ಇಂಗ್ಲೆಂಡ್‌ ರಾಣಿ ಕಳುಹಿಸಿದ್ದ ಅಚ್ಚ ಕನ್ನಡದ ಆಹ್ವಾನಪತ್ರ ಲಭ್ಯ…

0
5330

ಬೆಳಗಾವಿ: ಬ್ರಿಟಿಷರ ಆಡಳಿತಾವಧಿಯಲ್ಲಿ ಇಂಗ್ಲೆಂಡ್‌ ರಾಣಿ ದೇಶಿ ಸಂಸ್ಥಾನಗಳ ಅರಸರು, ಸಂಸ್ಥಾನಿಕರು, ಪ್ರಾಂತ್ಯ ಪ್ರತಿನಿಧಿಗಳಿಗೆ ತಮ್ಮ ಮಗನ ಪಟ್ಟಾಭಿಷೇಕ ಸಮಾರಂಭಕ್ಕೆ ಆಹ್ವಾನ ಪತ್ರ ಹಾಗೂ ಕಾರ್ಯಕ್ರಮದ ಬಳಿಕ ಆತಿಥ್ಯ ಸ್ವೀಕರಿಸಿದ ಪ್ರತಿನಿಧಿಗಳಿಗೆ ಅಚ್ಚ ಕನ್ನಡದಲ್ಲಿ ಕಳುಹಿಸಿದ್ದ ಆಭಾರ ಮನ್ನಣೆ ಪತ್ರ ಇಲ್ಲಿನ ಪಾಲಿಕೆ ವ್ಯಾಪ್ತಿಯ ಕಣಬರ್ಗಿಯ ಪ್ರಪ್ರಥಮ ಪಾಲಿಕೆ ಸದಸ್ಯ ಶಿವನಗೌಡ ಭೀಮಗೌಡ ಪಾಟೀಲರ ಮನೆಯಲ್ಲಿ ದೊರೆತಿವೆ. ಹಿನ್ನೆಲೆ: ಇಂಗ್ಲೆಂಡ್‌ ರಾಣಿಯ ಪುತ್ರ ಪ್ರಿನ್ಸ್‌ ಆಫ್‌ ವೇಲ್ಸ್‌ ಅವರನ್ನು ‘ಮಲಿಕ್‌ ಮುಅಝಮ್‌ ಕೈಸರೇ ಹಿಂದ್‌’ ಭಾರತದ ಆಡಳಿತಾಧಿಕಾರಿಯಾಗಿ ನೇಮಿಸಿದ ಬಳಿಕ 1911ರ ಜೂ.22 ರಂದು ರಾಜ್ಯಾಭಿಷೇಕ ಮಹೋತ್ಸವನ್ನು ದಿಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಲೆಫ್ಟಿನೆಂಟ್‌ ಗವರ್ನರ್‌, ಅಮಲದಾರರು ಮತ್ತು ದೇಶಿ ಸಂಸ್ಥಾನಗಳ ಅರಸರು, ಸಂಸ್ಥಾನಿಕರು, ಸರದಾರರು ಹಾಗೂ ಹಿಂದಿ ಸಾಮ್ರಾಜ್ಯದೊಳಗಿನ ಎಲ್ಲ ಪ್ರಾಂತ್ಯಗಳ ಪ್ರತಿನಿಧಿಗಳು ಪಾಲ್ಗೊಳ್ಳಬೇಕು ಎಂದು ರಾಣಿಯು 1911ರ ಮಾ.22 ರಂದು ಅಚ್ಚ ಕನ್ನಡದಲ್ಲಿ ಆಹ್ವಾನ ಪತ್ರವನ್ನು ಹೊರಡಿಸಿದ್ದರು.

ಮಹೋತ್ಸವದ ಬಳಿಕ 1911ರ ಡಿ.12ರಂದು ರಾಣಿ ಅಚ್ಚ ಕನ್ನಡದಲ್ಲಿ ಅಭಾರ ಮನ್ನಣೆ ಪತ್ರವನ್ನು ಹೊರಡಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ ಬೆಳಗಾವಿಯಲ್ಲಿ ಕನ್ನಡ ಭಾಷೆ ಬಳಕೆಯಲ್ಲಿತ್ತು ಎಂಬುದು ಈ ದಾಖಲೆಗಳಿಂದ ಸಾಬೀತಾಗುತ್ತದೆ. ಶಿವನಗೌಡರ ತಂದೆ ಭೀಮಗೌಡ ಸಿದ್ಧಗೌಡ ಪಾಟೀಲ ಅವರು ಪೊಲೀಸ್‌ ಪಾಟೀಲರಾಗಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಆ ಸಂದರ್ಭದಲ್ಲಿ ಇವರಿಗೆ ರಾಜ್ಯಾಭಿಷೇಕ ಮಹೋತ್ಸವದ ಆಹ್ವಾನ ಪತ್ರ ಹಾಗೂ ದಿಲ್ಲಿಯ ಸಮಾರಂಭದ ಬಳಿಕ ಕಣಬರ್ಗಿಯ ಅವರ ವಿಳಾಸಕ್ಕೆ ಕಳುಹಿಸಿಕೊಡಲಾಗಿದ್ದವು. ಈ ಅಚ್ಚಕನ್ನಡದ ಮಹತ್ವದ ದಾಖಲೆಗಳನ್ನು ಭೀಮಗೌಡ ಪಾಟೀಲರ ಮಕ್ಕಳಾದ ಶಿವನಗೌಡ ಪಾಟೀಲ ಹಾಗೂ ಬಾಳಗೌಡ ಪಾಟೀಲ ಅವರು ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿಗೆ ನೀಡಿದ್ದಾರೆ. ಈ ಎರಡು ಪ್ರಮುಖ ದಾಖಲೆಗಳನ್ನು ರಾಜ್ಯ ವಕೀಲರ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ರವೀಂದ್ರ ತೋಟಿಗೇರ, ಉಪಾಧ್ಯಕ್ಷ ಸುಧೀರ ನಿರ್ವಾಣಿ, ಕುಮಾರ ಸರವದೆ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಾನಂದ ಈರಣಗೌಡ್ರ ಅವರು ನಿವೃತ್ತ ನ್ಯಾಯಾಧೀಶ ಮತ್ತು ಕರ್ನಾಟಕ ಗಡಿ ರಕ್ಷ ಣಾ ಆಯೋಗದ ಸದಸ್ಯರಾದ ಜಿನದತ್ತ ದೇಸಾಯಿಯವರ ಮುಖಾಂತರ ಮಹಾರಾಷ್ಟ್ರ ರಾಜ್ಯ ದಾಖಲಿಸಿರುವ ಗಡಿ ಹಂಚಿಕೆ ದಾವೆಯಲ್ಲಿ ಕರ್ನಾಟಕ ರಾಜ್ಯ ಪರ ದಾಖಲೆಯನ್ನಾಗಿ ದಾಖಲಿಸಲು ಹಸ್ತಾಂತರಿಸಿದ್ದಾರೆ.

Source: vijaykarnataka