ಜೀವನದಲ್ಲಿ ಎಷ್ಟಿದೆಯೊ ಅದರ ಬಗ್ಗೆ ತೃಪ್ತಿ ಇರಲಿ

0
1499

ಇರೋದ್ರಲ್ಲಿ ಖುಷಿಯಾಗಿ ಬದುಕೋದನ್ನು ಕಲಿಯಿರಿ.

ಅಂಧನೊಬ್ಬ ಪ್ರತಿದಿನ ಸಂಜೆ ರಸ್ತೆ ಬದಿಯಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದ. ಭಿಕ್ಷೆಯ ರೂಪದಲ್ಲಿ ಎಷ್ಟು ಮೊತ್ತ ದೊರೆಯುತ್ತದೋ ಅದರಲ್ಲಿಯೆ ಅಂದಂದಿನ ಬದುಕನ್ನು ಸವೆಸುತ್ತಿದ್ದ. ಒಂದು ಸಂಜೆ ಇದೇ ಮಾರ್ಗವಾಗಿ ಶ್ರೀಮಂತನೊಬ್ಬ ಹೊರಟಿದ್ದ. ಅಂಧ ಭಿಕ್ಷುಕನ ಸ್ಥಿತಿಯನ್ನು ಕಂಡು ಅವನಿಗೆ ಅಯ್ಯೋ ಎನ್ನಿಸಿತು. ಅಂಧ ಭಿಕ್ಷುಕನ ಕೈಗೆ ನೂರು ರೂಪಾಯಿಯ ನೋಟೊಂದನ್ನು ಇರಿಸಿ ಮುನ್ನಡೆದ.

source: marinortho.com

ದಿನವೂ ಕೇವಲ ನಾಣ್ಯಗಳನ್ನು ಮಾತ್ರ ಪಡೆಯುತ್ತಿದ್ದ ಅಂಧ ಭಿಕ್ಷುಕನಿಗೆ ಯಾರೋ ಕೈಯಲ್ಲಿ ನೋಟನ್ನು ಇರಿಸಿ ಹೋದುದು ಅನೇಕ ಅನುಮಾನಗಳಿಗೆ ಇಂಬು ನೀಡಿತು. ಯಾರೋ ನನ್ನ ದಯನೀಯ ಸ್ಥಿತಿಯನ್ನು ಗೇಲಿ ಮಾಡಲೆಂದು ಕಾಗದದ ತುಕುಡಿಯೊಂದನ್ನು ನೀಡಿ ಹೋಗಿರಬಹುದು. ಇದು ಹಣವಿರಲಿಕ್ಕಿಲ್ಲ. ನನ್ನದು ಇದೆಂಥ ವಿಧಿ, ಕಣ್ಣು ಕಾಣುವಂತೆ ಇದ್ದಿದ್ದರೆ ನಾನು ಇಂತಹ ಸ್ಥಿತಿಗೆ ಸಿಲುಕಿಕೊಳ್ಳಬೇಕಾಗಿರಲಿಲ್ಲ ಎಂದೆಲ್ಲ ಯೋಚಿಸಿದ.ಕೈಯಲ್ಲಿದ್ದ ನೋಟನ್ನು ಮದುಡಿ ಮಾಡಿ ಎಸೆದ. ಇದನ್ನೆಲ್ಲ ನೋಡುತ್ತ ಸಮೀಪದಲ್ಲಿಯೇ ನಿಂತಿದ್ದ ಸಜ್ಜನ ವ್ಯಕ್ತಿಯೊಬ್ಬ ಭಿಕ್ಷುಕನ ಬಳಿಗೆ ಬಂದ. ಮುದುಡಿಯಾಗಿ ನೆಲದಲ್ಲಿ ಬಿದ್ದಿದ್ದ ನೋಟನ್ನು ಕೈಯಲ್ಲಿ ಎತ್ತಿಕೊಂಡ. ಅದನ್ನು ಭಿಕ್ಷುಕನ ಕೈಗೆ ಇರಿಸುತ್ತ `ಇದು ನೂರು ರೂಪಾಯಿಯ ನೋಟು. ಇದಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ಭಾವಿಸಬೇಡ’ ಎಂದು ಹೇಳಿದ. ಅಂಧ ಭಿಕ್ಷುಕ ಅಯ್ಯೋ! ಯಾವುದೋ ದಯಾಳು ವ್ಯಕ್ತಿ ನನ್ನ ಸ್ಥಿತಿಯನ್ನು ಕಂಡು ಮರುಗಿ ದೊಡ್ಡ ಮೊತ್ತವನ್ನು ಭಿಕ್ಷೆಯಾಗಿ ನೀಡಿ ಹೋಗಿದ್ದಾರೆ. ಅವರು ನನ್ನ ಸ್ಥಿತಿಯನ್ನು ಕಂಡು ಗೇಲಿ ಮಾಡಿದ್ದಾರೆ ಎಂದು ಜರಿದೆನಲ್ಲ. ಅವರು ಕೊಟ್ಟ ಹಣವನ್ನು ಮುದುಡಿ ಮಾಡಿ ಎಸೆದುಬಿಟ್ಟೆನಲ್ಲ ಎಂದು ನೊಂದುಕೊಂಡ.

be-satisfied-with-whats-in-life-1
source: pinterest.com

ಅನೇಕ ಬಾರಿ ನಮ್ಮ ಜೀವನದಲ್ಲಿಯೂ ಇದೇ ರೀತಿ ಆಗುವುದುಂಟು. ಇಂತಹ ಉದಾಹರಣೆಗಳು ಬರುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ನಮ್ಮ ಜ್ಞಾನದ ಕಣ್ಣುಗಳಿಂದ ನೋಡುವ ಗುಣ ಇಲ್ಲದೇ ಇರುವುದರಿಂದ ದೊರೆತುದನ್ನು ತುಚ್ಛೀಕರಿಸಿ ಎಸೆದುಬಿಡುತ್ತೇವೆ. ಸಿಕ್ಕದಿದ್ದುದಕ್ಕಾಗಿ ಹಳಹಳಿಸುತ್ತಿರುತ್ತೇವೆ. ನಮಗೆ ಏನೂ ಸಿಕ್ಕಲಿಲ್ಲ. ಸಿಕ್ಕಿದ್ದೂ ಸಹ ಉಪಯೋಗವಿಲ್ಲ ಎಂದೆಲ್ಲ ಪರಿತಪಿಸುತ್ತಿರುತ್ತೇವೆ. ಇದರ ಬದಲಾಗಿ ನಮಗೆ ಸಿಕ್ಕಿದ್ದರಲ್ಲಿಯೇ ತೃಪ್ತಿಪಟ್ಟುಕೊಳ್ಳುವ ಗುಣ ನಮ್ಮಲ್ಲಿ ಮೂಡಿದರೆ ಸಿಕ್ಕಿದ್ದರ ಮಹತ್ವದ ಅರಿವಾಗುತ್ತದೆ. ನಮಗೆ ಸಿಕ್ಕಿರುವುದು ಕಡಿಮೆ ಏನಲ್ಲ ಎಂಬುದರ ತಿಳಿವಳಿಕೆ ಉಂಟಾಗುತ್ತದೆ.