ಮೊಬೈಲ್ ಸಿಮ್‘ಗೆ ಆಧಾರ್ ಕಡ್ಡಾಯ

0
785

ನವದೆಹಲಿ: ಮೊಬೈಲ್ ಸಿಮ್ಳ ದುರುಪಯೋಗ ತಡೆಯುವ ಸಲುವಾಗಿ ವರ್ಷದೊಳಗೆ ದೇಶದ ಎಲ್ಲ ಮೊಬೈಲ್ ಸಂಖ್ಯೆಗಳ ವಿವರಗಳನ್ನು ಅದರ ಬಳಕೆದಾರರ ಆಧಾರ್ ಸಂಖ್ಯೆಯೊಂದಿಗೆ ಜೋಡಿಸು ವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ನಕಲಿ ಮೊಬೈಲ್ ಸಂಪರ್ಕಗಳ ಹಾವಳಿಗೆ ಕಡಿವಾಣ ಹಾಕುವುದು ಮತ್ತು ಬಳಕೆದಾರರ ಗುರುತಿನ ವಿಶ್ವಾಸಾರ್ಹತೆ ಖಾತರಿ ಪಡಿಸುವುದಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಲ್ಲದೇ, ಹಾಲಿ ಮೊಬೈಲ್ ಬಳಕೆದಾರರ ಗುರುತು ಮತ್ತು ವಿವರಗಳನ್ನು ಪರಿಶೀಲಿಸುವುದಕ್ಕಾಗಿ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗುವುದು ಎಂದೂ ಕೋರ್ಟ್ಗೆ ತಿಳಿಸಿದೆ.

ಕೇಂದ್ರದ ಪರವಾಗಿ ಸುಪ್ರೀಂ ಕೋರ್ಟ್ ಮುಂದೆ ಹೇಳಿಕೆ ನೀಡಿದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ‘ಒಂದು ವರ್ಷದ ಒಳಗಾಗಿ ದೇಶದಾದ್ಯಂತ ಇರುವ 100 ಕೋಟಿ ಮೊಬೈಲ್ ಬಳಕೆದಾರರ ವಿವರಗಳನ್ನು ದಾಖಲಿಸಿಕೊಳ್ಳಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದರು.

ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಎನ್.ವಿ. ರಮಣ ಅವರಿದ್ದ ನ್ಯಾಯಪೀಠ, ರೋಹಟಗಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು.

‘ಒಟ್ಟು ಮೊಬೈಲ್ ಬಳಕೆದಾರರ ಪೈಕಿ ಶೇ 90ರಷ್ಟು ಮಂದಿ ಪ್ರೀ-ಪೇಯ್ಡ್ ಸಂಪರ್ಕ ಹೊಂದಿದ್ದಾರೆ. ಅವರು ಮೊಬೈಲ್ ರೀ-ಚಾರ್ಜ್ ಮಾಡುವ ಸಂದರ್ಭದಲ್ಲಿ ಗುರುತಿನ ವಿವರಗಳನ್ನು ಕೇಳಲು ಸಾಧ್ಯವಿದೆಯೇ’ ಎಂದು ಅಟಾರ್ನಿ ಜನರಲ್ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

ಹಾಲಿ ಮೊಬೈಲ್ ಬಳಕೆದಾರರು ಮತ್ತು ಭವಿಷ್ಯದಲ್ಲಿ ಸಿಮ್ ಸಂಪರ್ಕ ಪಡೆಯುವವರ ಗುರುತು ಮತ್ತು ವಿಳಾಸಗಳನ್ನು ದೃಢಪಡಿಸಿಕೊಳ್ಳಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಗ್ರಾಹಕರ ಗುರುತು ಮತ್ತು ವಿಳಾಸದ ಅಧಿಕೃತ ದಾಖಲೆಯಾಗಿ ಆಧಾರ್‌ ಪರಿಗಣಿಸಬಹುದು ಎಂದು ದೂರ ಸಂಪರ್ಕ ಇಲಾಖೆ ಸ್ಪಷ್ಟಪಡಿಸಿದೆ.

ಆದರೆ ಗ್ರಾಹಕ ಸಲ್ಲಿಸಿದ ಇ–ಆಧಾರ್ ದಾಖಲೆಯಲ್ಲಿರುವ ಹೆಸರು, ವಿಳಾಸ, ಜನ್ಮದಿನ, ಲಿಂಗ, ಊರು ಸೇರಿ ದಂತೆ ಇನ್ನಿತರ ಮಾಹಿತಿಗೂ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಜಾಲ ತಾಣದಲ್ಲಿಯ ಮಾಹಿತಿಗೂ ಪರಸ್ಪರ ತಾಳೆ ಆಗುತ್ತದೆಯೇ ಎಂದು ಪರೀಕ್ಷಿಸಿ ದೃಢ ಪಡಿಸಿಕೊಳ್ಳುವುದು ಮೊಬೈಲ್‌ ಸಿಮ್‌ ಮಾರಾಟಗಾರರ ಹೊಣೆಯಾಗಿರುತ್ತದೆ.

ಮೂಲ ದಾಖಲೆಯೊಂದಿಗೆ ಇ–ಆಧಾರ್‌ ಹೋಲಿಕೆ ಮಾಡಿದ ದೃಢೀಕರಣಕ್ಕೆ ಸಿಮ್‌ ಮಾರಾಟಗಾರರು ಹಿಂಬದಿ ಬರಹ ನೀಡಬೇಕಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.