ಬ್ಯಾಂಕ್ ಗ್ರಾಹಕರೆ ನಾಳೆಯಿಂದ 5 ದಿನ ರಾಷ್ಟ್ರವ್ಯಾಪಿ ಬ್ಯಾಂಕ್​ಗಳಿಗೆ ರಜೆ; ಇಂದೇ ಬ್ಯಾಂಕ್ ವ್ಯವಹಾರ ನಡೆಸಿ..

0
505

ನಾಳೆಯಿಂದ ಬ್ಯಾಂಕ್ ನೌಕರರ ಮುಷ್ಕರ ಮತ್ತು ಸರಣಿ ರಜೆಗಳ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಮುಂದಿನ ಐದು ದಿನಗಳು ಬ್ಯಾಂಕ್​ಗಳು ಮುಚ್ಚಲಿವೆ, ಇದರಿಂದ ಎಟಿಎಂಗಳಲ್ಲಿ ಹಣದ ಕೊರತೆ ಕಾಡಲಿದ್ದು, ಹಣದ ಅವಶ್ಯಕತೆ ಇರುವ ಗ್ರಾಹಕರು ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.

ಹೌದು ಬ್ಯಾಂಕ್‌ ಆಫ್‌ ಬರೋಡಾ, ದೇನಾ ಬ್ಯಾಂಕ್‌ ಮತ್ತು ವಿಜಯ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಯೂನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್‌ (ಯುಎಫ್‌ಬಿಯು) ಡಿ.26ರಂದು ಮುಷ್ಕರಕ್ಕೆ ಕರೆ ನೀಡಿದೆ. ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘ(ಎಐಬಿಒಸಿ) ಬ್ಯಾಂಕ್‌ ವಿಲೀನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಡಿ.21ರಂದು ರಾಷ್ಟ್ರವ್ಯಾಪಿ ಮುಷ್ಕರ ಸಂಘಟಿಸಿದ್ದು. ಎರಡು ದಿನಗಳ ಬ್ಯಾಂಕ್‌ ನೌಕರರ ಪ್ರತಿಭಟನೆ ಮತ್ತು ಮೂರು ದಿನಗಳ ರಜೆ ಸೇರಿ 5 ದಿನಗಳ ಕಾಲ ರಾಷ್ಟ್ರಾದ್ಯಂತ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಡಿಸೆಂಬರ್‌ 26ಕ್ಕೆ ಒಕ್ಕೂಟ ಬಂದ್‌ಗೆ ಕರೆ ನೀಡಿದ್ದರೂ, ಡಿಸೆಂಬರ್‌ 21ರಂದೂ ಪ್ರತಿಭಟನೆಗೆ ಒಕ್ಕೂಟದಲ್ಲಿರುವ ಅಧಿಕಾರಿಯೊಬ್ಬರು ಕರೆ ನೀಡಿದ್ದಾರೆ.

ಮುಷ್ಕರ ಕುರಿತು ಎಐಬಿಒಸಿ ಕಾರ್ಯದರ್ಶಿ ಶ್ರೀನಿವಾಸ್‌:

ಯುಎಫ್‌ಬಿಯು ಅಡಿಯಲ್ಲಿ ದೇಶದ ಎಲ್ಲಾ ಬ್ಯಾಂಕ್‌ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಎಲ್ಲದಕ್ಕೂ ಬ್ಯಾಂಕ್‌ಗಳ ವಿಲೀನವೊಂದೇ ಪರಿಹಾರವಲ್ಲ. ಬ್ಯಾಂಕ್‌ ವಿಲೀನ ವಿಚಾರ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಣಯವಾಗಿದೆ. ಕೇಂದ್ರ ಸರ್ಕಾರ ಹಾಗೂ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಇಂಡಿಯನ್‌ ಬ್ಯಾಂಕ್‌ ಅಸೋಸಿಯೇಷನ್‌ ವಿರುದ್ಧ ಡಿ.21ರಂದು ಮುಷ್ಕರ ನಡೆಸಲಾಗುವುದು ಎಂದು ಎಐಬಿಒಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಭಟನೆ ಬೇಡಿಕೆ?

ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ಪ್ರಸ್ತಾಪವನ್ನು ಕೈಬಿಡಬೇಕು. ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಬೇಕು. ನಿವೃತ್ತಿ ವೇತನ ಸಂಬಂಧ ಗೊಂದಲ ಪರಿಹರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರದ ಅಂಗವಾಗಿ ಡಿ.21ರ ಶುಕ್ರವಾರ ಬೆಳಗ್ಗೆ 10ಕ್ಕೆ ಬೆಂಗಳೂರು ನಗರದ ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ಸ್ಟೇಟ್‌ ಬ್ಯಾಂಕ್‌ ಇಂಡಿಯಾದ ಪ್ರಾದೇಶಿಕ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಯಾವ ದಿನಾಂಕದಂದು ರಜೆ?

ಡಿ.21: ದೇಶಾದ್ಯಂತ ಎಐಬಿಒಸಿ ಮುಷ್ಕರ
ಡಿ.22: ನಾಲ್ಕನೇ ಶನಿವಾರ ಬ್ಯಾಂಕ್‌ ರಜೆ
ಡಿ.23: ಭಾನುವಾರ ಸರ್ಕಾರಿ ರಜೆ
ಡಿ.25: ಕ್ರಿಸ್‌ಮಸ್‌ ರಜೆ
ಡಿ.24: ಬ್ಯಾಂಕ್‌ ತೆರೆದಿರುತ್ತದೆ.
ಡಿ.26: ಬ್ಯಾಂಕ್‌ ಒಕ್ಕೂಟದಿಂದ ಮುಷ್ಕರ.