ಕರ್ನಾಟಕದಲ್ಲಿರುವ ಕಾವೇರಿ ನದಿ ತಟದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಚಾರಿತ್ರಿಕ ಹಿನ್ನೆಲೆ…!!

0
647

ಭಾಗಮಂಡಲದ ಭಗಂಡೇಶ್ವರ ದೇವಾಲಯ. ಇದನ್ನು ಭಗಂಡ ಕ್ಷೇತ್ರ ಎಂಬ ಹೆಸರು ಪುರಾಣ ಪ್ರಸಿದ್ಧವಾಗಿದೆ. ಶಿವನಿಗೆ ಮುಡಿಪಾದ ಈ ದೇವಾಲಯದಿಂದಲೆ ಸ್ಥಳಕ್ಕೆ ಭಾಗಮಂಡಲ ಎಂಬ ಹೆಸರು ಬಂದಿರುವುದರ ಕುರಿತು ಪ್ರತೀತಿಯಿದೆ. ಹಿಂದೆ ಭಗಂಡರೆಂಬ ಮುನಿವರ್ಯರು ಇಲ್ಲಿ ವಾಸವಾಗಿದ್ದರು. ಇಲ್ಲೇ ನೆಲಸಿ ಭಗಂಡ ಋಷಿಯು ತಪಸ್ಸನ್ನು ಎಸಗಿ ಷಣ್ಮುಖಸ್ವಾಮಿಯಿಂದ ಅನುಗ್ರಹವಾಗಿ ಪಡೆದ ಕ್ಷೇತ್ರವಾದ್ದರಿಂದ ಭಗಂಡಕ್ಷೇತ್ರ ಎಂದು ಹೆಸರಾಯಿತು. ಅದೇ ಹೆಸರು ಮುಂದೆ ಭಾಗಮಂಡಲ ಎಂದು ರೂಪಾಂತರವನ್ನು ಹೊಂದಿತು. ಇಲ್ಲಿ ಶಿವಲಿಂಗವನ್ನು ಪ್ರತಿಷ್ಠೆ ಮಾಡಿದ್ದರಿಂದ ಈ ಕ್ಷೇತ್ರದಲ್ಲಿ ಭಗಂಡೇಶ್ವರನೆಂದು ಶಿವನನ್ನು ಪೂಜಿಸಲಾಗುತ್ತದೆ.

 

ಈ ದೇವಾಲಯದಲ್ಲಿ ಸುಬ್ರಹ್ಮಣ್ಯ, ಗಣಪತಿ ಹಾಗೂ ವಿಷ್ಣುವಿನ ವಿಗ್ರಹಗಳೂ ಸಹ ಪ್ರತಿಷ್ಠಾಪಿಸಲ್ಪಟ್ಟಿವೆ. ಈ ದೇವಸ್ಥಾನ ಕೇರಳ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಈ ಶೈಲಿಯು ನೇಪಾಳದಲ್ಲಿರುವ ದೇವಸ್ಥಾನಗಳನ್ನೂ ಹೋಲುವಂತಿದೆ. ಇಲ್ಲಿನ ಇನ್ನೊಂದು ವಿಶೇಷ ವೇನೆಂದರೆ ತ್ರಿವೇಣಿ ಸಂಗಮ. ಈ ಸ್ಥಳದಲ್ಲಿ ಕಾವೇರಿ, ಕನ್ನಿಕೆ ಹಾಗೂ ಗುಪ್ತನದಿಯಾದ ಸುಜ್ಯೋತಿ ನದಿಗಳು ಸಂಗಮ ಹೊಂದಿವೆ.

ಇಲ್ಲಿಗೆ ಭೇಟಿ ನೀಡುವ ಸಾಕಷ್ಟು ಜನ ಭಕ್ತಾದಿಗಳು ತಮ್ಮ ಹಿರಿಯರ/ಪೂರ್ವಜರಿಗೆ ಸಂಬಂಧಿಸಿದಂತೆ ಕರ್ಮಾಚರಣೆಗಳನ್ನು ಸಾಮಾನ್ಯವಾಗಿ ನಿರ್ವಹಿಸುತ್ತಾರೆ. ಹೀಗಾಗಿ ಜನರಿಂದ ಇದೊಂದು ಪವಿತ್ರ ಕ್ಷೇತ್ರವಗಿ ಪರಿಗಣಿಸಲ್ಪಟ್ಟಿದೆ. ಇಲ್ಲಿ ಮಂತ್ರಸಿದ್ಧಿ, ತಪಸ್ಸಿದ್ಧಿ, ಅಧ್ಯಾತ್ಮ ಸಾಕ್ಷಾತ್ಕಾರ ಇವುಗಳೆಲ್ಲ ಕ್ರಮವಾಗಿ ಸಾಧಕನಿಗೆ ಬಹಳ ಬೇಗ ಲಭಿಸುತ್ತದೆ ಎಂಬುದಾಗಿ ಸ್ಥಳ ಪುರಾಣದಿಂದ ತಿಳಿದುಬರುತ್ತದೆ. ಹಾಗಾಗಿ ಮೊದಲಿಗೆ ಜನರು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಮಿಂದು ನಂತರ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯೆಡೆಗೆ ಪ್ರಯಾಣ ಬೆಳೆಸುತ್ತಾರೆ.

 

ಭಾಗಮಂಡಲವು ಮಡಿಕೇರಿ ಜಿಲ್ಲಾ ಕೇಂದ್ರದಿಂದ ಸುಮಾರು 33 ಕಿ.ಮೀ.ಗಳಷ್ಟು ದೂರದಲ್ಲಿ ನೆಲೆಗೊಂಡಿದೆ ಮತ್ತು ಇದು ಮಡಿಕೇರಿ, ವಿರಾಜಪೇಟೆಗಳಿಂದ ಹಾಗೂ ಕೇರಳದಲ್ಲಿನ ಸನಿಹದ ಸ್ಥಳಗಳಿಂದ ಬರುವ ಸುಸಜ್ಜಿತ ರಸ್ತೆಗಳಿಂದ ಸಂಪರ್ಕಿಸಲ್ಪಟ್ಟಿದೆ.

ಶ್ರೀ ಭಗಂಡೇಶ್ವರ ದೇವಾಲಯದ ಪೂಜಾ ಸಮಯ
ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 1:30 ರಿಂದ
ಮಧ್ಯಾಹ್ನ 3:00 ರಿಂದ 9:00

ಶ್ರೀ ಭಗಂಡೇಶ್ವರ ದೇವಾಲಯದ ಪೂರ್ಣ ವಿಳಾಸ
ಶ್ರೀ ಭಗಂಡೇಶ್ವರ ದೇವಾಲಯ,
ಭಾಗಮಂಡಲ, ಮಡಿಕೇರಿ ತಾಲ್ಲೂಕು,
ಕೊಡಗು ಜಿಲ್ಲೆ