ಕೈ, ಕಮಲ’ ವನ್ನು ಗುಡಿಸಿದ ಪೊರಕೆ; ದೆಹಲಿಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಿದ ಕ್ರೆಜಿವಾಲ್; ಸತತ ಸೋಲಿನೊಂದಿಗೆ ಮುಗಿಯಿತೇ ಅಮಿತ್ ಶಾ ಮ್ಯಾಜಿಕ್??

0
318

ದೆಹಲಿಯಲ್ಲಿ ಕ್ರೆಜಿವಾಲ್ ಮತ್ತೆ ಕಮಾಲ್ ಮಾಡಿದ್ದು, ಸಮಿಕ್ಷೇಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ಕಾಂಗ್ರೆಸ್, ಬಿಜೆಪಿ ಪಕ್ಷವನ್ನು ಸಂಪೂರ್ಣವಾಗಿ ಗುಡಿಸಿದೆ. ಆಮ್ ಆದ್ಮಿ 63, ಬಿಜೆಪಿ 7 ಸ್ಥಾನ ಪಡೆದರೆ ಕಾಂಗ್ರೆಸ್ ಈ ಬಾರಿಯೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಲೆಕ್ಕಾಚಾರ ನೋಡಿದರೆ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳಿಸಿದೆ. ಅಷ್ಟೇ ಅಲ್ಲದೇ ಶೇಖಡವಾರು ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. 2015ರಲ್ಲಿ ಆಪ್ ಶೇ.54, ಬಿಜೆಪಿ ಶೇ.32, ಕಾಂಗ್ರೆಸ್ ಶೇ.9 ರಷ್ಟು ಮತ ಪಡೆದಿದ್ದರೆ ಈ ಬಾರಿ ಆಪ್ ಶೇ.53, ಬಿಜೆಪಿ ಶೇ.38, ಕಾಂಗ್ರೆಸ್ ಶೇ.4 ರಷ್ಟು ಮತ ಪಡೆದಿದೆ.

ಹೌದು ಇಡೀ ದೇಶ ಪ್ರಧಾನಿ ನರೇಂದ್ರ ಮೋದಿ ಅವರ ಜಪದಲ್ಲಿದ್ದರು ದೆಹಲಿ ಜನ ಯಾವ ಜಪದಲ್ಲಿದ್ದಾರೆ ಎನ್ನುವುದು ಇಂದು ನಡೆದ ದೆಹಲಿ ಚುನಾವಣಾ ಪಲಿತಾಂಶ ತೋರಿಸಿದ್ದು, ಮೋದಿ ಅಲೆ ಮತದಾರನನ್ನು ಪ್ರಭಾವಿಸಲೇ ಇಲ್ಲ. ಹೀಗೆ ಮೋದಿ ಅಲೆ ಮತ್ತು ಇತ್ತೀಚೆಗೆ ಬಲಪಂಥೀಯ ವಿಚಾರಧಾರೆಗಳು ರಾಷ್ಟ್ರದಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತಿದ್ದಾಗ್ಯೂ ದೆಹಲಿಯಲ್ಲಿ ಆಪ್ ಮತ್ತೊಮ್ಮೆ ಗೆಲುವು ಸಾಧಿಸಿ ಇಡೀ ರಾಷ್ಟ್ರ ರಾಜಕಾರಣ ಹುಬ್ಬೇರುವಂತೆ ಮಾಡಿದೆ. ಲೆಕ್ಕಾಚಾರದಂತೆ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲ 7 ಸ್ಥಾನಗಳನ್ನು ಗೆದ್ದುಕೊಂಡಿದ್ದರಿಂದ ವಿಧಾನಸಭಾ ಚುನಾವಣೆಯಲ್ಲೂ ಕಮಲ ಅರಳಿ ಅಧಿಕಾರಕ್ಕೆ ಏರಲಿದ್ದೇವೆ ಎನ್ನಲಾಗಿತ್ತು, ಆದರೆ ಚಾಣಕ್ಯನ ತಂತ್ರಗಾರಿಕೆ ಸೋಲಾಗಿದೆ.

ಆಮ್​ ಆದ್ಮಿ ಪಕ್ಷದ ನಿರಂತರ ಗೆಲುವಿಗೆ ಕಾರಣವೇನು?

ಶಿಕ್ಷಣ, ವೈದ್ಯಕೀಯ, ಸಾರಿಗೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಸೇವೆ ಎಂದೇ ಪರಿಗಣಿಸಿದ್ದ ದೆಹಲಿ ಆಮ್ ಆದ್ಮಿ ಪಕ್ಷ ಕಳೆದ 5 ವರ್ಷದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ನೀಡಿರುವ ಒತ್ತು ಅತ್ಯಂತ ಗಮನಾರ್ಹ. ಮೂಲಭೂತ ಸೌಲಭ್ಯಗಳ ವಿಚಾರದಲ್ಲಿ ದೇಶದ ಇತರೆ ಯಾವ ರಾಜ್ಯವೂ ಮಾಡದ ವಿನೂತನ ಪ್ರಯೋಗಕ್ಕೆ ಪ್ರಾಮಾಣಿಕ ಕೆಲಸಕ್ಕೆ ಆಪ್ ಸರ್ಕಾರ ಮುಂದಾಗಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಯೋಜನೆಗಳ ಜಾರಿಗೆ ಮುಂದಾಗಿದ್ದ ದೆಹಲಿ ಸರ್ಕಾರ ಮೊದಲು ಮಾಡಿದ್ದೇ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಕಲಿಕಾ ವಿಧಾನಗಲ್ಲಿನ ಬದಲಾವಣೆ.

ಶಾಲಾ ಮಕ್ಕಳ ಕಲಿಕೆಯನ್ನು ದ್ವಿಗುಣಗೊಳಿಸುವ ಸಲುವಾಗಿ ಶಾಲಾ ಮಟ್ಟದಲ್ಲೇ ಕುಟುಂಬ ವ್ಯವಹಾರಗಳ ಪಠ್ಯಕ್ರಮ ಅಳವಡಿಸಲಾಗಿತ್ತು. ಇದಕ್ಕೆಂದು ಶಿಕ್ಷಕರಿಗೆ ವಿಶೇಷ ತರಬೇತಿ, ಅನ್ವಯಿಕ ವಿಜ್ಞಾನಗಳ ವಿಶ್ವಾವಿದ್ಯಾಲಯ ಸ್ಥಾಪಿಸಲಾಗಿತ್ತು. ಇದಕ್ಕೆಂದು 15 ಸಾವಿರ ಕೋಟಿ ಹಣ ವ್ಯಯಿಸಲಾಗಿತ್ತು. ಶಿಕ್ಷಣದ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಗಮನವಹಿಸಿದ್ದ ಆಪ್ ಸರ್ಕಾರ ದೆಹಲಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿತ್ತು. ಅತ್ಯಂತ ಕಡಿಮೆ ದರದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಮನೆ ಬಾಗಿಲಿನ ವಿತರಣಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದ ಅರವಿಂದ ಕೇಜ್ರಿವಾಲ್ ಪಡಿತರ ವಸ್ತು ಸೇರಿದಂತೆ ಸುಮಾರು 100 ಸೇವೆಗಳನ್ನು ಮನೆಗೆ ತಲುಪಿಸುವ ಯೋಜನೆಗೆ ಮುಂದಾಗಿದ್ದರು. ಇದಕ್ಕೆಂದು 500 ಕೋಟಿ ಮೀಸಲಿಡಲಾಗಿತ್ತು.

ಬಿಜೆಪಿ ಸೋಲಿಗೆ ಕಾರಣ ಏನು?

ಕೇಂದ್ರ ಸರ್ಕಾರ ಹಿಂದೂ-ಮುಸ್ಲಿಂ, ಸಿಎಎ-ಎನ್​ಆರ್​ಸಿ-ಎನ್​ಪಿಆರ್​, ಕಾಶ್ಮೀರ, ಕಲಂ 370, ಪಾಕಿಸ್ತಾನ-ಚೀನಾ, ತಲಾಖ್ ಎಂದು ಮಾತನಾಡುತ್ತಿದ್ದ ಸಂದರ್ಭದಲ್ಲಿ ದೆಹಲಿ ಸರ್ಕಾರ ಕೋಮು ಹೇಳಿಕೆಗಳನ್ನು ಪಕ್ಕಕ್ಕಿಟ್ಟು ಶಿಕ್ಷಣ, ವೈದ್ಯಕೀಯ, ಸಾರಿಗೆ, ಮಹಿಳಾ ರಕ್ಷಣೆ ಮತ್ತು ಸಬಲೀಕರಣ ಎಂದು ಅಭಿವೃದ್ಧಿಯ ಮಾತುಗಳನ್ನು ಆಡುತ್ತಿತ್ತು. ಜನರಿಗೆ ಅವಶ್ಯಕವಾದ ವಿಚಾರಗಳ ಕುರಿತು ಧ್ವನಿ ಎತ್ತಿತ್ತು. ಭಾಗಶಃ ಈ ಮಾತುಗಳು ದೆಹಲಿ ಚುನಾವಣೆ 2020 ರಲ್ಲೂ ಪ್ರಭಾವ ಬೀರಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಷ್ಟೇ ಅಲ್ಲದೆ ಅಮಿತ್ ಶಾ ತಂದ ಸಿಎಎ, ಎನ್‍ಆರ್ಸಿ ವಿರೋಧಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳು ಆಪ್‍ಗೆ ಬಿದ್ದಿತ್ತು. ಚುನಾವಣೆಗೆ ನಾಯಕತ್ವದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಮುಖವನ್ನು ಇಟ್ಟುಕೊಂಡು ಬಿಜೆಪಿ ಮತ ಕೇಳಿತ್ತು. ಇದರಿಂದಾಗಿ ಚುನಾವಣೆ ಕೇಂದ್ರ ಸರ್ಕಾರ ವರ್ಸಸ್ ಕೇಜ್ರಿವಾಲ್ ಎಂದೇ ಬಿಂಬಿತವಾಗಿತ್ತು. ಕೇಜ್ರಿವಾಲ್ ಎದುರು ಸಿಎಂ ಅಭ್ಯರ್ಥಿಯನ್ನು ಬಿಜೆಪಿ ಘೋಷಣೆ ಮಾಡಿರಲಿಲ್ಲ. ಡಾ. ಹರ್ಷವರ್ಧನ್, ಮನೋಜ್ ತಿವಾರಿ ಬೆಂಬಲಿಗರ ಕಿತ್ತಾಟದಿಂದಾಗಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಹಿರಂಗವಾಗಿತ್ತು. ಬಿಜೆಪಿ ಅಭಿವೃದ್ಧಿ ವಿಚಾರ ಬಿಟ್ಟು ಶಾಹೀನ್ ಭಾಗ್, ಪಾಕ್ ವಿಚಾರಕ್ಕೆ ಹೆಚ್ಚು ಒತ್ತು ನೀಡಿತ್ತು. ಇದರ ಜೊತೆ “ಕೇಂದ್ರಕ್ಕೆ ಮೋದಿ, ದೆಹಲಿಗೆ ಕೇಜ್ರಿವಾಲ್” ಎಂಬ ನಿಲುವಿಗೆ ಮತದಾರರು ಬಂದ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಮತ್ತು ಕೈಯನ್ನು ಪೊರಕೆ ಗುಡಿಸಿ ಹಾಕಿದೆ ಎನ್ನಲಾಗಿದೆ.