ಜಗತ್ತಿನಲ್ಲಿ ಕೆಟ್ಟ ಮಕ್ಕಳಿರುತ್ತಾರೆಯೇ ಹೊರತು ಕೆಟ್ಟ ತಾಯಿ ಇರುವುದಿಲ್ಲ!!ಅಮ್ಮ – ಪ್ರತ್ಯಕ್ಷ ದೇವತೆ!!!

0
2225

ಅಮ್ಮ-ಎಂದರೆ ಕೇವಲ ಅಡುಗೆ ಮಾಡುವುದಕ್ಕೆ, ಗಂಡ, ಮಕ್ಕಳು, ಮನೆ ನೋಡಿಕೊಳ್ಳುವುದಕ್ಕೆ ಇರುತ್ತಾಳೆ ಎಂಬ ನಂಬಿಕೆ ಅನೇಕರದ್ದು. ಆದರೆ ಅಮ್ಮ ಎಲ್ಲದಕ್ಕೂ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವು ಮಕ್ಕಳು ಅಮ್ಮನನ್ನು ಕೇವಲವಾಗಿ ನೋಡುತ್ತಾರೆ. ಅಮ್ಮನನ್ನು ಕೋಪದಿಂದ ಬೈದು ಮನೆಯಿಂದ ಹೊರಹಾಕುವ ಬಗ್ಗೆಯೂ ಯೋಚಿಸುತ್ತಾರೆ. ಅಮ್ಮನ ಬದಲು ಕೆಲಸದವರನ್ನು ಇಟ್ಟುಕೊಳ್ಳುತ್ತೇನೆ ಎಂದು ಗರ್ವದಿಂದ ಹೇಳಿ ಕೆಲಸದವರನ್ನು ಇಟ್ಟುಕೊಳ್ಳುತ್ತಾರೆ. ಕೆಲಸದವರು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ರುಚಿಯಾಗಿ ಅಡುಗೆಯನ್ನೂ ಮಾಡಿ ಹಾಕಬಹುದು. ಆದರೆ ಮಕ್ಕಳಿಗೆ ಕೈತುತ್ತು ಹಾಕಿ ಊಟ ಮಾಡಿಸುವುದಿಲ್ಲ, ಪ್ರೀತಿಯಿಂದ ನೋಡಿಕೊಳ್ಳುವುದಿಲ್ಲ, ಕಥೆ ಹೇಳುವುದಿಲ್ಲ… ಯಾಕೆ ಹೇಳಿ? ಕೆಲಸದವರು ಅಮ್ಮನ ಸ್ಥಾನ ತುಂಬಲು ಸಾಧ್ಯವಿಲ್ಲ.

ಕನ್ನಡದ ಖ್ಯಾತ ಕವಿ ಬಿ.ಎಸ್‌. ಲಕ್ಷ್ಮಣ್‌ ರಾವ್‌ ಅವರು ಅಮ್ಮನ ಕುರಿತಾಗಿ ಬರೆದ ಕವನ…
‘ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು… ಮಿಡುಕಾಡುತಿರುವೆ ನಾನು…
ಕಡಿಯಲೊಲ್ಲೆ ನೀ ಕರುಳ ಬಳ್ಳಿ ಒಲವೂಡುತಿರುವ ತಾಯೇ… ಬಿಡದ ಭುವಿಯ ಮಾಯೆ..

ಮಕ್ಕಳು ಏನೇ ಅಂದರೂ, ಮನಸ್ಸಿಗೆ ನೋವಾಗುವಂತೆ ನಡೆದುಕೊಂಡರೂ ತಾಯಿ ತನ್ನ ಮಕ್ಕಳ ಮೆಲೆ ಯಾವತ್ತೂ ಕೋಪ ಮಾಡಿಕೊಳ್ಳುವುದಿಲ್ಲ. ತಪ್ಪು ಮಾಡಿದಾಗ ಅಮ್ಮ ಹೊಡೆಯುತ್ತಾಳೆಂದು ನಾವು ಅಮ್ಮನ ಮೇಲೆ ಕೋಪ ಮಾಡಿಕೊಳ್ಳಬಾರದು. ಅವಳು ಏನೇ ಮಾಡಿದರೂ ನಮ್ಮ ಒಳ್ಳೆಯದಕ್ಕೇ ಮಾಡುತ್ತಾಳೆ. ನಾವು ಇನ್ನೊಂದು ಸಾರಿ ತಪ್ಪು ಮಾಡಬಾರದೆಂಬುದು ಅವಳ ಉದ್ದೇಶವಾಗಿರುತ್ತದೆ. ಅಮ್ಮ ಸಹನಾಮೂರ್ತಿ. ಅವಳು ಊಟ ಮಾಡುತ್ತಿರುವಾಗ, ನಿದ್ದೆ ಮಾಡುತ್ತಿರುವಾಗ ಅಥವಾ ಇನ್ನಾವುದೇ ಸಮಯದಲ್ಲಾದರೂ ಮಗು ಅತ್ತರೆ ಅದಕ್ಕೆ ಹಾಲುಣಿಸಿ, ಉಪಚರಿಸುತ್ತಾಳೆ. ಎತ್ತಿಕೊಂಡು ಸುತ್ತಮುತ್ತಾ ತಿರುಗಾಡಿಸಿ ಸಮಾಧಾನ ಪಡಿಸಿ ಮಗು ಮಲಗಿದ ನಂತರವೇ ಅವಳು ನಿದ್ದೆ ಮಾಡುತ್ತಾಳೆ. ಮಗು ಅಳುವುದರಿಂದ ಸರಿಯಾಗಿ ಊಟ ಮಾಡುವುದಕ್ಕೂ ಅಗುವುದಿಲ್ಲ ಎಂದು ಮಗುವನ್ನು ಹೊಡೆಯುವುದಿಲ್ಲ. ಒಂದು ವೇಳೆ ಹಾಗೆ ವರ್ತಿಸಿದರೂ ಕೆಲ ಹೊತ್ತು ಮಾತ್ರ. ತಾಯಿ ಹೃದಯ ಮಂಜಿನಂತೆ. ಬಹುಬೇಗ ಕೋಪ ಕರಗಿಹೋಗುತ್ತದೆ.

ಜಗತ್ತಿನಲ್ಲಿ ಕೆಟ್ಟ ಮಕ್ಕಳಿರುತ್ತಾರೆಯೇ ಹೊರತು ಕೆಟ್ಟ ತಾಯಿ ಇರುವುದಿಲ್ಲ. ನಾನು ನನ್ನ ಅಮ್ಮನನ್ನು ತುಂಬಾ ಪ್ರೀತಿಸುತ್ತೇನೆ. ನೀವೂ ನಿಮ್ಮ ಅಮ್ಮನನ್ನು ಪ್ರೀತಿಸಿ. ದಿನದ 24 ಗಂಟೆಗಳಲ್ಲಿ ಅಮ್ಮನಿಗಾಗಿ ಒಂದು ಗಂಟೆಯಾದರೂ ಮೀಸಲಿಡಿ. ಅಮ್ಮ-ಅಪ್ಪನ ಮನಸ್ಸಿಗೆ ನೋವುಂಟು ಮಾಡಬೇಡಿ.