ಶುಕ್ರವಾರ 8 ಕನ್ನಡ ಸಿನಿಮಾಗಳ ಬಿಡುಗಡೆ!

0
959

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ವರ್ಷವೊಂದಕ್ಕೆ 120ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಆ ಪೈಕಿ ಕೆಲ ವಾರಗಳಂದು ನಾಲ್ಕರಿಂದ ಐದು ಚಿತ್ರಗಳು ಬಿಡುಗಡೆಯಾದ ಉದಾಹರಣೆಗಳಿವೆ. ಆದರೆ 2016ರಲ್ಲಿ ಒಂದು ವಾರಕ್ಕೆ ಗರಿಷ್ಠ ಬಿಡುಗಡೆಯಾಗಿದ್ದು 7 ಚಿತ್ರಗಳು. ಈಗ ಆ ಲೆಕ್ಕವನ್ನು ಮುರಿದು, 8 ಚಿತ್ರಗಳು ಬಿಡುಗಡೆಯಾಗುತ್ತಿರುವುದು ವಿಶೇಷ.

ಕನ್ನಡ ಚಿತ್ರರಂಗದ ಮಟ್ಟಿಗೆ ಸದ್ಯ ‘ಸ್ವರ್ಣ ಯುಗ’ ನಡೆಯುತ್ತಿರುವಂತಿದೆ. ಸಂಖ್ಯಾ ಬಲದ ಲೆಕ್ಕಾಚಾರದಲ್ಲಿ ನೋಡುವುದಾದರೆ ಇದು ಸತ್ಯ. ಪ್ರತಿ ವಾರ ನಾಲ್ಕು ಐದು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕಳೆದ ಶುಕ್ರವಾರ (ಆಗಸ್ಟ್ 26) ವಾರ ಏಳು ಸಿನಿಮಾ ಬಿಡುಗಡೆ ಆಗಿದ್ದವು. ಅದು ಅಲ್ಲಿವರೆಗಿನ ದಾಖಲೆ. ಆದರೆ ಆ ದಾಖಲೆಯನ್ನು ಮೀರುವ ಸಂಖ್ಯೆ ಈ ವಾರದ್ದು. ಈ ಶುಕ್ರವಾರ (ಸೆಪ್ಟೆಂಬರ್ 02) ಎಂಟು ಚಿತ್ರಗಳು ತೆರೆಗೆ ಬರುತ್ತಿವೆ. ಇದು ಕನ್ನಡ ಚಿತ್ರರಂಗದ ಸಾರ್ವಕಾಲಿಕ ದಾಖಲೆ.

‘ನೀರ್ ದೋಸೆ’, ‘ಕೆಂಪಮ್ಮನ ಕೋರ್ಟ್ ಕೇಸ್’, ‘ಜಿಲ್ ಜಿಲ್’, ‘ಅವಧಿ’, ‘ಸೆಲ್ಫಿ’, ‘ಬಬ್ಲುಷ’, ‘ಪ್ರೇಮಗೀಮ ಜಾನೆದೊ’, ‘ಸಿಕ್ಕಾಪಟ್ಟೆ ಇಷ್ಟಪಟ್ಟೆ’ ಈ ವಾರ ತೆರೆಗೆ ಬರುತ್ತಿರುವ ಚಿತ್ರಗಳು. ಇದರಲ್ಲಿ ಮೂರ್ನಾಲ್ಕು ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ‘ನೀರ್ ದೋಸೆ’ ಹೆಚ್ಚು ಕುತೂಹಲ ಹುಟ್ಟಿಸಿದ ಚಿತ್ರ. ಉಳಿದಂತೆ ಯಾವ ಚಿತ್ರಗಳೂ ಅಷ್ಟಾಗಿ ಆಸಕ್ತಿ ಕೆರಳಿಸಿದವುಗಳಲ್ಲ. ಕೆಲವಂತೂ ಪ್ರಚಾರವನ್ನೂ ಮಾಡದೆ ಅಭಿಮಾನಿಗಳನ್ನು ತಲುಪುವಲ್ಲೂ ಕುಂಟುತ್ತಿವೆ. ಇನ್ನು ಕೆಲವು ಮಲ್ಟಿಪ್ಲೆಕ್ಸ್‌ಗಳನ್ನೇ ನಂಬಿಕೊಂಡ ಚಿತ್ರಗಳು.

ನೀರ್‌ ದೋಸೆ

‘ನೀರ್‌ದೋಸೆ’ ವಿಜಯಪ್ರಸಾದ್ ನಿರ್ದೇಶನದ ಚಿತ್ರ. ನವರಸ ನಾಯಕ ಜಗ್ಗೇಶ್, ಹರಿಪ್ರಿಯ, ದತ್ತಣ್ಣ, ಸುಮನ್ ರಂಗನಾಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಸುಗುಣ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿರುವ ಚಿತ್ರಕ್ಕೆ ಸುರೇಶ್ ಅರಸ್ ಸಂಕಲನವಿದೆ.

ಜಿಲ್ ಜಿಲ್

ಯುವ ನಿರ್ದೇಶಕ ಮಧು ಆ್ಯಕ್ಷನ್ ಕಟ್ ಜತೆಗೆ, ಸಂಗೀತವನ್ನೂ ನೀಡಿರುವ ಚಿತ್ರ ‘ಜಿಲ್‌ ಜಿಲ್‌’.  ಧನಂಜಯ್ ಮತ್ತು ಪೂವಿಶಾ ಈ ಚಿತ್ರದ ನಾಯಕ– ನಾಯಕಿ. ವೆಂಕಟೇಶ್ ಪ್ರಸಾದ್ ಬೆಳಗುಲಿ ನಿರ್ಮಾಪಕ. ರವಿಕುಮಾರ್ ಬ್ಯಾಡರಹಳ್ಳಿ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ ಹಾಗೂ ಹರಿಕೃಷ್ಣ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

ಅವಧಿ

ಸಾಯಿಕಿರಣ್ ಮುಕ್ಕಮಾಲಾ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಿಸಿ, ನಿರ್ದೇಶಿರುವ ಚಿತ್ರ ‘ಅವಧಿ’. ಸುರೇಶ್ ಗೊಂಟ್ಲ ಛಾಯಾಗ್ರಹಣ, ಸಾಬು ವರ್ಗಿಸ್ ಸಂಗೀತ, ಅರಸು ಅಂತಾರೆ ಸಾಹಿತ್ಯ, ಕೆ. ರಮೇಶ್ ಸಂಕಲನವಿದೆ. ತಾರಬಳಗದಲ್ಲಿ ರಂಜಿತ್, ಅರ್ಚನಾ, ರಮೇಶ್ ಭಟ್, ಮಂಜುನಾಥ್, ಜೈಜಗದೀಶ್,  ಮುಂತಾದವರು ಚಿತ್ರದಲ್ಲಿದ್ದಾರೆ.

 ಕೆಂಪಮ್ಮನ ಕೋರ್ಟ್ ಕೇಸ್

‘ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ಚಂದ್ರಶೇಖರ್ ‘ಕೆಂಪಮ್ಮನ ಕೋರ್ಟ್ ಕೇಸು’ ನಿರ್ದೇಶಕ. ಚಿತ್ರದ ಕಥೆ  ಬರೆದಿರುವ ಸುಂದರ್ ರಾಜ್‌, ಬಂಡವಾಳವನ್ನೂ ಹಾಕಿದ್ದಾರೆ. ಬಿದರಳ್ಳಿ ವಾಸು ಅವರ ಸಂಭಾಷಣೆ ಬರೆದಿದ್ದಾರೆ. ರಾಜ್ ರುಮಾಲಿ ಅವರ ಛಾಯಾಗ್ರಹಣ ಮತ್ತು ಶ್ರೀಧರ್ ಸಂಭ್ರಮ್   ಸಂಗೀತ ಚಿತ್ರಕ್ಕಿದೆ.  ಕೆಂಪಮ್ಮನಾಗಿ ರಾಧ ರಾಮಚಂದ್ರ, ಸಿದ್ಧಾರ್ತ್್, ವಿಶ್ವೇಶ್ವರ ಗುತಾಲ್, ಶ್ರೀನಾಥ್, ಜೈ ಜಗದೀಶ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಬಬ್ಲುಷ

ಹಿರಿಯ ಚಿತ್ರ ಸಾಹಿತಿ ಸಿ.ವಿ. ಶಿವಶಂಕರ್ ನಿರ್ಮಿಸಿರುವ, ವೆಂಕಟ್ ಭಾರದ್ವಾಜ್ ನಿರ್ದೇಶನ ಚಿತ್ರ ‘ಬಬ್ಲುಷಾ’. ಸನ್ನಿ ಮಾದವನ್ ಅವರ ಸಂಗೀತ, ವಿಶ್ವಜಿತ್ ಬಿ.ರಾವ್ ನಿರ್ದೇಶನ ಚಿತ್ರಕ್ಕಿದೆ. ಹರ್ಷಾರ್ಜುನ, ಮಣಿ ಶೆಟ್ಟಿ, ಸಿಂಚನ, ಮೃದುಲ ಭಾಸ್ಕರ್, ಶೋಭರಾಜ್, ಅವಿನಾಶ್, ಶ್ರೀಕಾಂತ್ ಹೆಬ್ಳೀಕರ್, ಬೇಬಿ ಶಮಾ, ಶಾಂತ ನಾಗೇಂದ್ರ ಸ್ವಾಮಿ ತಾರಾಗಣದಲ್ಲಿ ಇದ್ದಾರೆ.

ಸೆಲ್ಫಿ

ಸಾಫ್ಟ್‌ವೇರ್‌ ಉದ್ಯೋಗಿಗಳೇ ನಿರ್ಮಿಸಿರುವ ಚಿತ್ರ ‘ಸೆಲ್ಫಿ’. ಫಣಿ ಫಣಿ ಕೊಟಪ್ರೊಲು ನಿರ್ದೇಶನದ ಈ ಚಿತ್ರಕ್ಕೆ  ನವೀನ್ ಕೈಪು ಬಂಡವಾಳ ಹಾಕಿದ್ದಾರೆ. ಕಥೆಯೂ ಅವರದೆ. ಅರ್ಜುನ್ ರಾಕ್ ಸಂಗೀತ ಸಂಗೀತ ನಿರ್ದೇಶಕ.  ತ್ರಿಲೋಕ್, ದೀಪಾಗೌಡ, ಪೂಜಾ, ಕೃಪಾಲನಿ ಇತರರು ತಾರಾಗಣದಲ್ಲಿದ್ದಾರೆ.

ಪ್ರೇಮಗೀಮ ಜಾನೆದೊ

‘ಪ್ರೇಮಗೀಮ ಜಾನೆದೊ’ ಕೆಂಜ ಚೇತನ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿರುವ ಚಿತ್ರ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ರುದ್ರಮುನಿ ಛಾಯಾಗ್ರಹಣ ಹಾಗೂ  ವಿಶ್ವ ಅವರ ಸಂಕಲನ ಚಿತ್ರಕ್ಕಿದೆ. ಗೌತಮ್, ಶ್ರುತಿ ತಿಮ್ಮಯ್ಯ, ಪಲ್ಲವಿ ಗೌಡ, ಶೀತಲ್ ಶೆಟ್ಟಿ, ರಮೇಶ್ ಭಟ್, ಪ್ರಶಾಂತ್ ಸಿದ್ದಿ ಮುಂತಾದವರು ಚಿತ್ರದಲ್ಲಿದ್ದಾರೆ.

ಸಿಕ್ಕಾಪಟ್ಟೆ ಇಷ್ಟಪಟ್ಟೆ

ಹರಿರಾಜನ್ ನಿರ್ದೇಶನದ ‘ಸಿಕ್ಕಾಪಟ್ಟೆ ಇಷ್ಟಪಟ್ಟೆ’ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಜೆ.ಜೆ. ಕೃಷ್ಣ ಛಾಯಾಗ್ರಹಣ, ಕಾರ್ತಿಕ್ ಭೂಪತಿರಾಜ ಸಂಗೀತ, ತಿಭುವನ್– ಪ್ರಸಾದ್ ನೃತ್ಯ ಚಿತ್ರಕ್ಕಿದೆ. ನಮಿತಾ, ಸಾವಂತ್, ಕಿರಣ್ ರಾಥೋಡ್, ಮೇಘನಾ ನಾಯ್ಡು, ಅನೀಶ್, ಮನೀಶ್, ಕೀರ್ತಿ ಚಾವ್ಲಾ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.