ಬೆಂಗಳೂರಿನ ವಿಶೇಷ ಜಾತ್ರೆಯಲ್ಲಿ ಕಡಲೆ ಕಾಯಿ ಪರಿಷೆಗೆ ಬಸವನಗುಡಿ ಸಜ್ಜಾಗಿದೆ..

0
294

ಬೆಂಗಳೂರಿನ ಬಸವನಗುಡಿಯ ಸಂಪ್ರದಾಯದಂತೆ ಕಡ್ಲೆಕಾಯಿ ಜಾತ್ರೆ ಆರಂಭಗೊಂಡಿದೆ ಈ ಕಡ್ಲೆ ಕಾಯಿ ಪರಿಷೆ ನೋಡಿದರೆ ಇದು ಬೆಂಗಳೂರು ಎನ್ನುವದು ಬಹುತೇಕವಾಗಿ ಅನುಮಾನ ಅನಿಸುತ್ತೆ. ಏಕೆಂದರೆ ಈ ಜಾತ್ರೆಯಲ್ಲಿ ಕಡಲೆಕಾಯಿದೆ ಹವಾ, ಅದಕ್ಕಾಗಿ ರಾಜ್ಯದ ವಿವಿಧ ಸ್ಥಳಗಳಿಂದ ಕಡ್ಲೆಕಾಯಿ ವ್ಯಾಪಾರಕ್ಕೆ ಬಂದ ಜನರ ಭಾಷೆ, ಉಡುಗೆ ತೊಡುಗೆ, ರೀತಿ ನೀತಿ ಇವೆಲ್ಲವೂ ವಿಶೇಷವಾದ ಬದಲಾವಣೆಯನ್ನು ಸೂಚಿಸುತ್ತೆ. ಜಾತ್ರೆಯಲ್ಲಿ ಕಾಲಿಟ್ಟರೆ ನಾವು ಬೆಂಗಳೂರಲ್ಲಿದ್ದೀವೋ, ಅಥವಾ ಇನ್ನೆಲ್ಲಾದರೂ ಪರದೇಶದಲ್ಲಿ ಇದ್ದೀವೋ ಎಂಬ ಅನುಮಾನ ಕಾಡುತ್ತೆ.

Also read: ದೋಸೆಯ ಕ್ಯಾಪಿಟಲ್ ಸಿಟಿ ಎಂದು ಪ್ರಸಿದ್ದಿ ಪಡೆದಿರುವ ಬೆಂಗಳೂರಿನಲ್ಲಿ ದೋಸೆ ಸಿಗುವ 20 ಸೂಪರ್ ಜಾಗಗಳು ಇಲ್ಲಿವೆ ನೋಡಿ..

ಕಡ್ಲೆ ಕಾಯಿ ಪರಿಷೆ ವಿಶೇಷತೆ ಏನು ?

ವಾರ್ಷಿಕ ಕಡ್ಲೆ ಕಾಯಿ ಪರಿಷೆ ಭಾನುವಾರ(ಡಿ.2)ದಿಂದ ಆರಂಭಗೊಂಡಿದೆ. ಸೋಮವಾರವೂ ಜಾತ್ರೆ ಸಂಭ್ರಮ ಮುಂದುವರೆದಿದೆ. ಸಾವಿರಾರು ಜನ, ಪರಿಷೆಯಲ್ಲಿ ಪಾಲ್ಗೊಂಡು ಕಡ್ಲೆಕಾಯಿ ಕೊಳ್ಳುತ್ತಾ ಆನಂದದಿಂದ ಸುತ್ತಾಡುತ್ತಿದ್ದಾರೆ. ಬೆಂಗಳೂರಿನ ಪುರಾತನ ಜಾತ್ರೆಯಾದ ಇದು, ಕೊನೆಯ ಕಾರ್ತಿಕ ಸೋಮವಾರ ನಡೆಯುತ್ತದೆ. ಮೊದಲ ದಿನವನ್ನು ಚಿಕ್ಕ ಪರಿಷೆಯೆಂದು, ಎರಡನೇ ದಿನವನ್ನು ದೊಡ್ಡ ಪರಿಷೆಯೆಂದು ಕರೆಯಾಗುತ್ತದೆ. ಈ ಸಲದ ಜಾತ್ರೆಯಲ್ಲಿ ಸುಮಾರು 500ಕ್ಕೂ ಅಧಿಕ ರೈತರು ಮತ್ತು ವ್ಯಾಪಾರಿಗಳು ಪಾಲ್ಗೊಂಡಿದ್ದಾರೆ. ಮಸಾಲಾ ಕಡಲೆ ಕಾಯಿ, ಜ್ಯೂಸ್, ಐಸ್ ಕ್ರೀಮ್ ಸೇರಿದಂತೆ ಅನೇಕ ತಿಂಡಿ ಅಂಗಡಿಗಳು ತಲೆ ಎತ್ತಿವೆ. ಹತ್ತರಿಂದ ಹದಿನೈದರ ಬೆಲೆಗೆ ಕಿಲೋ ಕಡಲೆ ಕಾಯನ್ನು ಜನ ಖರೀದಿಸುತ್ತಿದ್ದಾರೆ. ದೊಡ್ಡ ಗಣೇಶ, ದೊಡ್ಡ ಬಸವಣ್ಣ ದೇವಸ್ಥಾನದ ಸುತ್ತಮುತ್ತ ಸಡಗರ ಮೇಳೈಸಿದೆ. ಇಲ್ಲಿನ ಬಸವಣ್ಣನಿಗೆ ಕಡ್ಲೇಕಾಯನ್ನು ನೈವೇದ್ಯವಾಗಿ ಅರ್ಪಿಸುವುದು ಪದ್ಧತಿ.

ಕಡಲೆ ಕಾಯಿ ಪರಿಷೆ ಹಿನ್ನೆಲೆ

ಹಿಂದೆ ಈ ಪ್ರದೇಶ ರೈತರು ಕೃಷಿ ಮಾಡುತ್ತಿದ್ದ ಭೂಮಿಯಾಗಿತ್ತು. ಇಲ್ಲಿ ಹೆಚ್ಚಾಗಿ ಕಡಲೆಕಾಯಿಯನ್ನು ಬೆಳೆಯುತ್ತಿದ್ದರು. ಹೀಗಿರುವಾಗ ಸಮೃದ್ಧವಾಗಿ ಬೆಳೆದಿದ್ದ ಬೆಳೆಯನ್ನು ರಾತ್ರಿ ವೇಳೆಯಲ್ಲಿ ಹೋರಿಯೊಂದು ಬಂದು ತಿಂದುಬಿಡುತ್ತಿತ್ತು. ಪದೇಪದೆ ಇದೇ ರೀತಿ ನಡೆಯುತ್ತಿದ್ದುದರಿಂದ ನಷ್ಟ ಅನುಭವಿಸುತ್ತಿದ್ದ ರೈತರು ರಾತ್ರಿ ವೇಳೆಯಲ್ಲಿ ಕಾದು ಕುಳಿತು ನೋಡಿದಾ ಬೃಹತ್ ಗಾತ್ರದಲ್ಲಿದ್ದ ಬಸವ ಕಾಣಿಸಿತು. ಜನರಿಗೆ ಅದನ್ನು ನೋಡುತ್ತಿದ್ದಂತೆ, ಇದು ಸಾಮಾನ್ಯವಾದ ಎತ್ತಲ್ಲ. ಇದು ಶಕ್ತಿಯುತವಾದ ನಂದಿಯ ಪ್ರತಿರೂಪವೆಂಬ ಭಾವನೆ ಮೂಡಿತು.

Also read: ಕಡಲೇಕಾಯಿ ಪ್ರಿಯರಿಗೆ ಸುಗ್ಗಿಯೋ ಸುಗ್ಗಿ. ಬೆಂಗಳೂರಿನ ಉತ್ಸವ ಕಡೆಲೆಕಾಯಿ ಪರಿಷೆ ಶುರು ಆಗಿದೆ…ಐಟಿ ನೆಲದಲ್ಲಿ ಜಾನಪದ ಸೊಗಡನ್ನ ಮಿಸ್ ಮಾಡ್ಕೋಬೇಡಿ..

ಕೂಡಲೇ ಎಲ್ಲ ರೈತರು, ‘ದಯಮಾಡಿ ತಮ್ಮ ಬೆಳೆಯನ್ನು ಹಾಳು ಮಾಡಬೇಡ. ಇದೇ ಸ್ಥಳದಲ್ಲಿ ನಿನಗೊಂದು ಗುಡಿ ಕಟ್ಟಿ ನಿನ್ನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ. ಕಡಲೆಕಾಯಿ ಬೆಳೆ ಸಮೃದ್ಧವಾಗಿ ಬೆಳೆದು ಅದರ ಕೃಷಿ ಚಟುವಟಿಕೆ ಮುಗಿದ ನಂತರ ಕಾರ್ತಿಕಮಾಸದ ಕೊನೆಯ ಸೋಮವಾರ ನಿನ್ನ ಹೆಸರಿನಲ್ಲಿ ಕಡಲೆಕಾಯಿ ಪರಿಷೆ ನಡೆಸುತ್ತೇವೆ’ ಎಂದು ಬಸವಣ್ಣನಿಗೆ ಮೊರೆಯಿಡುತ್ತಾರೆ. ರೈತಭಕ್ತರ ಈ ಮೊರೆಯನ್ನು ಆಲಿಸಿದ ಬಸವಣ್ಣ ಅಂದಿನಿಂದ ರೈತರ ಬೆಳೆಯನ್ನು ನಾಶಗೊಳಿಸದೆ ಕಾಪಾಡುತ್ತಾನೆ. ಅಂದಿನಿಂದ ರೈತರು ತಾವು ಬೆಳೆದ ಕಡಲೆಕಾಯಿಯನ್ನು ತೆಗೆದುಕೊಂಡು ಬಂದು ಪ್ರತಿ ವರ್ಷ ಜಾತ್ರೆಯನ್ನು ನಡೆಸುತ್ತಿದ್ದಾರೆ.

ಪ್ರವಾಸಿ ಕೇಂದ್ರವಾಗಲಿದೆಯೇ?

ಕಾರ್ತಿಕ ಕಡೇ ಸೋಮವಾರವಾದ ಇಂದು ಬಸವನಗುಡಿ ಕಡಲೆಕಾಯಿ ಪರಿಷೆ ಉದ್ಘಾಟಿಸಿ ಮಾತನಾಡಿದಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಹಲವಾರು ಐತಿಹಾಸಿಕ ದೇವಸ್ಥಾನಗಳನ್ನು ಒಳಗೊಂಡ ಹಾಗೂ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯುವ ಬಸವನಗುಡಿ ಪ್ರದೇಶವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ವರ್ಷಕ್ಕೊಂದು ಬಾರಿ ನಡೆಯುವ ಕಡಲೆ ಕಾಯಿ ಪರಿಷೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನರನ್ನು ಆಕರ್ಷಿಸುತ್ತಿದೆ. ಇದನ್ನು ಒಳಗೊಂಡಂತೆ ಈ ಪರಿಸರದಲ್ಲಿನ ಐತಿಹಾಸಿಕ ದೇವಾಲಯಗಳು ಹಾಗೂ ಸ್ಮಾರಕಗಳನ್ನು ಒಳಗೊಂಡು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಬಿಬಿಎಂಪಿ ಸಹಕಾರ ನೀಡುವ ಭರವಸೆ ನೀಡಿದೆ. ಶೀಘ್ರದಲ್ಲೇ ಪ್ರವಾಸಿ ಕೇಂದ್ರದ ಪಟ್ಟಿಯಲ್ಲಿ ಬಸವನಗುಡಿಯನ್ನು ಸೇರ್ಪಡೆ ಮಾಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.