ಅಮರನಾಥ ಯಾತ್ರೆ : ಕನ್ನಡಿಗರು ಸುರಕ್ಷಿತ

0
540

ಬೆಂಗಳೂರು, ಜುಲೈ 13 : ಅಮರನಾಥ ಯಾತ್ರೆಗೆ ತೆರಳಿದ್ದ 75 ಕನ್ನಡಿಗರು ಸುರಕ್ಷಿತವಾಗಿ ದೆಹಲಿಯ ಕರ್ನಾಟಕ ಭವನಕ್ಕೆ ಬಂದು ತಲುಪಿದ್ದಾರೆ. 380 ಕನ್ನಡಿಗರು ಗಲಭೆ ಪೀಡಿತ ಕಾಶ್ಮೀರ ಕಣಿವೆಯ ಹೊರಗೆ ಬಂದಿದ್ದಾರೆ. 200 ಕನ್ನಡಿಗರು ಬಾಲ್ಟಲಾಲ್ ಮಿಲಟರಿ ಬೇಸ್ ಕ್ಯಾಂಪ್ನಲ್ಲಿ ಆಶ್ರಯ ಪಡೆದಿದ್ದಾರೆ.

ಕರ್ನಾಟಕ ಭವನದ ಉಪನಿವಾಸಿ ಆಯುಕ್ತರಾದ ಅನೀಸ್ ಕೆ ಜಾಯ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ‘ಬಾಲ್ಟಲಾಲ್ ಮಿಲಟರಿ ಬೇಸ್ ಕ್ಯಾಂಪ್ನಲ್ಲಿ 200 ಜನರು ಇದ್ದು, ಆ ಪ್ರದೇಶದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ಸಂಚಾರ ಸ್ಥಗಿತಗೊಂಡಿದೆ. ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದು, ಅವರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ’ ಎಂದು ಹೇಳಿದ್ದಾರೆ. [ ಅಮರನಾಥ ಯಾತ್ರೆ : ಕನ್ನಡಿಗರು ಸುರಕ್ಷಿತ]

ಸುರಕ್ಷತೆಯ ದೃಷ್ಟಿಯಿಂದಾಗಿ ಯಾತ್ರಾರ್ಥಿಗಳು ರಾತ್ರಿ ವೇಳೆಯಲ್ಲಿ ಸಂಚಾರಕ್ಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇಂದು ರಾತ್ರಿ ಅಲ್ಲಿಂದ ಹೊರಡುವ ಸಾಧ್ಯತೆ ಇದೆ ಎಂದು ಕಾಶ್ಮೀರದ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಭವನಕ್ಕೆ ಆಗಮಿಸಿದ 75 ಜನರಿಗೆ ವಾಸ್ತವ್ಯ, ಊಟೋಪಚಾರದ ವ್ಯವಸ್ಥೆಯನ್ನು ಒದಗಿಸಲಾಗಿದೆ. [ಅಮರನಾಥ ಯಾತ್ರೆ : ಕನ್ನಡಿಗ ಯಾತ್ರಾರ್ಥಿಗಳಿಗೆ ಸಹಾಯವಾಣಿ]

ಬೆಂಗಳೂರು ಮೂಲದ ಶೋಭ ಎನ್ನುವವರು ಕಾರ್ಗಿಲ್ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಇನ್ನೂ 2 ದಿನಗಳ ಕಾಲ ತಪಾಸಣೆಗೊಳಪಡಿಸಬೇಕಾಗಿದೆ. ಆಸ್ಪತ್ರೆಯಲ್ಲಿರುವ ಅವರ ಸಹೋದರಿ ಹಾಗೂ ಬೆಂಗಳೂರು ಜಿಲ್ಲಾಡಳಿತದೊಂದಿಗೆ ಕರ್ನಾಟಕ ಭವನ ಸಂಪರ್ಕದಲ್ಲಿದ್ದು, ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕರ್ನಾಟಕ ಭವನದ ತಂಡವು ಸುಮರು 400 ಕರೆಗಳನ್ನು ಸ್ವೀಕರಿಸಿ, ಸಂಬಂಧಿಸಿದವರ ಬಗ್ಗೆ ಮಾಹಿತಿಯನ್ನು ಒದಗಿಸಿದೆ. ಜಮ್ಮು ಕಾಶ್ಮೀರ ರಾಜ್ಯದ ಹಿರಿಯ ಅಧಿಕಾರಿಗಳು, ಕಂಟ್ರೋಲ್ ರೂಂ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜಮ್ಮು ಕಾಶ್ಮೀರದಿಂದ ಆಗಮಿಸುವ ಕನ್ನಡಿಗರ ಅಹವಾಲುಗಳನ್ನು ಪರಿಹರಿಸಿ ರಾಜ್ಯಕ್ಕೆ ವಾಪಸ್ ಕಳಿಸಲು ನೆರವಾಗಲಿದೆ.

ಅಧಿಕಾರಿಗಳ ತಂಡದ ದೂರವಾಣಿ ಸಂಖ್ಯೆ : ಕರ್ನಾಟಕ ಭವನದ ಉಪನಿವಾಸಿ ಆಯುಕ್ತರಾದ ಅನೀಸ್ ಕೆ ಜಾಯ್ 9868393979, ಶ್ರೀಕಾಂತ ರಾವ್ 9868393971, ರೇಣುಕುಮಾರ್ 9868393953. ಈ ಅಧಿಕಾರಿಗಳಿಗೆ ಕರೆ ಮಾಡಿ ಜಮ್ಮ ಕಾಶ್ಮೀರದಲ್ಲಿ ತೊಂದರೆಯಲ್ಲಿರುವವರ ಬಗ್ಗೆ ಮಾಹಿತಿ ನೀಡಬಹುದು.