ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿ ಬಿಡುಗಡೆ; ಭಾರತೀಯ ಪೌರರಲ್ಲ ಎಂದ ಕೇಂದ್ರ ಗೃಹ ಸಚಿವಾಲಯ 19.06 ಲಕ್ಷ ಜನ ಹೊರಕ್ಕೆ??

0
138

ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಸುಮಾರು 19.06 ಲಕ್ಷ ಜನರು ಭಾರತೀಯ ಪೌರರಲ್ಲ ಎಂದು ಹೇಳಲಾಗಿದೆ. ಎನ್ ಆರ್ ಸಿ ದಾಖಲಾತಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಒಟ್ಟಾರೆ 3 ಕೋಟಿಯ 30 ಲಕ್ಷದ 27 ಸಾವಿರದ 661 ಮಂದಿ ಅರ್ಜಿ ಸಲ್ಲಿಸಿದ್ದರು. ಸಂವಿಧಾನ ವಿಧಿ 4(3)ರಡಿಯಲ್ಲಿ ಜನರು ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಅಂತಿಮ ಎನ್ ಆರ್ ಸಿ ವರದಿಯಲ್ಲಿ 3 ಕೋಟಿಯ 11 ಲಕ್ಷದ 21 ಸಾವಿರದ 4 ಮಂದಿ ಅಸ್ಸಾಂ ನಾಗರಿಕತೆಗೆ ಅರ್ಹರಾಗಿದ್ದು, ಅರ್ಜಿ ಸಲ್ಲಿಸದವರು ಹಾಗೂ ಅನರ್ಹ ಅರ್ಜಿಗಳು ಸೇರಿ 19 ಲಕ್ಷದ 6 ಸಾವಿರದ 657 ಮಂದಿ ಅಸ್ಸಾಂ ನಾಗರಿಕರ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ದೇಶದಿಂದ 19 ಲಕ್ಷ ಜನ ಹೊರಕ್ಕೆ?

ಹೌದು ಅಸ್ಸಾಂ ಸರ್ಕಾರ ಶನಿವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್​ಆರ್​ಸಿ) ಅಂತಿಮ ಪಟ್ಟಿಯ ಪ್ರಕಾರ 19.06 ಲಕ್ಷ ಜನರು ಭಾರತೀಯ ಪೌರರಲ್ಲ ಎಂದು ಹೇಳಲಾಗಿದೆ. ಹಾಗೆಂದು ತಕ್ಷಣವೇ ಇವರನ್ನು ಬಂಧಿಸದಿರಲು ಹಾಗೂ ಅಕ್ರಮ ನಿವಾಸಿಗಳು ಎಂದು ಘೋಷಿಸದಿರಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿದ್ದರೆ, ಅವುಗಳನ್ನು ಒದಗಿಸಿ ತಮ್ಮ ಪೌರತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಲು ಇವರೆಲ್ಲರಿಗೂ ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಇವರೆಲ್ಲರ ನೆರವಿಗಾಗಿ 400 ವಿದೇಶಿಗರ ನ್ಯಾಯಾಧಿಕರಣ ಸ್ಥಾಪಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.

ಇದುವರೆಗೆ 200 ವಿದೇಶಿಗರ ನ್ಯಾಯಾಧಿಕರಣ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ಇನ್ನೂ 200 ನ್ಯಾಯಾಧಿಕರಣ ಸ್ಥಾಪಿಸಲು ನಿರ್ಧರಿಸಲಾಗಿದೆ. ಭಾರತೀಯ ಪೌರರಲ್ಲ ಎಂದು ಹೇಳಲಾಗಿರುವ 19.06 ಲಕ್ಷ ಜನರಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶ ನೀಡುವ ಸಲುವಾಗಿ ಅವರೆಲ್ಲರು ಇರುವ ಪ್ರದೇಶಗಳಿಗೆ ಹತ್ತಿರವಾಗಿ ಇವುಗಳನ್ನು ಸ್ಥಾಪಿಸಲಾಗುವುದು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ರಾಜಕೀಯ) ಕುಮಾರ್​ ಸಂಜಯ್​ ಕೃಷ್ಣ ತಿಳಿಸಿದ್ದಾರೆ.

ಎನ್​ಆರ್​ಸಿಯಿಂದ ಕೈಬಿಡಲಾಗಿರುವವರನ್ನು ತಕ್ಷಣವೇ ಅಕ್ರಮ ನಿವಾಸಿಗಳು ಎಂದು ಘೋಷಿಸುವುದಿಲ್ಲ. ಬದಲಿಗೆ ಮೊದಲು ವಿದೇಶಿಗರ ನ್ಯಾಯಾಧಿಕರಣದ ಎದುರು ಅವರು ಹಾಜರಾಗಿ ತಮ್ಮ ಅಹವಾಲು ಸಲ್ಲಿಸಬೇಕು. ಹಾಗೂ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳಿದ್ದರೆ ಒದಗಿಸಬೇಕು. ಇಲ್ಲವಾದಲ್ಲಿ ನ್ಯಾಯಾಧಿಕರಣ 1946ರ ವಿದೇಶಿಗರ ಕಾಯ್ದೆ ಮತ್ತು 1964ರ ವಿದೇಶಿಗರ ನ್ಯಾಯಾಧಿಕರಣದ ಆದೇಶದನ್ವಯ ಅವರನ್ನು ಅಕ್ರಮ ನಿವಾಸಿಗಳು ಎಂದು ಘೋಷಿಸುವುದು. ಬಳಿಕ ಅವರು ಸುಪ್ರೀಂಕೋರ್ಟ್​ವರೆಗೂ ಕಾನೂನು ಹೋರಾಟ ಮಾಡಿ, ತಮ್ಮ ಪೌರತ್ವ ಸಾಬೀತುಪಡಿಸಲು ಅವಕಾಶವಿದೆ. ಅದನ್ನೂ ಅವರು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

Also read: ತಂಬಾಕು ಗುಟ್ಕಾ ಪ್ರಿಯರಿಗೆ ಬಿಗ್ ಶಾಕ್; ಮೆಗ್ನೀಸಿಯಮ್ ಕಾರ್ಬೋನೇಟ್ ಇರುವ 12 ಬಗೆಯ ಗುಟ್ಕಾ ಬ್ಯಾನ್.!