ಬನಶಂಕರಿಯ ವರ್ತುಲ ರಸ್ತೆಯಲ್ಲಿರುವ ಸುಂದರ ದೇಗುಲ ಬನಗಿರಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದೀರಾ??

0
1377

ಸುಮಾರು ೨೫ ವರ್ಷಗಳ ಹಿಂದೆ ಬನಶಂಕರಿ ೩ ನೇ ಹಂತದ, ಕತ್ರಿಗುಪ್ಪೆಯ ಕಾಮಾಕ್ಯ ಚಿತ್ರಮಂದಿರದ ಬಳಿ, ನೂರಡಿ ರಸ್ತೆಯ ಎಡಕ್ಕೆ ಗುಡ್ಡದ ಮೇಲೆ ಶ್ರೀಬನಗಿರಿ ವರಸಿದ್ಧಿವಿನಾಯಕನನ್ನು ಪ್ರತಿಷ್ಠಾಪಿಸಲ್ಲಾಗಿ ನಗರದಲ್ಲೇ ಎತ್ತರ ಪ್ರದೇಶದಲ್ಲಿ ಸ್ಥಾಪಿತವಾದ ದೇವಸ್ಥಾನವೆಂದು ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿ ಬಹುಶಃ ಎಲ್ಲೋ ಕಾಣಸಿಗದ ಶ್ರೀ ಲಕ್ಷ್ಮಿ, ಗಣಪತಿ, ಹಾಗು ಶಾರದಾಂಬೆಯನ್ನು ಒಂದೇ ಗರ್ಭಗುಡಿಯ ಚೌಕಟ್ಟಿನಲ್ಲಿ ಕಾಣಬಹುದು. ಗರ್ಭಗುಡಿಯ ಎಡಕ್ಕೆ ಶ್ರೀ ವರಲಕ್ಷ್ಮಿ, ಮಧ್ಯದಲ್ಲಿ ಶ್ರೀ ವರಸಿದ್ಧಿ ವಿನಾಯಕ ಹಾಗು ಬಲಕ್ಕೆ ಶ್ರೀ ವರವಾಣಿಯರ ಕಪ್ಪು ಶಿಲೆಯ ಸುಂದರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

೧೫೦ ಕ್ಕೂ ಮಿಗಿಲಾದ ಮೆಟ್ಟಿಲುಗಳನ್ನು ಹೊಂದಿರುವ ಈ ಸನ್ನಿಧಿಯ ಒಂದೊಂದು ಮೆಟ್ಟಿಲುಗಳು ಒಬ್ಬೊಬ್ಬ ಭಕ್ತರ ಹೆಸರನ್ನು ಹೇಳುತ್ತದೆ. ಇನ್ನು ಭವ್ಯವಾಗಿ ವಿಶಾಲವಾಗಿ ಕಂಗೊಳಿಸುವ ಸಭಾಂಗಣವನ್ನು ಪ್ರವೇಶಿಸುತ್ತಿದ್ದಂತೆ ಅತ್ಯಂತ ಆಹ್ಲಾದಕರವಾದ ತಂಪಾದ ವಾತಾವರಣದಲ್ಲಿ ಒಮ್ಮೆಲೇ ಗೋಚರಿಸುವ ಲಕ್ಷ್ಮಿ, ಸರಸ್ವತಿ ಮತ್ತು ಗಣಪತಿಯರ ದಿವ್ಯ ತೇಜಸ್ಸುಳ್ಳ ಮೂರ್ತಿಗಳು ನಮ್ಮನ್ನು ಭಕ್ತಿಯ ಪರಾಕಾಷ್ಠೆಗೆ ತಲುಪಿಸುತ್ತದೆ.ಇಲ್ಲಿರುವ ನವಗ್ರಹಗಳ ಕೆತ್ತನೆಯಂತೂ ಅಮೋಘವಾಗಿದೆ.ಅಲ್ಲಿಯೇ ಸ್ವಲ್ಪ ಕೆಳಗೆ ಈ ಮೊದಲು ಹುತ್ತವಿದ್ದ ಸ್ಥಳದಲ್ಲಿ ಸುಬ್ರಮಣ್ಯ ಸ್ವಾಮಿಯ ದೇವಸ್ಥಾನವನ್ನು ಸಹ ನಿರ್ಮಿಸಲಾಗಿದೆ.

ತುಮಕೂರು ಜಿಲ್ಲೆಯ ಘನಪುರಿ ಸಂಸ್ಥಾನದ ನೇತೃತ್ವದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಪೂಜಾ ಕೈಂಕರ್ಯಗಳು ನೆರವೇರುತ್ತಾ ಬಂದಿದೆ. ಸುತ್ತಮುತ್ತಲ ಬಡಾವಣೆಯ ಸಾರ್ವಜನಿಕರು ಮತ್ತು ಭಕ್ತಾದಿಗಳ ಸಹಾಯದಿಂದ ಈ ದೇಗುಲವು ಈ ಮಟ್ಟದ ಪ್ರಗತಿಯನ್ನು ಕಾಣಲು ಸಾಧ್ಯವಾಗಿದೆ. ಗಣೇಶೋತ್ಸವ, ನವರಾತ್ರಿ ಹಾಗು ಫೆಬ್ರವರಿ ಅಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಇಲ್ಲಿ ವಿಶೇಷ ಪೂಜೆ ಅಲಂಕಾರಗಳು ನಡೆಯುತ್ತವೆ.

ಈ ಸನ್ನಿಧಿಯಲ್ಲಿನ ಪ್ರಶಾಂತತೆಯು ಭಕ್ತರ ಮನಸ್ಸನ್ನು ಧ್ಯಾನಕ್ಕೆ ಪ್ರಚೋದಿಸುತ್ತದೆ. ಬೇಸಿಗೆಯ ರಾಜಾ ದಿನಗಳಲ್ಲಿ ಮಕ್ಕಳಿಗೆ ಚಿತ್ರಕಲೆ, ನಾಟ್ಯ ಮೊದಲಾದ ಬೇಸಿಗೆ ಶಿಬಿರಗಳ್ನ್ನು ನಡೆಸಲಾಗುತ್ತದೆ.ಸಣ್ಣ ಪುಟ್ಟ ಶುಭ ಕಾರ್ಯಗಳಿಗೆ ಮೀಸಲಾದ ಸಮುದಾಯಭವನವನ್ನು ಸಹ ಇಲ್ಲಿ ಕಾಣಬಹುದು. ಈ ಬಣಗಿರಿಯ ಬೆಟ್ಟದ ಮೇಲಿಂದ ಕಾಣುವ ಸುತ್ತ ಮುತ್ತಲ ವಿಹಂಗಮ ನೋಟ, ಹಾಗು ಹನುಮಗಿರಿಯಲ್ಲಿ ಕಾಣಸಿಗುವ ಸೂರ್ಯಾಸ್ತದ ಸೊಬಗು ಹಾಗೆ ನೆನಪಿನಂಗಳದಲ್ಲಿ ಮನೆ ಮಾಡುತ್ತದೆ.