ಸರ್ಕಾರಿ ನೌಕರರ ವೇತನದಲ್ಲಿ ಬಾರಿ ಏರಿಕೆ, “ಸರ್ಕಾರದ ಕೆಲಸ ದೇವರ ಕೆಲಸ ಅಂತ ಬಹುಷಃ ಇದಕ್ಕೆ ಅನ್ನುತ್ತಾರೆ ಏನೋ”..!!

0
1546

ಚುನಾವಣೆ ದಿನಗಳು ಹತ್ತಿರವಾಗುತ್ತಿದಂತೆ, ವಿವಿಧ ರಾಜಕೀಯ ಪಕ್ಷಗಳು ಜನರಿಗೆ ಹತ್ತು ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದ್ದಾರೆ. ಈ ಬಾರಿಯ ರಾಜ್ಯ ಬಜೆಟ್-ನಲ್ಲಿ, ಎಲ್ಲಾ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.30 ರಷ್ಟು ವೇತನ ಹೆಚ್ಚಿಸಬೇಕು ಎಂದು 6 ನೇ ವೇತನ ಆಯೋಗ ಶಿಫಾರಸು ಮಾಡಿದೆ.

ಫೆ.15 ರಂದು ಘೋಷಿಸಲಿರುವ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೇತನ ಹೆಚ್ಚಳದ ಸಿಹಿ ಸುದ್ದಿಯನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 6.2 ಲಕ್ಷ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮತ್ತು ಪಿಂಚಣಿದಾರರಿಗೂ ಸೌಲಭ್ಯ ಹಾಗು ಬ್ಯಾಂಕ್ ಗಳಂತೆ ಆಲ್ಟರನೇಟಿವ್ ಶನಿವಾರದಂದು ಸಹ ಸರ್ಕಾರಿ ನೌಕರರಿಗೆ ರಜೆ ನೀಡುವ ಬಗ್ಗೆ ಚಿಂತನೆ ನಡೆಸಿದೆ. ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್‍ಮೂರ್ತಿ ಅವರ ವರದಿಯಂತೆ, ಶೇ.30 ರಷ್ಟು ವೇತನ ಪರಿಷ್ಕರಣೆಯಾದರೆ ಡಿ ಗ್ರೂಪ್ ನೌಕರರ ಆರಂಭಿಕ ಮೂಲ ವೇತನ 9600 ರಿಂದ 17 ಸಾವಿರ ರೂ.ಗೆ ಹೆಚ್ಚಳವಾಗಲಿದೆ. ಅದೇ ರೀತಿ ಇತರೆ ಗ್ರೂಪ್ ನೌಕರರ ವೇತನದಲ್ಲೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ.

ಈ ವೇತನ ನೀತಿ ಸಂಪೂರ್ಣವಾಗಿ ಜಾರಿಯಾದರೆ, ರಾಜ್ಯ ಸರ್ಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವ 5.20 ಲಕ್ಷ ನೌಕರರಿಗೆ 5.73 ಲಕ್ಷ ಪಿಂಚಣಿದಾರರಿಗೆ, 70 ಸಾವಿರ ಅನುದಾನಿತ ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳು ಸೇರಿ ಒಟ್ಟು 12 ಲಕ್ಷ ಮಂದಿಗೆ ವೇತನ ಪರಿಷ್ಕರಣೆಯ ಲಾಭವಾಗಲಿದೆ. ಆದರೆ, ಪ್ರತಿ ವರ್ಷ ಇದರಿಂದ ಬೊಕ್ಕಸಕ್ಕೆ 10,508 ಕೋಟಿ ರೂ. ಹೊರೆಯಾಗಲಿದೆ. 6 ನೇ ವೇತನ ಆಯೋಗ ವರದಿ ಜಾರಿಯಾದರೆ ಕನಿಷ್ಠ ವೇತನವು 17 ಸಾವಿರ ರೂ. ಮತ್ತು ಗರಿಷ್ಠ ವೇತನ 1,50,600.ರೂ ಆಗಲಿದೆ ಇದರ ಜೊತೆ ಭತ್ಯೆಗಳು ಒಳಗೊಂಡಿರುತ್ತವೆ. ಕನಿಷ್ಠ ಪಿಂಚಣಿ ತಿಂಗಳಿಗೆ 8500.ರೂ. ಮತ್ತು ಗರಿಷ್ಠ 75,300.ರೂ, ಕುಟುಂಬ ಪಿಂಚಣಿ ಗರಿಷ್ಠ ಮಿತಿ ತಿಂಗಳಿಗೆ 45,180 ಮತ್ತು ತುಟ್ಟಿ ಭತ್ಯೆಯನ್ನು ಒಳಗೊಂಡಿದೆ.

ನಿವೃತ್ತಿಯ ವಯಸಿನಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ 60 ವರ್ಷವೇ ಇರುತ್ತದೆ. ಸ್ವ ಇಚ್ಛಾ ನಿವೃತ್ತಿಗೆ ಅವಶ್ಯವಿರುವ ಕನಿಷ್ಠ ಸೇವಾ ಅವಧಿಯನ್ನು 15 ವರ್ಷಗಳ ಬದಲಾಗಿ 10 ವರ್ಷಗಳಿಗೆ ಇಳಿಸಲು ಪೂರ್ಣ ಪ್ರಮಾಣದ ಪಿಂಚಣಿ ಪಡೆಯಲು ಈಗಿರುವ 33 ವರ್ಷಗಳ ಸೇವಾ ಅರ್ಹತೆಯನ್ನು 30 ವರ್ಷಗಳಿಗೆ ಇಳಿಸಲಿದೆ. ಮನೆ ಬಾಡಿಗೆ ಭತ್ಯೆ ಶೇ. 30, 20, 10 ರ ಬದಲಾಗಿ ಪರಿಷ್ಕತ ವೇತನದಲ್ಲಿ ಶೇ. 24, 16, 08 ರವರೆಗೆ ಪರಿಷ್ಕರಿಸಲು ಶಿಫಾರಸ್ಸು ಮಾಡಲಾಗಿದ್ದು, ಇದರಿಂದ ಶೇ. 40 ರಷ್ಟು ಭತ್ಯೆ ಹೆಚ್ಚಲಿದೆ. ಮರಣ ಮತ್ತು ನಿವೃತ್ತಿ ಉಪದಾನದ ಗರಿಷ್ಠ ಮಿತಿಯನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಲಿದೆ.

ಪಿಂಚಣಿಯಲ್ಲಿ ಬಾರಿ ಏರಿಕೆ ಮಾಡಲು ಶಿಫಾರಸ್ಸು ಮಾಡಲಾಗಿದ್ದು 80 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ, 80 ರಿಂದ 85 ವರ್ಷದವರಿಗೆ ಶೇ. 20 ರಷ್ಟು, 85 ರಿಂದ 90 ವರ್ಷದವರಿಗೆ ಶೇ. 30 ರಷ್ಟು, 95 ವರ್ಷದೊಳಗಿನವರಿಗೆ ಶೇ.40 ರಷ್ಟು 95 ರಿಂದ 100 ವರ್ಷದವರಿಗೆ ಶೇ. 50 ರಷ್ಟು ಮತ್ತು 100 ವರ್ಷ ಮೇಲ್ಪಟ್ಟವರಿಗೆ ಶೇ. 100 ರಷ್ಟು ಹೆಚ್ಚಲಿದೆ.

ಒಟ್ಟಿನಲ್ಲಿ 6 ನೇ ವೇತನ ಆಯೋಗ ನೀಡಿದ ವರದಿ ಸಂಪೂರ್ಣವಾಗಿ ಜಾರಿಯಾದರೆ, ಸರ್ಕಾರಿ ನೌಕರರಿಗೆ ಹಬ್ಬವೋ ಹಬ್ಬ…!!