ಅಜ್ಜಿ ಕಥೆ : ಅತಿ ಬುದ್ಧಿ ಅಪಾಯಕಾರಿ.

0
1385

ಒಂದು ಹಳ್ಳಿಯಲ್ಲಿ ಒಬ್ಬ ವರ್ತಕನಿದ್ದ. ಅವನ ಹತ್ತಿರ ಒಂದು ಕತ್ತೆಯಿತ್ತು. ವರ್ತಕ ಪಕ್ಕದ ಹಳ್ಳಿಯಲ್ಲಿ ಸಂತೆ ಆದಾಗ ಅಲ್ಲಿಗೆ ಹೋಗಿ ಸಾಮಾನುಗಳನ್ನು ತರುವುದು ವಾಡಿಕೆಯಾಗಿತ್ತು. ಹಾಗೆ ಹೋಗಿ ಬರುವಾಗಲೆಲ್ಲಾ ವರ್ತಕ ತನ್ನ ಕತ್ತೆಯ ಮೇಲೆ ಸಾಮಾನುಗಳನ್ನು ಹೇರಿಕೊಂಡು ಬರುತ್ತಿದ್ದ.

ಒಂದು ದಿನ ಸಂತೆಯಿಂದ ಉಪ್ಪನ್ನು ಖರೀದಿ ಮಾಡಿದ. ಕತ್ತೆಯ ಮೇಲೆ ಹೇರಿಕೊಂಡು ಹಿಂತಿರುಗಿ ಬರುತ್ತಿದ್ಡಾಗ ದಾರಿಯಲ್ಲೊಂದು ಸಣ್ಣ ತೊರೆ ಸಿಕ್ಕಿತು. ಕತ್ತೆಗೆ ಕಾಲು ಜಾರಿತು. ಅದು ಕೆಳಗೆ ಬಿದ್ದುದೇ ತಡ ಉಪ್ಪಿನ ಮೂಟೆಯಲ್ಲಿದ್ದ ಉಪ್ಪು ನೀರಿನಲ್ಲಿ ಪೂರ್ಣವಾಗಿ ಕರಗಿಹೋಯಿತು. ವರ್ತಕ ಪ್ರಯಾಸದಿಂದ ಕತ್ತೆಯನ್ನು ಹೊರಗೆಳೆದ.

ಕತ್ತೆ ನಡೆಯಲು ಮೊದಲು ಮಾಡಿದಾಗ ಬೆನ್ನು ಹಗುರವಾಗಿ ಕಾಣಿಸಿತು. “ಆಹಾ ಇದು ಎಷ್ಟು ಒಳ್ಳೇ ಉಪಾಯ ಅರ್ಧದಾರಿ ಉಪ್ಪನ್ನು ಹೊರೋದು ತಪ್ಪಿತು” ಎಂದುಕೊಂಡಿತು ಕತ್ತೆ.

ಮರುವಾರವೂ ವರ್ತಕ ಉಪ್ಪನ್ನು ಹೊರಿಸಿಕೊಂಡು ಬಂದ. ಈ ಸಾರೆ ಕತ್ತೆ, ತೊರೆ ಬಂದಾಗ ಅದನ್ನು ದಾಟುತ್ತಿದ್ದಾಗ ಬೇಕಂತಯೇ ಜಾರಿದಂತೆ ನಟಿಸಿ ಉಪ್ಪನ್ನು ಒದ್ದೆ ಮಾಡಿತು. ಹಿಂದಿನಂತೆಯೇ ಉಪ್ಪು ಕರಗಿ ಹೋಯಿತು. ಕತ್ತೆ ಸಂತೋಷದಿಂದ ಹಗುರವಾದ ಮೈ ಹೊತ್ತು ಮನೆಗೆ ಹೋಯಿತು.

ಮೂರನೆಯ ಬಾರಿ ವರ್ತಕ ಹತ್ತಿಯ ಮೂಟೆಯನ್ನು ಕತ್ತೆಯ ಬೆನ್ನಿಗೆ ಕಟ್ಟಿದ. ಹಿಂದಿನ ಬಾರಿಯಂತೆಯೇ ಕತ್ತೆ ಕಾಲು ಜಾರಿದಂತೆ ನಟಿಸಿ ನೀರಿನೊಳಗೆ ಬಿತ್ತು. ವರ್ತಕ ಬಹು ಕಷ್ಟದಿಂದ ಕತ್ತೆಯನ್ನು ಹೊರಗೆಳೆದ. ಹೊರಬಂದ ಕತ್ತೆಗೆ ತಾನು ಹೊತ್ತಿದ್ದ ಹೇರಿನ ತೂಕ ಜಾಸ್ತಿಯಾಗಿ ಇರುವಂತೆ ಕಂಡಿತು. ಅದು ಭಾರವಾದ ಹೆಜ್ಜೆ ಹಾಕುತ್ತಾ ಮನೆಯ ಕಡೆಗೆ ನಡೆಯಿತು.

ಅದಕ್ಕೆ ಹೇಳೋದು ಅತಿ ಬುದ್ಧಿ ಅಪಾಯಕ್ಕೆ ಕಾರಣವಾಗುತ್ತದೆ ಅಂತಾ.