ಹೊಸ ನೋಟಿಗಾಗಿ ATM ಮುಂದೆ ನಿಂತವರು ಇಂದು ದಂಪತಿಗಳಾಗಿದ್ದಾರೆ….

0
1751

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರೂಪಾಯಿ ನೋಟ್ ಬ್ಯಾನ್ ಮಾಡಿದ ಘೋಷಣೆ ಮಾಡಿದ್ದಾರೆ. ಹೀಗಾಗಿ ದೇಶದಾದ್ಯಂತ ನೋಟ್ ಬದಲಾಯಿಸಿಕೊಳ್ಳಲು ಹಾಗೂ ಹಣ ಡ್ರಾ ಮಾಡಿಕೊಳ್ಳಲು ಏಟಿಎಮ್ ಮತ್ತು ಬ್ಯಾಂಕ್ ಎದುರು ಮೈಲಿಗಟ್ಟಲೆ ದೂರ ಸಾಲಿನಲ್ಲಿ ನಿಂತು ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಅದೃಷ್ಟವಿದ್ದವರು 8-10 ಗಂಟೆಗಳ ಕಾಲ ಕಾದ ಬಳಿಕ ಹಣ ಪಡೆದು ಖುಷಿಯಿಂದ ಮರಳುತ್ತಾರೆ. ಇನ್ನು ಕೆಲವರು ಹಣ ಸಿಗದೆ ಸಿಟ್ಟು ಮಾಡಿಕೊಂಡು ತೆರಳುತ್ತಿದ್ದಾರೆ. ಆದರೆ ಇದೇ ರೀತಿ ಹಣ ಪಡೆಯಲು ಏಟಿಎಮ್ ಹೊರಗಡೆ ಕಾದು ನಿಂತ ಯುವಕ ಯುವತಿ ಇಬ್ಬರ ನಡುವೆ ಪ್ರೇಮವರಳಿ ಅಲ್ಲೇ ಸಪ್ತಪದಿ ತುಳಿದ ವಿಚಿತ್ರ ಘಟನೆ ದೆಹಲಿಯಲ್ಲಿ ನಡೆದಿದೆ.

ಇದೇ ರೀತಿ ನವದೆಹಲಿಯ ವಿಕಾಸ್ ಹಾಗೂ ಪೂಜಾ SBI ಬ್ಯಾಂಕ್’ನ ಏಟಿಎಮ್ ಎದುರು ಹಣ ಪಡೆಯಲು ಲೈನ್’ನಲ್ಲಿ ಕಾಯುತ್ತಿದ್ದರು. ಬೆಳಿಗ್ಗೆ 6 ಗಂಟೆಗೆ ಬ್ಯಾಂಕ್ ಎದುರು ತಲುಪಿದ ವಿಕಾಸ್ 80ನೇ ಗ್ರಾಹಕನಾಗಿದ್ದ. ಆತನ ಹಿಂದಿದ್ದ ಪೂಜಾ 81ನೇ ಗ್ರಾಹಕಳಾಗಿದ್ದಳು. ಟೈಂಪಾಸ್ ಮಾಡಲು ವಿಕಾಸ್, ಕಿವಿಗೆ ಇಯರ್ ಫೋನ್ ಹಾಕಿ ಹಾಡು ಕೇಳುತ್ತಿದ್ದರೆ, ಪೂಜಾ ತನ್ನ ಮೊಬೈಲ್’ನಲ್ಲಿ ‘ನಾಗಿನ್’ ಸೀರಿಯಲ್ ನೋಡುತ್ತಿದ್ದಳು.

ಈ ವೇಳೆ ಲೈನ್ ಮುಂದೆ ಸಾಗಿ ವಿಕಾಸ್ ಹಾಗೂ ಪೂಜಾ 65-66 ನಂಬರ್ ತಲುಪುವಾಗ ಪೂಜಾಳ ಮೊಬೈಲ್ ಬ್ಯಾಟರಿ ಮುಗಿದು ಮೊಬೈಲ್ ಆಫ್ ಆಯ್ತು. ಆದರೆ ವಿಕಾಸ್ ಮಾತ್ರ ಇಯರ್ ಫೋನ್ ಹಾಕಿ ಹಾಡು ಕೇಳುತ್ತಿದ್ದ. ಬೋರ್ ಆದ ಕಾರಣ ಪೂಜಾ ‘ನಾನೂ ನಿಮ್ಮ ಮೊಬೈಲ್’ನಲ್ಲಿ ಹಾಡು ಕೇಳಿಸಿಕೊಳ್ಳಬಹುದಾ?’ ಎಂದು ಕೇಳಿದ್ದಾಳೆ. ಇದಕ್ಕೆ ವಿಕಾಸ್ ಒಪ್ಪಿಕೊಂಡು ಆಕೆಗೆ ಇಯರ್ ಫೋನ್’ನ ಒಂದು ಭಾಗ ನೀಡಿದ್ದಾನೆ. ಆದರೆ 50-51 ನೇ ನಂಬರ್ ತಲುಪುತ್ತಿದ್ದಂತೆಯೇ ವಿಕಾಸ್ ಮೊಬೈಲ್ ಕೂಡಾ ಆಫ್ ಆಗಿದೆ. ಹೀಗಾಘಿ ಬೇರೆ ವಿಧಿ ಇಲ್ಲದೇ ಮಾತು ಶುರುವಿಟ್ಟುಕೊಂಡಿದ್ದಾರೆ.

ಹೆಸರು ಕೇಳುವ ಮೂಲಕ ಮಾತುಕತೆ ಆರಂಭವಾಗಿದ್ದು, 29-30 ನಂಬರ್ ತಲುಪುವಷ್ಟರಲ್ಲಿ ತಮಗೇನು ಇಷ್ಟ ಎಂಬಿತ್ಯಾದಿ ವಿಚಾರಗಳನ್ನೂ ಪರಸ್ಪರ ಹಂಚಿಕೊಂಡಿದ್ದಾರೆ. ಇಷ್ಟೆಲ್ಲಾ ಮಾತುಕತೆಯ ಬಳಿಕ ಸುಮ್ಮನಾಗದ ವಿಕಾಸ್ ಕೂಡಲೇ ಫಿಲ್ಮೀ ಸ್ಟೈಲ್’ನಲ್ಲಿ ತನ್ನ ಕಿಸೆಯಲ್ಲಿದ್ದ 10 ರುಪಾಯಿ ನೋಟು ತೆಗೆದು ‘I Love You’ ಎಂದು ಬರೆದು ಪೂಜಾಳಿಗೆ ಕೊಟ್ಟಿದ್ದಾನೆ. ಇದನ್ನು ಕಂಡು ಮೊದಲು ಗುರಾಯಿಸಿದ ಪೂಜಾ ಮರುಕ್ಷಣವೇ ವಿಕಾಸ್’ನನ್ನು ತಬ್ಬಿಕೊಂಡು ಒಪ್ಪಿಗೆ ಸೂಚಿಸಿದ್ದಾಳೆ.

ಅಲ್ಲೇ ನಿಂತು ಇದನ್ನೆಲ್ಲಾ ವೀಕ್ಷಿಸುತ್ತಿದ್ದ ಪಂಡಿತ ‘ಇಂತಹ ಮುಹೂರ್ತ ಹಲವು ವರ್ಷಗಳ ಬಳಿಕ ಬರುತ್ತದೆ’ ಎಂದು ಕಿರುಚಿದ್ದಾನೆ. ಇಷ್ಟರಲ್ಲೇ ಅಲ್ಲಿದ್ದ ಜನರು ಪಂಡಿತನಿಗೆ ಮದುವೆ ಮಂತ್ರ ಪಠಿಸಲು ಒತ್ತಾಯಿಸಿದ್ದು, ಪೂಜಾ ಹಾಗೂ ವಿಕಾಸ್ ಏಟಿಎಮ್ ಸುತ್ತ 7 ಸುತ್ತು ತಿರುಗಿ ಸಪ್ತಪದಿ ತುಳಿದಿದ್ದಾರೆ. ನವ ದಂಪತಿಗಳಿಗೆ ಅಲ್ಲಿ ನೆರೆದಿದ್ದವರು ಜೇಬಿನಿಂದ 10 ರೂಪಾಯಿಗಳ ನೋಟನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಷ್ಟೆಲ್ಲಾ ನಡೆಯುವಷ್ಟರಲ್ಲಿ ಇವರಿಬ್ಬರೂ 2-3 ನಂಬರ್ ತಲುಪಿದ್ದಾರೆ. ಆದರೆ ದುರಾದೃಷ್ಟವೆಂಬಂತೆ ಏಟಿಮ್’ನಿಂದ ಹೊರ ಬಂದ ವ್ಯಕ್ತಿ ಹಣ ಮುಗಿದಿದೆ ಎಂದು ತಿಳಿಸಿದ್ದು, ನವ ದಂಪತಿಗಳಿಬ್ಬರೂ ಬೇರೆ ಏಟಿಎಮ್’ಗೆ ತೆರಳಿ ಬಳಿಕ ಹುಡುಗನ ಮನೆಯೆಡೆಗೆ ಹೆಜ್ಜೆ ಹಾಕಿದ್ದಾರೆ.

ಈ ಘಟನೆ ಸಿನಿಮಾ ಶೈಲಿಯಲ್ಲಿ ನಡೆದಿದ್ದು, ಕೇಳಲು ಹಾಸ್ಯಾಸ್ಪದವಾಗಿದೆ. ಆದರೂ ದೆಹಲಿಯ SBI ಬ್ಯಾಂಕಿಗೆ ಸೇರಿದ ಏಟಿಎಮ್ ಹೊರಗೆ ನಡೆದ ನೈಜ ಘಟನೆಯಾಗಿದ್ದು, ಹಲವಾರು ಮಂದಿ ಇದಕ್ಕೆ ಸಾಕ್ಷಿಯಾಗಿದ್ದಾರೆ.

ಕೃಪೆ : ಪತ್ರಿಕಾ ಡಾಟ್ ಕಾಂ