ಕಸಾಯಿಖಾನೆ ಬಂದ್ ಮಾಡಲು ಯೋಗಿ ಆದಿತ್ಯನಾಥ್ ಆದೇಶ

0
475

ಲಖನೌ:  ಅಧಿಕಾರ ವಹಿಸಿಕೊಂಡ ಬಳಿಕ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಆಸ್ತಿ ವಿವರ ಘೋಷಿಸುವಂತೆ ಕಟ್ಟಪ್ಪಣೆ ಮಾಡಿದ್ದ ಸಿಎಂ ಯೋಗಿ ಆದಿತ್ಯನಾತ್, ಇದೀಗ, ಗೋಹತ್ಯೆ ವಿರುದ್ಧ ಸಮರ ಸಾರಿದ್ದಾರೆ. ಹಾಗೂ ವಿಧಾನಸಭೆ ವೇಳೆ ಬಿಜೆಪಿ ಬಿಡುಗಡೆ ಮಾಡಿದ್ದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಲಾಗುವುದು ಮತ್ತು ಯಾಂತ್ರಿಕೃತ ಕಸಾಯಿಖಾನೆಗಳನ್ನು ಸಂಪೂರ್ಣ ಬಂದ್ ಮಾಡುವುದಾಗಿ ಭರವಸೆ ನೀಡಲಾಗಿತ್ತು.

 

ಗೋಹತ್ಯೆ ಮತ್ತು ಅಕ್ರಮ ಗೋವುಗಳ ಸಾಗಣೆಯನ್ನ ಸಹಿಸಲು ಸಾಧ್ಯವಿಲ್ಲ ಎಂದಿರುವ ಆದಿತ್ಯನಾತ್, ಅಕ್ರಮ ಕಸಾಯಿಖಾನೆಗಳ ನಾಮಾವಶೇಷ ಮಾಡುವಂತೆ ಪೊಲಿಸರಿಗೆ ಆದೇಶಿಸಿದ್ದಾರೆ.

ರಾಜ್ಯಾದ್ಯಂತ ಇರುವ ಕಸಾಯಿಖಾನೆಗಳನ್ನು ಬಂದ್ ಮಾಡಲು ಕಾರ್ಯಯೋಜನೆ ರೂಪಿಸುವಂತೆ ಯೋಗಿ ಆದಿತ್ಯನಾಥ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಯಾವ ರೀತಿಯ ಕಸಾಯಿಖಾನೆಗಳನ್ನು ಬಂದ್ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿಲ್ಲ.

 

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಹ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕಸಾಯಿಖಾನೆಗಳನ್ನು ಬಂದ್ ಮಾಡಲಾಗುವುದು ಎಂದು ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಇದೀಗ ಅದನ್ನು ಜಾರಿಗೆ ತಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ, ಸಮಾಜ ವಿರೋಧಿ ಕೃತ್ಯಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.

ಈ ಬಗ್ಗೆ ಕ್ರಿಯಾಯೋಜನೆ ರೂಪಿಸುವಂತೆ ಖಡಕ್ ಆದೇಶ ನೀಡಿದ್ದಾರೆ. ಆದರೆ, ಉತ್ತರಪ್ರದೇಶದಲ್ಲಿ ಹಲವು ಪರವಾನಗಿ ಪಡೆದಿರುವ ಕಸಾಯಿಖಾನೆಗಳಿದ್ದು, ಅವುಗಳನ್ನ ಯೋಗಿ ಹೇಗೆ ತೊಡೆದುಹಾಕುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.