ಉಕ್ಕಿನ ಸೇತುವೆ ವಿರೋಧಿಸಿ ಬಿಜೆಪಿ ಮಹಿಳಾ ಮೊರ್ಚಾ ವತಿಯಿಂದ ‘ಅಪ್ಪಿಕೋ ಚಳವಳಿ’

0
625

ಬೆಂಗಳೂರು: ನಗರದ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆಯನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿ ಭಾರತೀಯ ಜನತಾಪಕ್ಷ ಮಹಿಳಾ ಮೋರ್ಚಾ ವತಿಯಿಂದ ಇಂದು ನಗರದ ಮೌರ್ಯವೃತ್ತದಲ್ಲಿ ಗಾಂಧಿ ಪ್ರತಿಮೆ ಬಳಿಯ ಮರಗಳನ್ನ ಅಪ್ಪಿಕೊಳ್ಳುವ ಮೂಲಕ  ಬೃಹತ್ ಪ್ರತಿಭಟನೆ ನಡೆಸಲಾಯಿತು.

whatsapp-image-2016-10-27-at-10-40-43-am

ಮರಗಳನ್ನ ಅಪ್ಪಿಕೊಂಡು ಪ್ರತಿಭಟಿಸಿದ ಶೋಭಾಕರಂದ್ಲಾಜೆ, ತಾರಾ, ಶೃತಿ. ಬೆಂಗಳೂರಿಗೆ ಸ್ಟೀಲ್ ಬ್ರಿಡ್ಜ್ ಅಗತ್ಯವಿಲ್ಲ. ಉತ್ತರ ಪ್ರದೇಶ ಚುನಾವಣೆಗೆ ಹಣ ಒದಗಿಸಲು ಸಚಿವ ಜಾರ್ಜ್ ಅವರು ಕಮಿಷನ್ ಆಸೆಗಾಗಿ ಈ ಯೋಜನೆಗೆ ಕೈ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ.

whatsapp-image-2016-10-27-at-10-41-49-am

ವೃತ್ತದಲ್ಲಿದ್ದ ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಮಹಿಳಾ ಮೋರ್ಚಾ ಮುಖಂಡರು ಮರಗಳ ರಕ್ಷಣೆಗೆ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಸಂಸದೆ ಶೋಭಾಕರಂದ್ಲಾಜೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಉಕ್ಕಿನ ಸೇತುವೆ ನಿರ್ಮಾಣ ಮಾಡುವ ಮೂಲಕ ಸಾವಿರಾರು ಮರಗಳ ಮಾರಣ ಹೋಮಕ್ಕೆ ಸರ್ಕಾರ ಮುಂದಾಗಿದೆ. 1200 ಕೋಟಿ ಈ ಯೋಜನೆಯನ್ನು 1800 ಕೋಟಿಗಳಿಗೆ ಹೆಚ್ಚಳ ಮಾ‌‌ಡಿ 500 ಕೋಟಿ ಹಣವನ್ನು ಲೂಟಿ ಮಾಡಲು ಸರ್ಕಾರ ಮುಂದಾಗಿದೆ. ಉತ್ತರ ಪ್ರದೇಶ ಹಾಗೂ ಕರ್ನಾಟಕದ ಚುನಾವಣೆಗಳಿಗಾಗಿ ಹಣ ಸಂಗ್ರಹಿಸಿ ಹೈಕಮಾಂಡ್‌ಗೆ ನೀಡಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಈ ಯೋಜನೆ ಕುರಿತು ವೈಜ್ಞಾನಿಕ ಅಧ್ಯಯನ ಅತ್ಯಗತ್ಯವಾಗಿದೆ. ಉಕ್ಕಿನ ಸೇತುವೆ ನಿರ್ಮಾಣ ಕೈಬಿಟ್ಟು ಅಂಡರ್‌ಗ್ರೌಂಡ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ಸರ್ಕಾರ ವಿಶೇಷ ಯೋಜನೆ ತಯಾರಿಸಬೇಕು ಎಂದು ಆಗ್ರಹಿಸಿದ ಅವರು ಯಾವುದೇ ಕಾರಣಕ್ಕೂ ನಾಗರಿಕರ ತೆರಿಗೆ ಹಣವನ್ನು ಸರ್ಕಾರ ಲೂಟಿ ಮಾಡಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದರು.

ಉಕ್ಕಿನ ಸೇತುವೆ ಯೋಜನೆ ಮತ್ತೊಂದು ಎತ್ತಿನ ಹೊಳೆ ಯೋಜನೆಯಾಗಲಿದೆ. ಜಲಾಶಯವನ್ನೇ ನಿರ್ಮಾಣ ಮಾಡದೆ 4 ಸಾವಿರ ಕೋಟಿ ಪೈಪ್ ಲೈನ್ ಅಳವಡಿಕೆ ಮೂಲಕ ಸರ್ಕಾರ ಹಣ ಲೂಟಿ ಮಾಡುತ್ತಿದೆ. ಕಾರಣ ಉಕ್ಕಿನ ಸೇತುವೆ ಯೋಜನೆ ಮೂಲಕ ಹಣ ಲಪಟಾಯಿಸಲು ಮುಂದಾಗಿರುವ ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಉಕ್ಕಿನ ಸೇತುವೆ ನಿರ್ಮಾಣ ಕುರಿತು ಸರ್ವಪಕ್ಷಗಳ ಸಭೆ ಕರೆದಿದ್ದ ನಗರಾಭಿವೃದ್ಧಿ ಸಚಿವ ಜಾರ್ಜ್ ಅವರು ಸೇತುವೆ ನಿರ್ಮಾಣ ಯೋಜನೆ ಕುರಿತು ತಮ್ಮ ಅಭಿಪ್ರಾಯ ಮಂಡಿಸಲು ಶಾಸಕರು, ಸಂಸದರಿಗೆ ಅವಕಾಶವನ್ನೇ ನೀಡಲಿಲ್ಲ. ಕಾರಣ ಜನಪ್ರತಿನಿಧಿಗಳ ಅಭಿಪ್ರಾಯಪಡೆಯದೆ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ. ಕೂಡಲೇ ಯೋಜನೆಯನ್ನು ಸರ್ಕಾರ ಕೈಬಿಡಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮುಖಂಡರಾದ ತಾರಾ, ಶ್ರುತಿ, ಆಶಾರೆಡ್ಡಿ, ನಮೃತಾ, ಶಿಲ್ಪಾ, ಪದ್ಮ, ಮಂಜುಳಾ, ಲಕ್ಕಮ್ಮ, ಸುಲೋಚನಾ, ಸುಮಿತ್ರಮ್ಮ, ಲತಾ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.