ಉತ್ತರ ಭಾರತದ ಕಾಶಿಗೆ ಹೋಗೊಕ್ಕೆ ಆಗುತ್ತಿಲ್ಲ ಅಂತ ಬೇಜಾರ್ ಮಾಡಿಕೊಳ್ಳಬೇಡಿ, ಈ ದಕ್ಷಿಣ ಕಾಶಿ ದೇವಾಸ್ಥಾನಕ್ಕೆ ಭೇಟಿ ಕೊಟ್ಟರೆ ಕಾಶಿಗೆ ಹೋದಷ್ಟೇ ಪುಣ್ಯ ಸಿಗುತ್ತೆ…

0
1540

ಪಶ್ಚಿಮಾಭಿಮುಖೀಯಾದ ದೇವಾಲಯಗಳು ದೇಶಾದ್ಯಂತ ಕೇವಲ ಕೆಲವು ದೇವಾಲಯಗಳಿವೆ. ಈ ರೀತಿ ಪಶ್ಚಿಮಾಭಿಮುಖೀಯಾಗಿ ದ್ವಾರಗಳು ಇರುವುದಕ್ಕೆ ಹಲವು ಕುತೂಹಲಕಾರಿ ವಿಷಯಗಳು ಇವೆ. ಬಹುತೇಕವಾಗಿ ಪಶ್ಚಿಮಾಭಿಮುಖೀಯಾಗಿ ಹರಿಯುವ ನದಿಗಳ ತೀರದಲ್ಲಿರುವ ದೇವಾಲಯಗಳು ಪುರಾಣಗಳಲ್ಲಿ ಮಹತ್ವವನ್ನು ಪಡೆದುಕೊಂಡಿರುತ್ತವೆ. ಅಂಥಹದ್ದೇ ಒಂದು ವಿಶೇಷವಾದ ದೇವಸ್ಥಾನ ರಾಮನಗರ ಜಿಲ್ಲೆಯಲ್ಲಿದೆ.

ರಾಜ್ಯದಲ್ಲಿ ಪಶ್ಚಿಮಾಭಿಮುಖೀಯಾಗಿ ಹರಿಯುವ ನದಿ ತೀರದಲ್ಲಿ ಇರೋದು ಪುರಾಣ ಪ್ರಸಿದ್ಧ ದೇವಾಲಯ ಹೊಂದಿರುವುದರಲ್ಲಿ ರೇಷ್ಮೆ ನಗರಿ ರಾಮನಗರ ಕೂಡ ಒಂದಾಗಿದೆ. ರಾಮನಗರದ ಜೀವನದಿ ಎಂದೇ ಕರೆಯುವ ಅರ್ಕಾವತಿ ನದಿ ತೀರದಲ್ಲಿ ಅರ್ಕೇಶ್ವರಸ್ವಾಮಿ ದೇವಾಲಯ. ಪುರಾಣ ಪ್ರಸಿದ್ಧವಾದ ಮತ್ತು ತನ್ನದೇ ಆದ ಗತ ವೈಭವವನ್ನು ಹೊಂದಿರುವಂತಹ ಈ ದೇವಾಲಯ ದಕ್ಷಿಣ ಭಾರತದಲ್ಲಿಯೇ ತೀರ ಅಪರೂಪವಾದ ದೇವಸ್ಥಾನವಾಗಿದೆ.

ಕಾಶಿ ಉತ್ತರ ಭಾರತದಲ್ಲಿನ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಪಶ್ಚಿಮಾಭಿಮುಖೀಯಾಗಿ ಹರಿಯುವ ಗಂಗಾನದಿ ತೀರದಲ್ಲಿ ಕಾಶಿ ವಿಶ್ವನಾಥ ನೆಲೆಸಿದ್ದಾನೆ. ಅದೇ ರೀತಿ ಪಶ್ಚಿಮಾಭಿಮುಖೀಯಾಗಿ ಹರಿಯುವ ಅರ್ಕಾವತಿ ನದಿ ತೀರದಲ್ಲಿ ಅರ್ಕೇಶ್ವರಸ್ವಾಮಿ ದೇವಾಲಯವಿದೆ. ಹಾಗಾಗಿ ದಕ್ಷಿಣ ಕಾಶಿ ಅಂತಲೇ ರಾಮನಗರದ ಅರ್ಕೇಶ್ವರಸ್ವಾಮಿ ದೇವಾಲಯವನ್ನು ಕರೆಯಲಾಗುತ್ತದೆ. ಅಲ್ಲದೆ ಕಾಶಿ ದೇವಾಲಯ ಯಾವ ರೀತಿಯಲ್ಲಿ ಪಶ್ಚಿಮಾಭಿಮುಖವಾಗಿ ದೇವಾಲಯದ ದ್ವಾರವನ್ನು ಹೊಂದಿದೆಯೋ ಅದೇ ರೀತಿ ಅರ್ಕೇಶ್ವರ ದೇವಾಲಯ ಕೂಡ ಪಶ್ಚಿಮಾಭಿಮುಖವಾಗಿ ದ್ವಾರವನ್ನು ಹೊಂದಿದೆ ಹಾಗಾಗಿ ರಾಮನಗರದ ಅರ್ಕೇಶ್ವರಸ್ವಾಮಿ ದೇವಾಲಯವನ್ನು ದಕ್ಷಿಣ ಕಾಶಿ ಅಂತಲೇ ಕರೆಯಲಾಗುತ್ತದೆ.

ಅಂದಹಾಗೆ ಈ ಅರ್ಕೇಶ್ವರ ದೇವಸ್ಥಾನಕ್ಕೆ ತನ್ನದೇ ಆದ ಪುರಾಣ ಪ್ರತಿಗಳು ಹಾಗೂ ಐತಿಹಾಸಿಕವಾದಂಥಹ ಇತಿಹಾಸವನ್ನು ಹೊಂದಿದೆ. ಸಪ್ತ ಬೆಟ್ಟಗಳನ್ನು ಹೊಂದಿದ ನಾಡು ಎಂದೇ ಕರೆಯುವ ರಾಮನಗರದಲ್ಲಿ ಸಪ್ತ ಋಷಿಗಳು ನೆಲೆಸಿದ್ದರು ಎಂಬ ಪುರಾಣಗಳಿವೆ. ಈ ಸಪ್ತ ಋಷಿಗಳು ಈ ಅರ್ಕೆಶ್ವರಸ್ವಾಮಿ ದೇವಸ್ಥಾನವನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುತ್ತಿದ್ದರು ಎಂಬ ಐತಿಹ್ಯವಿದೆ. ಇನ್ನು ಈ ಅರ್ಕೆಶ್ವರ ದೇವಾಲಯವು ನಿರ್ಮಾಣವಾಗಿದ್ದು 17 ನೇ ಶತಮಾನದಲ್ಲಿ. ಅಂದಿನ ವಿಜಯನಗರದ ರಾಜ ಮನೆತನದ ತಿಮ್ಮರಸ ರಾಜ ಈ ದೇವಾಲಯವನ್ನು ಕಟ್ಟಿಸಿದರು ಎಂದು ಹೇಳಲಾಗುತ್ತದೆ.

ಅರ್ಕೇಶ್ವರನಿಗೆ ಸೋಮೇಶ್ವರ ಎಂಬ ಹೆಸರಿತ್ತು. ಅಂದು ಸಿಂಡುಕಟ್ಟು ಎಂಬ ಬೆಟ್ಟದಲ್ಲಿ ಈ ಸೋಮೇಶ್ವರನ ಲಿಂಗವನ್ನು ಇಟ್ಟು ಪೂಜಿಸಲಾಗುತ್ತಿತ್ತು. ಕಾಲ ಕ್ರಮೇಣ ಪಾಳೆಗಾರರ ಅದಿಪತ್ಯಕ್ಕೆ ಒಳಪಟ್ಟ ವೇಳೆಯಲ್ಲಿ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ನಡೆಸಲಾಯಿತು. ಸೋಮೇಶ್ವರ ಎಂದು ಕರೆಯಲ್ಪಡುವ ಈ ಅರ್ಕೇಶ್ವರ ದೇವಾಲಯಕ್ಕೆ ರಾಮನಗರ ತಾಲ್ಲೂಕಿನ ಈಗಿನ ಇಬ್ಬಲುಕಲ್ಲು ದೇವಾಲಯದಲ್ಲಿದ್ದ ಲಿಂಗ ಕಾಶಿಯಿಂದ ತಂದು ಪ್ರತಿಷ್ಠ ಮಾಡಲಾಗಿತ್ತು. ಇನ್ನು ಈ ಅರ್ಕೇಶ್ವರಸ್ವಾಮಿ ದೇವಾಲಯ ಅನೇಕವಿಶಿಷ್ಠಗಳಿಂದ ಕೂಡಿದೆ. ಕಾಶಿಯ ವಿಶ್ವನಾಥ ದೇವಾಲಯದಂತೆಯೇ ಈ ದೇವಾಲಯ ಕೂಡ ಇದೆ. ಸಾಲಿಗ್ರಾಮ ಶೈಲಿಯಲ್ಲಿರುವ ಲಿಂಗವು ಇದಾಗಿದ್ದು ಪಶ್ಚಿಮಾಭಿಮುಖವಾಗಿ ನೆಲೆಸಿರುವಂಥಹದ್ದು. ಸಾಮಾನ್ಯವಾಗಿ ಎಲ್ಲ ಲಿಂಗಗಳು ಸಹ ಪೂಜೆ ಪುನಸ್ಕಾರದ ವೇಳೆ ಅಭಿಷೇಕ ನಡೆಸಿದ ತೀರ್ಥ, ನೀರು ಇನ್ನಿತರವಾದ ಅಭಿಷೇಕದ ತಿರ್ಥವನೆಲ್ಲ ಎಡಭಾಗಕ್ಕೆ ಸಾಮಾನ್ಯವಾಗಿ ಹರಿದು ಬರುತ್ತದೆ. ಆದರೆ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಬಲಭಾಗಕ್ಕೆ ಅಭಿಷೇಕದ ತೀರ್ಥವೆಲ್ಲ ಹರಿದು ಬರುತ್ತದೆ. ಅದೇ ರೀತಿ ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ಕೂಡ ಬಲಭಾಗಕ್ಕೆ ಅಭಿಷೇಕದ ತೀರ್ಥವೆಲ್ಲ ಹರಿದು ಬರುತ್ತದೆ. ಹಾಗಾಗಿ ಕಾಶಿಯಲ್ಲಿ ಏನೇನು ವಿಶೇಷತೆ ಇದೆ ಅದೇ ರೀತಿಯಾದ ವಿಶೇಷತೆಗಳನ್ನು ನಾವು ಈ ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ಕಾಣಸಿಗುತ್ತದೆ.

ಉತ್ತರ ಭಾರತದ ಕಾಶಿ ವಿಶ್ವನಾಥನ ದರ್ಶನ ಪಡೆಯಲಾಗದವರು ಈ ದಕ್ಷಿಣ ಕಾಶಿ ಎನ್ನಲಾಗುತ್ತಿರುವ ಅರ್ಕೇಶ್ವರನ ಸನ್ನಿಧಿಗೆ ತೆರಳಿ ತಮ್ಮ ಇಷ್ಟಾರ್ಥಗಳನ್ನು ನೆನೆದು ಪೂಜೆ ಪುನಸ್ಕಾರಗಳನ್ನ ಸಲ್ಲಿಸುತ್ತಿದ್ದಾರೆ. ಅರ್ಕೇಶ್ವರ ಸನ್ನಿಧಿಯಲ್ಲಿ ವಿಶೇಷವಾದ ಶಕ್ತಿ ಇದೆ. ವಿದ್ಯೆ ಉದ್ಯೋಗಕ್ಕಾಗಿ ವಿಶೇಷ ಪೂಜೆ ಸಲ್ಲಿಕೆ, ಹಬ್ಬದ ದಿನಗಳಲ್ಲಿ ವಿಶೇಷ ಉತ್ಸವ ನಡೆಯುತ್ತದೆ. ಹಾಗಾಗಿ ಇಷ್ಟಾರ್ಥ ಸಿದ್ಧಿಗೆ ಹರಿಕೆ ಹೊರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.