ಬೆಂಗಳೂರು ಗುರು ರಾಘವೇಂದ್ರ ಬ್ಯಾಂಕ್​-ಗೆ ಆರ್​ಬಿಐನಿಂದ ನಿರ್ಬಂಧ; ಬ್ಯಾಂಕ್‌ನಿಂದ ಸಾಲಪಡೆದವರೇ ಹೊಣೆ ಎಂದ ಬ್ಯಾಂಕ್ ಮಂಡಳಿ.!

0
94

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ಗೆ ಜನವರಿ 10ರಂದು ಆರ್‌ಬಿಐ ನೋಟಿಸ್ ಜಾರಿ ಮಾಡಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಯಾವುದೇ ಗ್ರಾಹಕರು ಹಣ ಡ್ರಾ ಮಾಡಬಾರದು ಎಂದು ಸೂಚಿಸಲಾಗಿದೆ. ಇದರಿಂದ ಗ್ರಾಹಕರು ಆತಂಕಗೊಂಡಿದ್ದು, ಕಣ್ಣಿರು ಹಾಕುವಂತೆ ಆಗಿದೆ. ಕಡಿಮೆ ಅವಧಿಯಲ್ಲಿ ಸುಮಾರು 2400 ಕೋಟಿ ವಹಿವಾಟು ನಡೆಸುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ 6 ಶಾಖೆಗಳನ್ನು ಹೊಂದಿದೆ. ವಹಿವಾಟಿನಲ್ಲಿ ಅಕ್ರಮ ಕಂಡು ಬಂದ ಹಿನ್ನಲೆಯಲ್ಲಿ ಆರ್‌ಬಿಐ ನೋಟಿಸ್ ನೀಡಿದೆ. ಇದರಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಇದಕ್ಕೆ ಬ್ಯಾಂಕ್ ಅಧ್ಯಕ್ಷ ಕೆ.ರಾಮಕೃಷ್ಣ ಅವರು ಜವಾಬ್ದಾರಿ ಹೊತ್ತುಕೊಂಡು ನಿಮ್ಮ ಹಣ 100 ರಷ್ಟು ಸುರಕ್ಷಿತವಾಗಿದೆ, ನಿಮ್ಮ ಹಣಕ್ಕೆ ನಾನೇ ಜವಾಬ್ದಾರಿ’ ಎಂದು ಹೇಳಿದ್ದಾರೆ.

ಹೌದು ಬೆಂಗಳೂರಿನಲ್ಲಿ ಭಾರಿ ವೈರಲ್ ಆದ ಶ್ರೀ ಗುರು ರಾಘವೇಂದ್ರ ಬ್ಯಾಂಕ್ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಷ್ಟು ವಸೂಲಾತಿಯಾಗದ ಸಾಲ (ಎನ್​ಪಿಎ) ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕು ಈ ಸಹಕಾರಿ ಬ್ಯಾಂಕಿಗೆ ಅಂಕುಶ ಹಾಕಿದ್ದು ಆರು ತಿಂಗಳವರೆಗೆ ವಿವಿಧ ನಿರ್ಬಂಧಗಳನ್ನು ಹೇರಿದೆ. ಒಬ್ಬ ಗ್ರಾಹಕರು ಆರು ತಿಂಗಳಲ್ಲಿ 35 ಸಾವಿರ ರೂಗಿಂತ ಹೆಚ್ಚು ಹಣ ವಿತ್​ಡ್ರಾ ಮಾಡುವಂತಿಲ್ಲ ಎಂದೂ ಸೂಚಿಸಿದೆ. ಇದು ಆ ಬ್ಯಾಂಕ್​ನ ಗ್ರಾಹಕರಿಗೆ ಚಿಂತೆಗೀಡು ಮಾಡಿದೆ.

ಆರ್​ಬಿಐ ಅದೆಶವೇನು?

ತನ್ನ ಅನುಮತಿ ಇಲ್ಲದೇ ಯಾವುದೇ ಹೊಸ ಸಾಲ ನೀಡುವಂತಿಲ್ಲ; ಇರುವ ಸಾಲ ನವೀಕರಿಸುವಂತಿಲ್ಲ; ಹೊಸ ಠೇವಣಿ ಸ್ವೀಕರಿಸುವಂತಿಲ್ಲ; ಪೂರ್ವಾನುಮತಿ ಇಲ್ಲದೇ ಯಾವುದೇ ಆಸ್ತಿ ವ್ಯವಹಾರ ಮಾಡುವಂತಿಲ್ಲ ಎಂಬಿತ್ಯಾದಿ ನಿರ್ಬಂಧಗಳನ್ನು ಆರ್​ಬಿಐ ವಿಧಿಸಿದೆ. ಈಗ ಆರ್​ಬಿಐನ ಅಂಕುಶದಲ್ಲಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಸಂಸ್ಥೆ ಕಾರ್ಯನಿರ್ವಹಿಸಬೇಕಾಗಿದೆ. ನಿರ್ಬಂಧಗಳು ಆರು ತಿಂಗಳ ನಂತರ ಮುಂದುವರಿಯಬಹುದು ಅಥವಾ ಆರು ತಿಂಗಳೊಳಗೇ ಮುಗಿಯಬಹುದು. ಬ್ಯಾಂಕ್​ನ ಪರಿಸ್ಥಿತಿಗೆ ಅನುಗುಣವಾಗಿ ಆರ್​ಬಿಐ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ಬ್ಯಾಂಕ್ ಆಡಳಿತ ಮಂಡಳಿ ಈಗಾಗಲೇ ನೋಟಿಸ್ ಕುರಿತು ಸ್ಪಷ್ಟನೆ ನೀಡಿದ್ದು, ಬ್ಯಾಂಕ್‌ನಿಂದ ಸಾಲಪಡೆದವರ ಖಾತೆಯಲ್ಲಿ ಆರ್‌ಬಿಐ ಕೆಲವು ಲೋಪ ಗುರುತಿಸಿದೆ. ಈ ಕಾರಣದಿಂದ ಪ್ರತಿ ಖಾತೆಯಿಂದ ಕೇವಲ 35 ಸಾವಿರ ರೂ. ಮಾತ್ರ ಡ್ರಾ ಮಾಡಲು ಸೂಚಿಸಿದೆ ಎಂದು ಹೇಳಿದೆ. ಸೋಮವಾರ ಗ್ರಾಹಕರ ಜೊತೆ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಸಿಬ್ಬಂದಿಗಳು ಸಭೆಯನ್ನು ನಡೆಸಿದ್ದಾರೆ. ಸಭೆಗೆ ಅಧ್ಯಕ್ಷರು ಗೈರಾಗಿದ್ದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು, ಕೂಡಲೇ ಆಗಮಿಸಿದ ಅಧ್ಯಕ್ಷರು ನಿಮ್ಮ ಹಣಕ್ಕೆ ನಾನೇ ಜವಾಬ್ದಾರಿ. ಎಂದು ಅಕ್ರೋಶಗೊಂಡ ಗ್ರಾಹಕರನ್ನು ಕುರಿತು ಭರವಸೆ ನೀಡಿದರು.
ಈ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಹಾಯಕ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಸೂಚನೆ ನೀಡಿದ್ದಾರೆ, ಅದರಂತೆ ಗ್ರಾಹಕರಿಗೆ ಸಹಾಯ ಮಾಡಲು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದಾರೆ. ಜನವರಿ 19 ರಂದು ಮತ್ತೆ ಗ್ರಾಹಕರನ್ನು ಭೇಟಿ ಮಾಡುತ್ತೇವೆ ರಾಮಕೃಷ್ಣ ಹೇಳಿದರು.