ಹಾವೇರಿಯಲ್ಲಿ ಜೈಲಿನಲ್ಲಿ ಹುಟ್ಟಿದ ಮಗುವಿಗೆ, ಜಿಲ್ಲಾಧಿಕಾರಿ ಏನೆಂದು ನಾಮಕರಣ ಮಾಡಿದರು ಗೊತ್ತಾ?

0
1520

ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಮಹಿಳಾ ಕೈದಿಗಳಿಗೆ, ಜಿಲ್ಲಾಧಿಕಾರಿ ಹಾಗೂ ಉನ್ನತಾಧಿಕಾರಿಗಳಿಗೆ ಹರ್ಷ ತಂದ ಹರ್ಷಿತ. ವಿಚಾರಣಾಧೀನ ಕೈದಿಯೊಬ್ಬರ ನವಜಾತ ಹೆಣ್ಣು ಶಿಶುವಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ ಅವರು, ‘ಹರ್ಷಿತಾ’ ಎಂದು ಕರೆಯುವ ಮೂಲಕ ನಾಮಕರಣ ಮಾಡಿದ ಅಪರೂಪದ ಘಳಿಗೆ ಅಲ್ಲಿದ್ದ ಎಲ್ಲರಿಗೆ ಸಂತಸ ತಂದಿತು.

ತೊಟ್ಟಿಲು ಕಾರ್ಯಕ್ರಮದಿಂದ ಕಾರಾಗೃಹದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಸಾಂಪ್ರದಾಯಿಕ ರೀತಿಯಲ್ಲಿ ಜರುಗಿದ ನಾಮಕರಣ ಪ್ರಕ್ರಿಯೆಯಲ್ಲಿ ಜಿಪಂ ಸಿಇಒ ಶಿಲ್ಪಾ ನಾಗ್‌ ಅವರು ಅಕ್ಷ ತೆ ಹಾಗೂ ಹೂವುಗಳನ್ನು ಸಿಂಪಡಿಸಿ ಉನ್ನತ ಶಿಕ್ಷ ಣ ಪಡೆದು ಅತ್ಯುನ್ನತ ಹುದ್ದೆ ಹಿಡಿಯುವಂತೆ ಮಗುವಿಗೆ ಹಾರೈಸಿದರು.

ಕಳವು ಪ್ರಕರಣವೊಂದರಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಹಾಲಿಂಗಪೂರ ಮೂಲದ 26 ವರ್ಷದ ಮಹಿಳೆ ಕಳೆದ ಜನವರಿ 4 ರಂದು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಶಿಶುವಿಗೆ ಮಹಿಳಾ ಕೈದಿಗಳ ಸೆಲ್‌ನಲ್ಲಿ ಜಿಲ್ಲಾ ಕಾರಾಗೃಹದ ಸಿಬ್ಬಂದಿ ನಾಮಕರಣ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರ ಗಮನ ಸೆಳೆದರು.

ಜೈಲಿನ ಮಹಿಳಾ ಅಧಿಕಾರಿಗಳು ಒಳಗೊಂಡಂತೆ 11 ಜನ ಮಹಿಳಾ ಕೈದಿಗಳು ತೊಟ್ಟಿಲು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ತೊಟ್ಟಿಲು ಅಲಂಕಾರ, ಜೈಲು ಮಹಿಳಾ ಸೆಲ್‌ನ ಅಲಂಕಾರ ಮನೆಯ ವಾತಾವರಣದಂತೆ ಕಂಗೊಳಿಸಿ ಎಲ್ಲರ ಗಮನಸೆಳೆಯಿತು. ತೊಟ್ಟಿಲು ಸಮಾರಂಭದಲ್ಲಿ ಕಾರಾಗೃಹದ ಉಪ ಅಧೀಕ್ಷ ಕ ಡಿ.ವಿ.ನಾಯಕ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಡ್ಡಿ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುರೇಶ ರೆಡ್ಡಿ, ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ವಾರ್ತಾಧಿಕಾರಿ ಬಿ.ಆರ್‌.ರಂಗನಾಥ್‌, ಜೈಲಿನ ಸಿಬ್ಬಂದಿ ಸೇರಿದಂತೆ ಉಪಸ್ಥಿತರಿದ್ದರು.

ಕೈದಿಯ ಎರಡು ವರ್ಷದ ಹೆಣ್ಣು ಮಗು ಕೂಡ ತನ್ನ ತಂಗಿಯ ನಾಮಕರಣ ಸಂಭ್ರಮದಿಂದ ಭಾಗವಹಿಸಿದ್ದು ಎಲ್ಲರಿಗೂ ಖುಷಿ ನೀಡಿತು.