ಯುದ್ಧ ನಡೆದರೆ ಮೊದಲು ನಿಲ್ಲೋ ಭಾರತದ ಟ್ಯಾಂಕ್‍ ಇದು: ಇದರಲ್ಲಿ ಯೋಧರ ಜೀವ ರಕ್ಷಿಸುವ ವ್ಯವಸ್ಥೆಯೇ ಇಲ್ಲ!

0
987

ಭಾರತ ಒಂದು ರೀತಿಯಲ್ಲಿ ಯುದ್ಧ ಮನಸ್ಥಿತಿಯಲ್ಲಿದೆ. ಅಕ್ಕಪಕ್ಕದ ಪಾಕಿಸ್ತಾನ ಮತ್ತು ಚೀನಾ ದೇಶಗಳು ಯಾವಾಗ ಮುಗಿಬೀಳುತ್ತವೋ ಎಂಬ ವಾತಾವರಣ ನೆಲೆಸಿದೆ. ಸರಕಾರದ ಕ್ರಮಗಳನ್ನು ಗಮನಿಸಿದರೆ ಮುನ್ನೆಚ್ಚರಿಕಾ ಕ್ರಮವಾಗಿ ಪರೋಕ್ಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅನಿಸುತ್ತಿದೆ, ಒಂದು ವೇಳೆ ಯುದ್ಧ ನಡೆದೇ ಬಿಟ್ಟಿತು ಅಂದರೆ ದೇಶದ ಪರ ಮೊದಲು ನುಗ್ಗುವುದೇ ಈ ಟ್ಯಾಂಕ್‍!

ಭಾರತದ ಭವಿಷ್ಯದ ಯುದ್ಧಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಫಿರಂಗಿ ಹೊತ್ತ ಈ ಟ್ಯಾಂಕ್‍ ಹೆಸರು `ಟಿ-90 ಎಂಸ್‍ ತೆಗ್ಲಿ’ ಈ ಯುದ್ಧ ಟ್ಯಾಂಕ್‍ ನಿರ್ಮಾಣದ ಅನುಮತಿಯನ್ನು ಚೆನ್ನೈನ ಅವಡಿ ಪಡೆದುಕೊಂಡಿದೆ.

ಆದರೆ ಭವಿಷ್ಯದ ಯುದ್ಧಗಳಲ್ಲಿ ಪ್ರಮುಖವಾಗಿ ಇರಬೇಕಾದ `ಆಕ್ಟಿವ್‍ ಪ್ರೊಟೆಕ್ಷನ್‍ ಸಿಸ್ಟಮ್‍’ ಸ್ವಯಂ ಚಾಲಿತ ರಕ್ಷಣಾ ವ್ಯವಸ್ಥೆ ಈ ಟ್ಯಾಂಕ್‍ನಲ್ಲಿ ಅಳವಡಿಸಲಾಗಿಲ್ಲ. ಅಂದರೆ ತನ್ನತ್ತ ನುಗ್ಗಿಬರುವ ಎದುರಾಳಿಯ ಕ್ಷಿಪಣಿಗಳನ್ನು ಹೊಡೆದುರುಳಿಸುವ ವ್ಯವಸ್ಥೆಯೇ ಈ ಟ್ಯಾಂಕ್‍ನಲ್ಲಿ ಇಲ್ಲ! ಈ ವ್ಯವಸ್ಥೆ ಅನಿವಾರ್ಯವಾಗಿದ್ದು, ಹಲವಾರು ಯೋಧರ ಜೀವ ರಕ್ಷಿಸಲಿದೆ.

ಈಗಾಗಲೇ ಗಾಜಾದಲ್ಲಿ ಇಸ್ರೇಲ್‍ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ರಕ್ಷಣಾ ವ್ಯವಸ್ಥೆ ಹತ್ತಾರು ಟ್ಯಾಂಕ್‍ಗಳಲ್ಲಿದ್ದ ಯೋಧರ ಜೀವ ರಕ್ಷಿಸಿತ್ತು. ಅದೇ ರೀತಿ ಸಿರಿಯಾದಲ್ಲಿ ಕಾರ್ಯಾಚರಣೆ ನಡೆಸಿರುವ ರಷ್ಯಾ ಸೇನಾ ಕೂಡ ಈ ರಕ್ಷಣಾ ವ್ಯವಸ್ಥೆಯಿಂದ ಮೇಲುಗೈ ಸಾಧಿಸಿದೆ.

ದಶಕಗಳಿಂದ ಟ್ಯಾಂಕ್‍ಗಳಲ್ಲಿರುವ ಯೋಧರ ರಕ್ಷಿಸಲು ಹಾಗೂ ಎದುರಾಳಿಗಳು ಸಿಡಿಸುವ ಕ್ಷಿಪಣಿಗಳನ್ನು ಹೊಡೆದುರುಳಿಸಲು ಯೋಧರ ತಂಡ ಕಾವಲಿರುತ್ತಿತ್ತು. ಆದರೆ ಆಧುನಿಕ ಯುಗದಲ್ಲಿ ಟ್ಯಾಂಕ್‍ಗಳಲ್ಲೇ ಸ್ವಯಂ ಚಾಲಿತ ರಕ್ಷಣಾ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಇದರಿಂದ ಶಸ್ತ್ರಸಜ್ಜಿತ ಯೋಧರ ಪಡೆಯ ನೆರವು ಅಗತ್ಯ ಬೀಳುವುದಿಲ್ಲ. ಆದರೆ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಈ ಯುದ್ಧ ಟ್ಯಾಂಕ್‍ನಲ್ಲಿ ಅತ್ಯಂತ ಮಹತ್ವ ಹಾಗೂ ಅನಿವಾರ್ಯವಾದ ರಕ್ಷಣಾ ವ್ಯವಸ್ಥೆಯೇ ಇಲ್ಲ. ಮತ್ತೊಂದು ವಿಪರ್ಯಾಸ ಸಂಗತಿ ಎಂದರೆ ದೇಶದ ಯಾವುದೇ ಟ್ಯಾಂಕ್‍ಗಳಲ್ಲೂ ಈ ವ್ಯವಸ್ಥೆ ಇಲ್ಲದಿರುವುದು.

ಏನಿದು ಆಕ್ಟಿವ್‍ ಪ್ರೊಟೆಕ್ಷನ್‍ ಸಿಸ್ಟಮ್‍?

ಆಕ್ಟಿವ್‍ ಪ್ರೊಟೆಕ್ಷನ್‍ ಸಿಸ್ಟಮ್‍ ಅಂದರೆ ಟ್ಯಾಂಕ್‍ನ ಮೇಲೆ ರಾಡರ್‍ಗಳನ್ನು ಅಳವಡಿಸಲಾಗಿರುತ್ತದೆ. ಇದು ಟ್ಯಾಂಕ್‍ನತ್ತ ನುಗ್ಗಿಬರುವ ಕ್ಷಿಪಣಿ ಅಥವಾ ಶೆಲ್‍ ಹಾಗೂ ದೊಡ್ಡ ಗನ್‍ಗಳಿಂದ ಸಿಡಿಯುವ ದೊಡ್ಡ ಬುಲೆಟ್‍ಗಳನ್ನು 50 ಮೀ.ದೂರದಲ್ಲೇ ಗುರುತಿಸಿ ಕೂಡಲೇ ಎಚ್ಚರಿಕೆ ಸಂದೇಶ ರವಾನಿಸುತ್ತದೆ. ಇನ್ನೂ ಅಭಿವೃದ್ಧಿಪಡಿಸಿದ ಟ್ಯಾಂಕ್‍ಗಳು ಅದನ್ನು ಮಧ್ಯದಲ್ಲೇ ಹೊಡೆದುರುಳಿಸುತ್ತದೆ.

ರಷ್ಯಾದ `ಅರೆನಾ’ ಮತ್ತು ಇಸ್ರೇಲ್‍ನ `ಟ್ರೋಫಿ’ ಟ್ಯಾಂಕ್‍ಗಳಲ್ಲಿ ಆಕ್ಟಿವ್‍ ಪ್ರೊಟೆಕ್ಷನ್‍ ಸಿಸ್ಟಮ್‍ ಅಳವಡಿಸಲಾಗಿದೆ. ಬಂಡುಕೋರರ ಬಳಿ ಇದ್ದ ಅಮೆರಿಕಾ ಸ್ವತಃ ಅಭಿವೃದ್ಧಪಡಿಸಿದ ಎಂ1 ಎ1 ಅಬ್ರಾಹಮ್ಸ್‍ ಮತ್ತು ಜರ್ಮನಿಯ ಲಿಯೊಪಾರ್ಡ್‍ 2ಎ4 ಕ್ಷಿಪಣಿಗಳನ್ನು ರಷ್ಯಾ ಟ್ಯಾಂಕ್‍ಗಳು ಯಶಸ್ವಿಯಾಗಿ ಹೊಡೆದುರುಳಿಸಿವೆ.

ಇತ್ತೀಚೆಗೆ ರಷ್ಯಾ ಜೊತೆ ಬಹುಕೋಟಿ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುವಾಗ ಈ ವಿಷಯವನ್ನು ಪರಿಗಣಿಸಲಾಗಿತ್ತು. ಆದರೆ ಭಾರತಿಯ ಸೇನಾ ವ್ಯವಸ್ಥೆಗೆ ಇದು ಪೂರಕವಲ್ಲ ಎಂಬ ಕಾರಣಕ್ಕೆ `ಅರೆನಾ’ ಖರೀದಿಯಿಂದ ಭಾರತ ಹಿಂದೆ ಸರಿದಿತ್ತು. ಇದೀಗ ಇಸ್ರೇಲ್‍ನ `ಟ್ರೋಫಿ’ ಯನ್ನು ಭಾರತ ಖರೀದಿಸದೇ ಇದ್ದರೆ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ದೊಡ್ಡ ಲೋಪ ಉಂಟಾಗುವ ಸಾಧ್ಯತೆ ಇದೆ.

ಯೋಧರ ಜೀವ ರಕ್ಷಿಸುವ ಹಾಗೂ ಯುದ್ಧದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿರುವ ಆಕ್ಟಿವ್ ಪ್ರೊಟೆಕ್ಷನ್ ಸಿಸ್ಟಮ್‍ ಖರೀದಿಗೆ ಕೂಡ ಸರಕಾರ ಹಿಂದೇಟು ಹಾಕಿದೆ. ಪ್ರತಿಯೊಂದು ಟ್ಯಾಂಕ್‍ಗೆ ಇದನ್ನು ಅಳವಡಿಸಬೇಕಾದರೆ 2 ಕೋಟಿ ರೂ. ವೆಚ್ಚವಾಗಲಿದೆ. ಇಷ್ಟು ದೊಡ್ಡ ಮೊತ್ತ ಭರಿಸಲು ಅಸಾಧ್ಯ ಎಂಬ ಕಾರಣ ನೀಡಿದೆ. ಅಲ್ಲದೇ ದೇಶದಲ್ಲೇ ಈ ರೀತಿಯ ತಂತ್ರಜ್ಞಾನವನ್ನು ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದೇ ಎಂದು ಅಧ್ಯಯನ ನಡೆಸಲು ಸಮಿತಿ ರಚಿಸಿದೆ. ಮೇಕ್ ಇನ್‍ ಇಂಡಿಯಾ ಯೋಜನೆಯಡಿ ವಿದೇಶೀ ಸಂಸ್ಥೆ ಜೊತೆ ಸೇರಿ ನಿರ್ಮಿಸುವ ಪ್ರಸ್ತಾಪವನ್ನೂ ಮುಂದಿಟ್ಟಿದೆ.

ಆದರೆ ಸರಕಾರದ ಈ ವಿಳಂಬ ನೀತಿ ಭಾರತೀಯ ಸೇನೆ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಸೇನಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.