ಬದುಕಿದರೆ ಹೀಗೆ ಬದುಕಬೇಕಲ್ಲವೇ?

0
2848

ಬೆಳಗಿನ ಜಾವ 5 ಗಂಟೆಯ ಸಮಯ,ಬೆಂಗಳೂರಿನ ಬ್ಯಾಂಕ್ ಕಾಲನಿ ಸರ್ಕಲ್ ನಲ್ಲಿ ಹಲವಾರು ದಿನಪತ್ರಿಕೆಗಳನ್ನು ತುಂಬಿಕೊಂಡ ವ್ಯಾನ್ ಗಳು ಬಂದು ನಿಲ್ಲುತ್ತವೆ. ಪತ್ರಿಕೆಯ ಬಂಡಲ್ ಗಳನ್ನು ಕೆಳಗೆ ಹಾಕಿ ವ್ಯಾನ್ ಹೋದ ನಂತರ ಪತ್ರಿಕೆಯ ಏಜೆಂಟರುಗಳು ಬಂದು ತಮ್ಮ ತಮ್ಮ ಪತ್ರಿಕೆಯ ಬಂಡಲ್ ಗಳನ್ನು ಬಿಚ್ಚುತ್ತಾರೆ ಹೀಗೆ ಬಿಚ್ಚುವಾಗ ಬಂಡಲ್ ಮೇಲೆ ಸುತ್ತಿರುವ ಬಿಳಿ ಬಣ್ಣದ ಪೇಪರ್ ಗಳನ್ನು ತೆಗೆದು ಪಕ್ಕಕ್ಕೆ ಎಸೆದು ಪತ್ರಿಕೆಗಳನ್ನು ಜೋಡಿಸಿಕೊಳ್ಳುತ್ತಾರೆ, ಈ ಸಮಯಕ್ಕೆ ಅಲ್ಲಿಗೆ ಬರುವ 67 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಕೆಳಗೆ ಬಿದ್ದಿದ್ದ ಆ ಎಲ್ಲಾ ಬಿಳಿ ಬಣ್ಣದ ಪೇಪರ್ ಗಳನ್ನು ಒಂದೊಂದಾಗಿ ತೆಗೆದುಕೊಂಡು ಜೋಡಿಸಿಕೊಳ್ಳುತ್ತಾರೆ ಪ್ರತಿನಿತ್ಯ ಹೀಗೆ ವೇಸ್ಟ್ ಎಂದು ಬಿಸಾಡುವ ಈ ಬಿಳಿ ಬಣ್ಣದ ಪೇಪರ್ ಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅದನ್ನು ಒಂದು ಪುಸ್ತಕದ ಅಳತೆಗೆ ಕತ್ತರಿಸಿ ಅದರಿಂದ ಸೊಗಸಾದ ಬರೆಯುವ ಪುಸ್ತಕವನ್ನು ತಯಾರಿಸುತ್ತಾರೆ ತಿಂಗಳಿಗೆ ಹತ್ತಿಪ್ಪತ್ತು ಬರೆಯುವ ಪುಸ್ತಕಗಳನ್ನು ಶ್ರದ್ಧೆಯಿಂದ ತಯಾರಿಸುವ ಇವರು ಅದನ್ನು ಮೈಸೂರು ರಸ್ತೆಯಲ್ಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಮಕ್ಕಳಿಗೆ ಉಚಿತವಾಗಿ ಹಂಚುತ್ತಾರೆ ಇವರು ಬಂದರೆಂದರೆ ಸಾಕು ಬಡ ಮಕ್ಕಳು ಓಡೋಡಿ ಬಂದು “ತಾತಾ” ಎನ್ನುತ್ತಾ ಮುದ್ದಾಡುತ್ತಾರೆ ಮತ್ತು ಈ ತಾತನಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ

ಅಂದಹಾಗೆ ಸದ್ದಿಲ್ಲದೆ ಯಾರಿಗೂ ತಿಳಿಯದಂತೆ ಸಮಾಜಸೇವೆ ಮಾಡುತ್ತಿರುವ ಈ ಹಿರಿಯ ವ್ಯಕ್ತಿಯ ಹೆಸರು “ಮೋಹನ್” ಇವರು ಐಟಿಐ ಕಂಪನಿಯ ನಿವೃತ್ತ ಉದ್ಯೋಗಿ, ಜೀವನದ ಸಂಧ್ಯಾ ಕಾಲದಲ್ಲಿ ಮನೆಯಲ್ಲಿ ಹಾಯಾಗಿ ಇರದೇ ಬಡ ಮಕ್ಕಳಿಗೆ ತನ್ನದೇ ಆದ ವಿಶಿಷ್ಟವಾದ ಸೇವೆ ಮಾಡುತ್ತಿರುವ ಇವರು ನಿಜಕ್ಕೂ ನಮಗೆ ಮಾದರಿಯಲ್ಲವೇ?

– ನಿಮ್ಮ …ಮಧು

ಮಧು ಎಂಬುವವರು ಇದನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದಾರೆ, ಈ ಮೆಸೇಜ್ ನೋಡಿದಾಗ ಹೃದಯ ತುಂಬಿ ಬರುತ್ತದೆ ಹಾಗು ಇದಕ್ಕೆ ಜನರಿಂದ ಒಳ್ಳೆ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

ಒಬ್ಬ ವಯಸ್ಸಾದ ವ್ಯಕ್ತಿ ತನ್ನ ಇಳಿ ವಯಸ್ಸಿನಲ್ಲಿ ಈ ರೀತಿಯ ಉತ್ತಮ ಕೆಲಸವನ್ನು ಯಾವ ಫಲಾಪೇಕ್ಷೆಯೂ ಇಲ್ಲದೆ ಮಾಡುತ್ತಾರೆಂದರೆ ಇದು ನಮ್ಮಂತಹ ಯುವಜನಾಂಗಕ್ಕೆ ಒಂದು ಸಂದೇಶ ಅಲ್ಲವೇನು? ಇವರು ಯಾವುದೇ ಆರ್ಥಿಕ ಲಾಭವಿಲ್ಲದಿದ್ದರೂ, ತಮ್ಮ ಆರೋಗ್ಯ, ಯೋಗಕ್ಷೇಮ ಮತ್ತು ಜೀವನೋಪಾಯವನ್ನೂ ಅಲಕ್ಷಿಸಿ ಕೆಲಸ ಮಾಡುತ್ತಿದ್ದಾರೆ thenewsism.com ತಂಡ ಇವರ ನಿಸ್ವಾರ್ಥ ಸೇವೆಗೆ ಹೃತ್ಪೂರಕವಾದ ಅಭಿನಂದನೆಗಳನ್ನು ಕೋರುತ್ತದೆ. ದೇವರು ನಿಮಗೆ ಆರೋಗ್ಯವನ್ನು ಕರುಣಿಸಲಿ.