ಮದುವೆ ನೆಪದಲ್ಲಿ ನಿಖಿಲ್ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ? 70 ಸಾವಿರ ಮತದಾರರ ಮನೆಗಳಿಗೆ ರೇಷ್ಮೆ ಸೀರೆ, ಪಂಚೆ, ಶರ್ಟ್​ ನೀಡಿ ಎಚ್​ಡಿಕೆ ಆಹ್ವಾನ.!

0
202

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಪುತ್ರ ನಿಖಿಲ್ ಮದುವೆ ದಿನಾಂಕ ಪಿಕ್ಸ್ ಆಗಿದ್ದು, ರಾಮನಗರದ ಜಾನಪದ ಲೋಕದ ಬಳಿ ನಡೆಯಲಿದೆ. ಈಗಾಗಲೇ ಮದುವೆಗೆ ಸಾಕಷ್ಟು ತಯಾರಿ ಕೂಡ ನಡೆಯುತ್ತಿದೆ. ಇದರಲ್ಲಿ ಎರಡು ರೀತಿಯ ಉದ್ದೇಶವನ್ನು ಇಟ್ಟುಕೊಂಡು ರಾಮನಗರದಲ್ಲಿ ಮದುವೆ ಮಾಡಲಿರುವ ಎಚ್.ಡಿ.ಕೆ. ಕುಟುಂಬ ಮದುವೆ ನೆಪದಲ್ಲಿ ಎಚ್​ಡಿ ಕುಮಾರಸ್ವಾಮಿ ಸದ್ದಿಲ್ಲದಂತೆ ಪಕ್ಷವನ್ನು ಪ್ರಬಲಗೊಳಿಸಲು ಮುಂದಾಗಿದ್ದಾರೆ. ನಿಖಿಲ್​ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಕೂಡ ಮದುವೆ ಮೂಲಕ ರಾಮನಗರ ಕ್ಷೇತ್ರದಿಂದ ಪುನರ್​ ಆರಂಭವಾಗಲಿದೆ ಎಂದು ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಹೌದು ರಾಮನಗರದಲ್ಲಿ ನಿಖಿಲ್ ಮದುವೆ ಮಾಡಿ ಆ ಜನರ ಋಣ ತೀರಿಸಬೇಕು ಎಂಬುದು ಕುಮಾರಸ್ವಾಮಿ ಆಶಯ. ಈಗಾಗಲೇ ಹಲವು ಗಣ್ಯರ ಮನೆಗೆ ನಿಖಿಲ್ ಮದುವೆಯ ಆಮಂತ್ರಣ ತಲುಪಿದೆ. ಈಗ ರಾಮನಗರ-ಚನ್ನಪಟ್ಟಣದ ಮನೆ ಮನೆಗೂ ನಿಖಿಲ್ ಮದುವೆ ಪ್ರಯುಕ್ತ ಶರ್ಟ್-ಪಂಚೆ-ಶಲ್ಯ, ಸೀರೆಯನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಅಲ್ಲಿನ ಪ್ರತಿ ಮನೆಗೂ ನಿಖಿಲ್ ಮದುವೆ ಆಮಂತ್ರಣ ತಲುಪಿಸಿ ಎಂದು ಎಚ್‌ಡಿಕೆ ಜೆಡಿಎಸ್ ಕಾರ್ಯಕರ್ತರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ನಿಖಿಲ್​ ಕುಮಾರಸ್ವಾಮಿ ವಿವಾಹದ ಹೆಸರಲ್ಲಿ ಜಿಲ್ಲೆಯ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿರುವ ಮಾಜಿ ಸಿಎಂ, ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆ ಜೊತೆಗೆ ಕ್ಷೇತ್ರದ ಜನರಿಗೆ ಸುದೀರ್ಘ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ರಾಮನಗರದಲ್ಲೇ ಯಾಕೆ ಮದುವೆ ಮಾಡುತ್ತಿರುವ ಬಗ್ಗೆ ವಿವರಣೆ ನೀಡಿದ್ದಾರೆ.

ಲಗ್ನ ಪತ್ರಿಕೆ ಜೊತೆ ಮತದಾರರಿಗೆ ಭರ್ಜರಿ ಗಿಫ್ಟ್​ ನೀಡಲು ಮುಂದಾಗಿದ್ದಾರೆ. ತಮ್ಮ ಕ್ಷೇತ್ರವಾದ ಚನ್ನಪಟ್ಟಣ ಹಾಗೂ ಪತ್ನಿ ಅನಿತಾ ಅವರ ಕ್ಷೇತ್ರವಾದ ರಾಮನಗರ ಮತದಾರರಿಗೆ ಈ ಉಡುಗೊರೆ ನೀಡಲು ಅವರು ನಿರ್ಧರಿಸಿದ್ದಾರೆ. ಈ ಜಿಲ್ಲೆಯಲ್ಲಿ 60 ಸಾವಿರ ಮನೆ, ಚನ್ನಪಟ್ಟಣದಲ್ಲಿ 70 ಸಾವಿರ ಮನೆಗಳಿವೆ ಎಂಬ ಮಾಹಿತಿ ಕುಮಾರಸ್ವಾಮಿ ಕುಟುಂಬಕ್ಕೆ ತಲುಪಿದೆ. ಒಟ್ಟಾರೆಯಾಗಿ ಒಂದು ಮನೆಗೆ ನಿಖಿಲ್ ವಿವಾಹದ ಪ್ರಯುಕ್ತ ನೀಡುವ ಉಡುಗೊರೆಯ ಮೊತ್ತ 3 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ನಿಖಿಲ್-ರೇವತಿ ಕಲ್ಯಾಣಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನಸಮೂಹ ಸೇರೋದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಮದುವೆ ಊಟ ಕೂಡ ಭರ್ಜರಿಯಾಗಿರಲಿದೆ. ಒಟ್ಟಾರೆಯಾಗಿ 1000 ಅಡುಗೆ ಸಹಾಯಕರು ಈ ಮದುವೆಯಲ್ಲಿ ಪಾಲ್ಗೊಳ್ಳಲಿದ್ಧಾರೆ.

ನಿಖಿಲ್ ರಾಜಕೀಯಕ್ಕೆ ಭದ್ರ ಬುನಾದಿ?

ಮದುವೆ ನೆಪದಲ್ಲಿ ಮಗನ ರಾಜಕೀಯ ಭವಿಷ್ಯಕ್ಕೆ ಕುಮಾರಸ್ವಾಮಿ ಭದ್ರ ಬುನಾದಿಯಾಗುತ್ತಿದ್ದು, ಈ ಮೂಲಕ ಪಕ್ಷ ಸಂಘಟನೆಗೂ ಒತ್ತು ನೀಡಿದ್ದಾರೆ. ಅಲ್ಲದೇ ಮದುವೆ ನೆಪದಲ್ಲಿ ಪದೇ ಪದೇ ರಾಜಕೀಯ ಮುಖಂಡರ ಸಭೆ ಕರೆದು ನಿಖಿಲ್​ ರಾಜಕೀಯ ಭವಿಷ್ಯದ ಬಗ್ಗೆ ಕೂಡ ಚರ್ಚಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಈ ಹಿಂದೆ ಮಾಗಡಿ ಶಾಸಕ ಎ ಮಂಜು ಕೂಡ ಮಾತನಾಡಿದ್ದರು ದೇವೇಗೌಡರ ಮಾತು ಇದಕ್ಕೆ ಸಾಕ್ಷ್ಯ ಒದಗಿಸಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪರೋಕ್ಷವಾಗಿ ಮಗನ ರಾಜಕೀಯಕ್ಕೆ ಅಡಿಪಾಯ ಹಾಕುತ್ತಿರುವುದು ಎದ್ದು ಕಾಣುತ್ತಿದೆ. ಒಟ್ಟಾರೆಯಾಗಿ ಏಪ್ರಿಲ್​ 17 ರಂದು ರಾಮನಗರದ ಅರ್ಚಕರಹಳ್ಳಿಯ ಜಾನಪದ ಲೋಕದ ಪಕ್ಕದ ಜಮೀನಿನಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಈಗಾಗಲೇ ಭರ್ಜರಿಯಾಗಿ ತಯಾರಿ ನಡೆಸಿದ್ದಾರೆ.