ತೊದಲು ನುಡಿಯ ಕಂದಮ್ಮಗಳಿಗೆ ನಾಲಿಗೆಯ ಮೇಲೆ ಓಂಕಾರ ಬರೆದು ಆಶೀರ್ವದಿಸುವ ಅಮೃತೇಶ್ವರನ ಸನ್ನಿಧಿಯಲ್ಲಿರುವ ಶ್ರೀ ಶಾರದಾಂಬೆ…

0
1460

ಅಮೃತಾಪುರದ ಶ್ರೀ ಅಮೃತೇಶ್ವರ ಸ್ವಾಮೀ ಸನ್ನಿಧಿಯ ವೈಶಿಷ್ಟ್ಯ…

ಸೊಬಗಿನ ಸಾಕಾರಮೂರ್ತಿಯಾಗಿರುವ ಅಮೃತೇಶ್ವರನ ಸನ್ನಿದಿಯಲ್ಲಿ ಸರ್ವಾಲಂಕಾರ ಭೂಷಿತಗಳಾಗಿ ನಳನಳಿಸುತ್ತಿರುವ ಜಗನ್ಮಾತೆ ಶಾರದಾಂಬೆ ಅದುವೇ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸಮೀಪದ ಅಮೃತಾಪುರದ ಶ್ರೀ ಅಮೃತೇಶ್ವರ ಸ್ವಾಮಿ ಸನ್ನಿಧಿ.

Also read: ಈ ಶಿವನ ದೇಗುಲದ ಗುಹೆ ಒಳಗಡೆ ಕಾಣುವ ಮಣ್ಣು ಹಲವು ರೊಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆಯಂತೆ, ಶಿವಗಂಗೆಯ ಸಮಾಗಮನವಾದ ಈ ಕ್ಷೇತ್ರದ ಬಗ್ಗೆ ತಿಳಿಯಿರಿ…

ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ ಕಡೂರು ಬೀರೂರು ಆದಮೇಲೆ ತರೀಕೆರೆಗೆ ಇನ್ನು ೫ ಕಿಮೀ ಇದೆ ಎನ್ನುವಾಗಲೇ ಬಲಕ್ಕೆ ತೆಂಗು, ಬಾಳೆ, ಮಾವು, ಅಡಿಕೆ ತೋಟಗಳ ತಂಪಾದ ಆಹ್ಲಾದಕರ ಪರಿಸರದಲ್ಲಿ ಕೇವಲ ೬ ಕಿಮಿ ಒಳಹೊಕ್ಕು ಬಂದಲ್ಲಿ ನಯನ ಮನೋಹರವಾದ ಶಿಲ್ಪಕಲಾ ಪ್ರೌಢಿಮೆಯಿಂದ ಕಂಗೊಳಿಸುವ ಅಮೃತೇಶ್ವರ ಸ್ವಾಮಿ ದೇಗುಲ ಎದುರಾಗುತ್ತದೆ.

ಹೊಯ್ಸಳರ ಕಾಲದ ಈ ದೇಗುಲವು ದೊರೆ ವಿಷ್ಣುವರ್ಧನನ ಮೊಮ್ಮಗ ವೀರ ಬಲ್ಲಾಳನ ಆಳ್ವಿಕೆಯ ಕಾಲದಲ್ಲಿ ಉಂಟಾಗಿದ್ದ ಅರಾಜಕತೆಯ ಹಿನ್ನಲೆಯಲ್ಲಿ ಹತ್ಯೆಗೊಳಗಾಗಿದ್ದ ಅಮೃತ ದಂಡನಾಯಕನ ನೆನಪಿಗಾಗಿ ಪೂರ್ಣವಾಯಿತೆಂದು ಈ ದೇಗುಲಕ್ಕೆ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಅಮೃತಾಪುರವೆಂದು ಹೆಸರು ಬಂದಿದೆ ಎಂದು ಇತಿಹಾಸದ ಪುಟಗಳಿಂದ ತಿಳಿಯಬಹುದು. ಸಾಲಿಗ್ರಾಮಶಿಲೆಯಿಂದ ಪ್ರತಿಷ್ಠಾಪಿಸಲಾದ ಸುಂದರ ಶಿವಲಿಂಗವನ್ನು ಅಮೃತೇಶ್ವರನೆಂದು ಕರೆಯಲಾಯಿತು. ಮಕರ ಸಂಕ್ರಾಂತಿಯ ದಿನದಂದು ಸೂರ್ಯಕಿರಣವು ನೇರವಾಗಿ ಈ ದೇಗುಲದ ಗರ್ಭಗುಡಿ ಹೊಕ್ಕು ಅಮೃತೇಶ್ವರನ ಪಾದಾರವಿಂದಕ್ಕೆ ಮುತ್ತಿಕ್ಕುವುದೇ ಇಲ್ಲಿಯ ವಿಶೇಷ.

Also read: ಪ್ರಕೃತಿ ತಾನಾಗಿಯೇ ದೈವಕ್ಕೆ ಭಕ್ತಿ ಸಮರ್ಪಿಸುವ ಕ್ಷಣ ನೋಡುವುದಾದರೆ ಉತ್ತರ ಕನ್ನಡ ಜಿಲ್ಲೆಯ ಸಹಸ್ರಲಿಂಗ ಕ್ಷೇತ್ರಕ್ಕೆ ಒಮ್ಮೆಯಾದರೂ ಭೇಟಿ ನೀಡಿ..!

ತ್ರಿಮೂರ್ತಿಗಳ ತ್ರಿಶಕ್ತಿಯನ್ನು ತುಂಬುವ ಸಲುವಾಗಿ ಶಿವ ಪಾರ್ವತಿ, ವಿಷ್ಣು ಲಕ್ಷ್ಮಿ, ಬ್ರಹ್ಮ ಶಾರದಾಂಬೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಕ್ರಮೇಣ ಶಾರದಾಂಬೆಯ ವಿಗ್ರಹ ಹೊರತು ಪಡಿಸಿ ಮಿಕ್ಕ ಎಲ್ಲ ವಿಗ್ರಹಗಳು ಕಣ್ಮರೆಯಾದವಂತೆ. ಭಕ್ತಿ ಭಾವದ ಪ್ರತೀಕದಂತಿರುವ ಅಮೃತೇಶ್ವರನ ಎದುರಿನ ಬಲಕ್ಕೆ ಗಾಯತ್ರಿ ಮಾತೆಯ ಸ್ವರೂಪದಲ್ಲಿ ಸಕಲ ಅಲಂಕಾರಗಳಿಂದ ಸೂಕ್ಷ್ಮ ಕೆತ್ತನೆಯಿಂದ ಕೂಡಿಯುವ, ಚೆಲುವಿನ ಶಾರದಾಂಬೆಯನ್ನು ನೋಡಲು ಎರಡು ಕಣ್ಣು ಸಾಲದು.

ಇಡೀ ದೇಗುಲವು ಸುಮಾರು ೨೫೦ ಚಿಕ್ಕ ಚಿಕ್ಕ ಸುಂದರ ಕೆತ್ತನೆಯುಳ್ಳ ಗೋಪುರಗಳಿಂದ ಅಲಂಕೃತಗೊಂಡಿವೆ. ಇಲ್ಲಿಯ ೫೨ ಕಂಬಗಳ ಕೆತ್ತನೆಯು ಸಹ ಇಂದಿಗೂ ಹೊಳಪನ್ನು ಉಳಿಸಿಕೊಂಡು ಬಂದಿದೆ. ದೇಗುಲದ ಮೇಲ್ಭಾಗವು, ಹೊರ ಮೇಲ್ಮೈ ಭಾಗವು ಭಾಗವತ, ಮಹಾಭಾರತ, ರಾಮಾಯಣಗಳನ್ನು ಬಿಂಬಿಸುವ ಸುಂದರ ಶಿಲ್ಪಕಲಾ ಕೃತಿಗಳಿಂದ ತುಂಬಿದೆ.

ಕ್ರಿ.ಶ.೧೧೯೬ರಲ್ಲಿ ದೇಗುಲ ನಿರ್ಮಾಣವು ಆರಂಭಗೊಂಡು ಸುಮಾರು ೪೨ವರ್ಷಗಳ ನಂತರ ಪೂರ್ಣಗೊಂಡಿತೆಂದು, ಮಲ್ಲಿತಮ್ಮನೆಂಬ ಶಿಲ್ಪಿಯಿಂದ ಕೆತ್ತಲ್ಪಟ್ಟ ದೇಗುಲವೆಂದೂ ತಿಳಿಯಲ್ಪಟ್ಟಿದೆ. ಇಲ್ಲಿರುವ ಬ್ರಹದ್ವಾರ, ಉಗ್ರನರಸಿಂಹ, ಕಾಳಿಂಗಮರ್ದನಂ ಸುಂದರ ಶಿಲ್ಪಗಳು ಆಸ್ಟ್ಕಾರ, ಪ್ರವಾಸಿಗರ ಮನಸೂರೆಗೊಳ್ಳುತ್ತವೆ. ವಿಷ್ಣುವಿನ ದಶಾವತಾರವನ್ನು ೨೪ ರೂಪಗಳಲ್ಲಿ ಕೆತ್ತಿರುವುದು ಇಲ್ಲಿಯ ಮತ್ತೊಂದು ವಿಶೇಷ. ಸ್ವರ್ಗದ ಬಾಗಿಲು ಎಂದು ಕರೆಯಲ್ಪಡುವ ಸರಸ್ವತಿ ಮಂಟಪ, ದೇಗುಲದ ಪರಿಸರವನ್ನು ಕಟ್ಟಲು ನಿರ್ಮಿಸಲಾಗಿದ್ದ ಆಳೆತ್ತರದ ಕೋಟೆ ಸುತ್ತಲೂ ಕೋಟೆತೆನೆಗಳ ಸುಂದರ ಕೆತ್ತನೆಯನ್ನು ಕಾಣಬಹುದು. ಇವು ಶ್ರೀಚಕ್ರ, ರಾಮಾಯಣ, ಮಹಾಭಾರತ, ಭಾಗವತದ ಡ್ಯಾನ್ನಿವೇಶಗಳ ಶಿಲ್ಪಕಲೆಯನ್ನು ಹೊಂದಿವೆ.

Also read: ಮನೆ ಕಟ್ಟಲು/ಕೊಂಡುಕೊಳ್ಳಲು ತುಂಬಾ ಸಂಕಷ್ಟಗಳು ಎದುರಿಸುತ್ತಿದ್ದರೆ, ಈ ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡಿ!!

ಇನ್ನು ಇಡೀ ಅಮೃತೇಶ್ವರ ಸ್ವಾಮೀ ಸನ್ನಿಧಿಯ ದೇಗುಲವು ನಕ್ಷತ್ರಾಕಾರದಲ್ಲಿದ್ದು, ಶಿವರಾತ್ರಿ, ನವರಾತ್ರಿಯಂದು ವಿಶೇಷ ಪೂಜೆ ಅಲಂಕಾರಗಳಿರುತ್ತವೆ. ಇಲ್ಲಿಯ ಶಾರದಾಂಬೆಯ ಮಡಿಲಲ್ಲಿ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ, ಓದುವ ಮಕ್ಕಳಿಗೆ ತಾಯಿಯಿಂದ ಆಶೀರ್ವಚನ ಮಾಡಿಸುವುದು ಇಲ್ಲಿಯ ಮತ್ತೊಂದು ವಿಶೇಷ.