾಣಿ ತಾಂಡಾ ಆಗಿದ್ದು ನಂದಿಗಾಮ ಎಂಬ ಗ್ರಾಮದ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತದೆ. ಗ್ರಾಮದ ಯಾವುದಾದರೂ ಸರ್ಕಾರಿ ಕೆಲಸವಿದ್ದರೆ ಹೆದ್ದಾರಿಯ ಆಚೆಗಿರುವ ನಂದಿಗಾಮಕ್ಕೆ ಹೋಗಬೇಕಾಗುತ್ತದೆ. ಆದರೆ ಎಷ್ಟೇ ಮನವಿಯ ಬಳಿಕವೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಊರಿನ ಜನರಿಗೆ ಹೆದ್ದಾರಿ ದಾಟಲು ಸ್ಕೈವಾಕ್ ನಿರ್ಮಿಸಿಲ್ಲ. ತತ್ಪರಿಣಾಮ, ರಸ್ತೆ ದಾಟಿಕೊಂಡು ನಂದಿಗಾಮಕ್ಕೆ ಹೋಗುವಾಗ ಸುಮಾರು ೩೫ ಪುರುಷರು ೯ ವರ್ಷದಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.

ಕಾಮುಕರ ಕಾಟ: ಇಷ್ಟೊಂದು ಪುರುಷರು ಸಾವನ್ನಪ್ಪಿದ ಬಳಿಕ ಅನೇಕ ಮಹಿಳೆಯರು ಸಣ್ಣ ವಯಸ್ಸಿನಲ್ಲೇ ಈಗ ವಿಧವೆ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಕೂಡುವಂತಾಗಿದೆ.
ಇದರಿಂದಾಗಿ ಕಾಮುಕರ ಕಾಟವೂ ಅಧಿಕವಾಗತೊಡಗಿದೆ. ತಮ್ಮ ದೈಹಿಕ ವಾಂಛೆ ತೀರಿಸಿಕೊಳ್ಳಲು ಅಕ್ಕಪಕ್ಕದ ಗ್ರಾಮದ ಕೆಲ ಪುರುಷರು ವಿಧವೆಯರ ಕದ ತಟ್ಟಿ ಭಯ ಹುಟ್ಟಿಸುತ್ತಿದ್ದಾರೆ. ಇಂಥ ಕಾಮುಕರ ಕಾಟಕ್ಕೆ ಬೆಚ್ಚಿ ಅನೇಕ ವಿಧವೆಯರು ತವರುಮನೆ ಸೇರಿಕೊಂಡಿದ್ದಾರೆ.

ಈ ವಿಧವೆಯರಿಗೆ ಈಗ ವಿಧವಾ ವೇತನ ಬರುತ್ತಿದ್ದು, ವಿಚಿತ್ರವೆಂದರೆ ಇದನ್ನು ಪಡೆಯಲೂ ಇವರು ಹೈವೇ ದಾಟಿ ನಂದಿಗಾಮದಲ್ಲಿರುವ ಬ್ಯಾಂಕಿಗೇ ಹೋಗಬೇಕಿದೆ.