ಸ್ವರ್ಗವೇ ನಾಚುವಂತಿದೆ ಮುಖೇಶ್ ಅಂಬಾನಿಯ ಆಂಟಿಲ್ಲಾ!!!

0
1872

ಭಾರತ ಸಂಜಾತ ಮುಖೇಶ್ ಅಂಬಾನಿ ಯಾರಿಗೆ ಗೊತ್ತಿಲ್ಲ! ಇವರು 2002ರಲ್ಲಿ ಮುಂಬೈ ನಗರದಲ್ಲಿ ನಿರ್ಮಿಸಲು ಕೈಹಾಕಿದ ಈ ಅದ್ಧೂರಿ ಮನೆ ವಿಶ್ವದ ಅತ್ಯಂತ ವಿಲಾಸಿ ಹಾಗೂ ದುಬಾರಿ ಮನೆಯಾಗಲಿದೆ ಎನ್ನುವ ನಿರೀಕ್ಷೆ ಅವರಿಗಿದ್ದಿತೇನೋ! ಮನೆ ನಿರ್ಮಿಸಲಾದ ಭೂಮಿಯನ್ನು ಸುಮಾರು ರೂ. 1.5 ಬಿಲಿಯನ್ ಮೊತ್ತಕ್ಕೆ ವಕ್ಫ್ ಬೋರ್ಡ್‍ನಿಂದ ಕೊಳ್ಳಲಾಯಿತು. ಆ ಸಮಯದಲ್ಲೇ ಮಾಲೀಕತ್ವದ ವಾದ-ವಿವಾದಗಳು ನಡೆದು ಅಂತಿಮವಾಗಿ ಮುಖೇಶ್ ಭೂಮಿಯನ್ನು ತಮ್ಮ ವಶಕ್ಕೆ ಪಡೆದರು. ಫೆಬ್ರವರಿ 2010ರಲ್ಲಿ ಪೂರ್ಣಗೊಂಡ ಈ ಮನೆಯ ಒಟ್ಟು ವೆಚ್ಚ ಸುಮಾರು ರೂ. 6000 ಕೋಟಿ ಎನ್ನಲಾಗಿದೆ. ಸುಮಾರು 570 ಅಡಿ ಎತ್ತರವಿರುವ ಮನೆಯು 27 ಮಹಡಿಗಳನ್ನು ಹೊಂದಿದ್ದು ಸುಮಾರು 4,00,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಕೆಳಗಿನ ಆರು ಮಹಡಿಗಳಲ್ಲಿ ಸುಮಾರು 168 ಕ್ಕ್ಕೂ ಹೆಚ್ಚು ಕಾರುಗಳು ನಿಲ್ಲುವಷ್ಟು ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ಮೂರು
ಹೆಲಿಪ್ಯಾಡುಗಳಿವೆ.

ಅಂಟಿಲ್ಲಾದ ನೀಲನಕ್ಷೆ ಸಿದ್ಧಪಡಿಸಿದವರು ಅಮೇರಿಕಾದ ಖ್ಯಾತ ಎಂಜಿನೀರುಗಳಾದ ಪೆರ್ಕಿನ್ಸ್, ವಿಲ್ ಮತ್ತು ಹಿರ್ಶ್ ಬೆಡ್ನರ್ ಅಸೋಸಿಯೇಟ್ಸ್. ಕಾಮಗಾರಿ ಕಾರ್ಯ ನಿರ್ವಹಿಸಿದವರು ಲೀಂಗ್ಟನ್ ಹೋಲ್ಡಿಂಗ್ಸ್ ಎಂಬ ಸಂಸ್ಥೆ. ಇದನ್ನು ನಿರ್ಮಿಸಲು ಏಳು ವರ್ಷಗಳಷ್ಟು ದೀರ್ಘ ಕಾಲ ಹಿಡಿಯಿತು. ಮನೆಯ ಒಂದೊಂದು ಕೊಠಡಿಗಳನ್ನು ವಿಶಿಷ್ಟವಾಗಿ ರೂಪಿಸಲಾಗಿದೆ. ಬಸಂತ್ ಆರ್. ರಸಿವಾಸಿಯಾ ಅಂಬಾನಿಯವರಿಗೆ ವಾಸ್ತು ಸಲಹೆಗಾರರಾಗಿದ್ದರು.

ಮನೆಯ ಒಳಗೆ ವಿಶಾಲವಾದ ಬಾಲ್ ರೂಂ, ಪ್ರೊಜೆಕ್ಷನ್ ಸ್ಕ್ರೀನ್ ಮತ್ತು ಒಂದು ಸಭಾಂಗಣ ಇದೆ. ಅತಿಥಿಗಳ ಕೋಣೆಯಲ್ಲಿ ದುಬಾರಿ ಪೇಂಟಿಂಗ್‍ಗಳಿಂದ ಅಲಂಕರಿಸಲ್ಪಟ್ಟ ಅಂಗಳ ಇದೆ. ಛಾವಣಿಯಲ್ಲಿ ಬೆಲೆಬಾಳುವ ಶಾಂಡೆಲೀರುಗಳು, ನೆಲಕ್ಕೆ ಹಾಸಿದ ದುಬಾರಿ ಕಾರ್ಪೆಟ್ಟುಗಳು ಅಲ್ಲಿನ ಸೌಂದರ್ಯವನ್ನು ಹೆಚ್ಚಿಸಿವೆ. ಮನರಂಜನೆಗಾಗಿಯೇ ಒಂದು ಮಹಡಿಯನ್ನು ಮೀಸಲಾಗಿಡಲಾಗಿದೆ. ಅಲ್ಲಿ ಅತ್ಯುತ್ತಮವಾದ ಥಿಯೇಟರ್, ಪ್ರೊಜೆಕ್ಷನ್ ರೂಮ್ ಇದ್ದು ಇದನ್ನು ಖಾಸಗಿ ಉಪಯೋಗಕ್ಕೆ ಮೀಸಲಾಗಿಡಲಾಗಿದೆ. ಮುಖೇಶ್ ಅಂಬಾನಿ, ಅವರ ಪತ್ನಿ ನೀತು ಅಂಬಾನಿ ಹಾಗೂ ಮೂರು ಜನ ಮಕ್ಕಳಿರುವ ಕುಟುಂಬ ವಾಸಿಸುವ ಈ ಮನೆಯನ್ನು ನೇರ್ಪಾಗಿಡಲು 600 ಸಿಬ್ಬಂದಿ ಸದಾ ಕೆಲಸದಲ್ಲಿ ತೊಡಗಿರುತ್ತಾರೆ.

ಒಂದು ಮಹಡಿಯಲ್ಲಿ ಜಿಮ್, ಪೂಲ್, ಜಕ್ಕುಜಿ, ಯೋಗ ಮತ್ತು ಡ್ಯಾನ್ಸ್ ಸ್ಟುಡಿಯೋ ಇದೆ. ಮನೆಯ ಬಾತ್ ರೂಮುಗಳಲ್ಲಿ ಆಮದಾದ ಕಮೋಡುಗಳು, ಸಿಂಕುಗಳು, ಸ್ನಾನದ ಟಬ್ಬುಗಳು ಮತ್ತು ಇನ್ನಿತರ ಅನೇಕ ಅನುಕೂಲಗಳನ್ನು ಕಲ್ಪಿಸಲಾಗಿದೆ. ಮನೆಯ ಮೇಲ್ಭಾಗದಲ್ಲಿ ಕುಳಿತು ಅರೇಬಿಯನ್ ಸಮುದ್ರವನ್ನು ನೋಡಬಹುದು. ಮುಂಬೈ ಮಹಾನಗರದ ದೃಶ್ಯ ಇಲ್ಲಿನಿಂದ ಕಾಣುತ್ತದೆ. ಮನೆಯನ್ನು ನೋಡುವ ಇಚ್ಚೆ ನಿಮಗಿದ್ದರೆ ದಕ್ಷಿಣ ಮುಂಬೈನ ಪೆಡ್ಡರ್ ರಸ್ತೆಯ ಬದಿಯಲ್ಲಿರುವ ಆಲ್ಟಾಮೌಂಟ್ ರಸ್ತೆಗೆ ಹೋಗಿ ಬನ್ನಿ.