225 ಸದಸ್ಯರಲ್ಲಿ ಬಂದಿದ್ದೇ 50, 60 ಮಂದಿ – ಕಳ್ಳಾಟದಲ್ಲೇ ಮುಗೀತು ಬೆಳಗಾವಿ ಅಧಿವೇಶನ

0
637

ಜಿಲ್ಲೆಯ ಸುವರ್ಣಸೌಧದಲ್ಲಿ ನಡೆದ 10 ದಿನಗಳ ಚಳಿಗಾಲದ ಅಧಿವೇಶನ ಮುಗಿದಿದೆ. ಆದ್ರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಇದರಿಂದ ಸಿಕ್ಕಿದ್ದೇನು ಅನ್ನೋ ಪ್ರಶ್ನೆಗೆ ಕಣ್ಮುಂದೆ ಬರೋದು ಬರೀ ಶೂನ್ಯ.

ಉತ್ತರ ಕರ್ನಾಟಕ ಭಾಗದ ಕೆಲ ಸಮಸ್ಯೆಗಳ ಬಗ್ಗೆ ಬೆಳಗಾವಿ ವಿಧಾನ ಸೌಧದ ಅಧಿವೇಶನದಲ್ಲಿ ಚರ್ಚೆ ಆಯ್ತು. ಆದ್ರೆ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಬಹುತೇಕ ಶಾಸಕರಿಂದ ನಿರುತ್ಸಾಹ ಕಂಡುಬಂತು. 10 ದಿನದ ಅಧಿವೇಶನದ ಕಲಾಪಗಳಲ್ಲಿ ಭಾಗವಹಿಸಿದ್ದ ಶಾಸಕರ ಸಂಖ್ಯೆ ಕಡಿಮೆ. ಸದನದೊಳಗಿನ ಆಸನಗಳು ಖಾಲಿ ಖಾಲಿ ಕಾಣ್ತಿದ್ರೂ, ಹಾಜರಾತಿ ಪುಸ್ತಕದಲ್ಲಿ ಮಾತ್ರ ಶಾಸಕರ ಸಹಿ ಚೆನ್ನಾಗಿಯೇ ಇದೆ.

ಬಹುತೇಕ ಶಾಸಕರು ಒಂದಲ್ಲ ಒಂದು ದಿನ ಗೈರಾದವರೇ. ಹಾಗೇ ನೋಡಿದ್ರೆ ಉಳಿದ ಶಾಸಕರೆಲ್ಲಾ ಹಾಜರಾಗಿದ್ರಾ ಅನ್ನೋ ಪ್ರಶ್ನೆಗೆ ಹಾಜರಾತಿಯಲ್ಲಿ ಅವರ ಹೆಸರಿದೆ ಅನ್ನಬಹುದು. ಆದ್ರೆ ಸಭೆಯ ಕಲಾಪದಲ್ಲಿ ಎಷ್ಟು ಶಾಸಕರು ಇರ್ತಿದ್ರು ಅನ್ನೋದನ್ನ ನೀವೇ ವಿಡಿಯೋ ಚಿತ್ರೀಕರಣಗಳಲ್ಲಿ ನೋಡಿದ್ದೀರಾ. 225 ಶಾಸಕರಲ್ಲಿ ಹೆಚ್ಚಂದ್ರೆ 50 ರಿಂದ 60 ಶಾಸಕರು ಸದನದೊಳಗಡೆ ಕಾಣ್ತಿದ್ರು. ಹೀಗಿದ್ದರೂ ಬೆಳಗಾವಿ ಅಧಿವೇಶನಕ್ಕೆ ಖರ್ಚಾಗಿದ್ದು ಬರೋಬ್ಬರಿ 12 ಕೋಟಿ ರೂ.

ಇದರ ನಡುವೆಯೂ 10 ದಿನಗಳಲ್ಲಿ ಯಾವ ಶಾಸಕರು ಎಷ್ಟು ದಿನ ಬಂದಿದ್ರು ಅಂದ್ರೆ:

1 ದಿನವೂ ಅಧಿವೇಶನಕ್ಕೆ ಬಾರದವರು: ಶಾಸಕರಾದ ಆನಂದ್ ಸಿಂಗ್, ಅಶೋಕ್ ಖೇಣಿ, ಬಾಬೂರಾವ್ ಚಿಂಚನಸೂರ್, ನಾಗೇಂದ್ರ ಬಾಬು ಹಾಗೂ ಸುರೇಶ್ ಬಾಬು ಒಂದು ದಿನವೂ ಅಧಿವೇಶನದತ್ತ ಮುಖ ಹಾಕಿಲ್ಲ.

1 ದಿನ ಮಾತ್ರ ಅಧಿವೇಶನಕ್ಕೆ ಬಂದವರು: ಶಾಸಕರಾದ ರಘು ಎಸ್, ಸಂಬಾಜಿ ಪಾಟೀಲ್ ಹಾಗೂ ವರ್ತೂರ್ ಪ್ರಕಾಶ್ ಒಂದು ದಿನ ಮಾತ್ರ ಅಧಿವೇಶನದಲ್ಲಿ ಕಾಣಿಸಿಕೊಂಡ್ರು.

2 ದಿನ ಅಧಿವೇಶನಕ್ಕೆ ಬಂದವರು: ಶಾಸರಾದ ದತ್ತಾತ್ರೇಯ ಪಾಟೀಲ್ ಹಾಗೂ ದೇವೇಗೌಡ ಪಾಟೀಲ್ ಎರಡು ದಿನಗಳು ಮಾತ್ರ ಅಧಿವೇಶನಕ್ಕೆ ಬಂದಿದ್ದರು.

3 ದಿನ ಅಧಿವೇಶನಕ್ಕೆ ಬಂದವರು: ಶಾಸಕರಾದ ಸಂಗನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ, ಶಿವನಗೌಡ ನಾಯಕ್, ಯಶ್ವಂತರಾಯ್ ಗೌಡ ಪಾಟೀಲ್, ತಿಪ್ಪರಾಜು, ರಾಜಾ ವೆಂಕಟಪ್ಪ ನಾಯಕ್, ಮನೂಹರ್ ತಹಶೀಲ್ದಾರ್ ಹಾಗೂ ಹಾಲಾಡಿ ಶ್ರೀನಿವಾಸ್ ಶೆಟ್ಟಿ 3 ದಿನ ಅಧಿಕವೇಶನದಲ್ಲಿ ಭಾಗಿಯಾಗಿದ್ರು.

4 ದಿನ ಅಧಿವೇಶನಕ್ಕೆ ಬಂದವರು: ಶಾಸಕರಾದ ಅಬ್ಬಯ್ಯ ಪ್ರಸಾದ್, ಶಿವರಾಜ್ ಪಾಟೀಲ್, ಶಾರದಾ ಮೋಹನ್ ಶೆಟ್ಟಿ ಹಾಗೂ ಮಂಜುನಾಥ್ ಜಿ. 4 ದಿನ ಅಧಿವೇಶನಕ್ಕೆ ಬಂದಿದ್ದರು.

5 ದಿನ ಅಧಿವೇಶನಕ್ಕೆ ಬಂದವರು: ಅರವಿಂದ್ ಚಂದ್ರಕಾಂತ್ ಪಾಟೀಲ್, ಅರವಿಂದ ಲಿಂಬಾವಳಿ, ಆರ್.ವಿ ದೇವರಾಜ್, ಹಂಪಯ್ಯ ಸಾಹುಕಾರ್, ಎಬ್.ಎ ಹ್ಯಾರಿಸ್, ಲಕ್ಷ್ಮಣ್ ಸವಧಿ, ಪಿಳ್ಳಿ ಮುನಿಶಾಮಪ್ಪ, ಸತೀಶ್ ರೆಡ್ಡಿ, ಶಿವಾನಂದ ಪಾಟೀಲ್, ಸುಧಾಕರ್.ಡಿ ಹಾಗೂ ಜಮೀರ್ ಅಹ್ಮದ್ 5 ದಿನ ಅಧಿವೇಶನದಲ್ಲಿ ಕಾಣಿಸಿಕೊಂಡ್ರು.

ಹೀಗಿದ್ರೂ ಸ್ಪೀಕರ್ ಕೋಳಿವಾಡ ಅವರಿಗೆ ಈ ಅಧಿವೇಶನ ಸಂತೃಪ್ತಿ ತಂದಿದೆಯಂತೆ. ಸರಿ ಸರ್ ಬೆಳಗಾವಿ ವಿಧಾನಸೌಧದಲ್ಲಿ ಬರೀ ಚರ್ಚೆ ನಡೆದ್ರೆ ಸಾಕಾ? ಜನರಿಗೆ ಆಡಳಿತ ಸಿಗಬಾರದಾ ಅಂತ ಕೇಳಿದ್ರೆ, 8 ಇಲಾಖೆಗಳನ್ನ ಇಲ್ಲಿ ಶಿಫ್ಟ್ ಮಾಡುವ ಇಚ್ಚೆ ನಂಗೂ ಇದೆ ಅಂತಾರೆ.

ಬೆಳಗಾವಿ ವಿಧಾನ ಸೌಧದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಧಿವೇಶನ ನಡೀತಿದೆ. ಇದನ್ನ ಶಕ್ತಿ ಸೌಧವನ್ನಾಗಿ ಮಾಡ್ತೇವೆ. ಆಡಳಿತ ಜನರಿಗೆ ತಲುಪಿಸ್ತೇವೆ ಅಂತಾ ಹೇಳ್ತಾನೆ ಬರಲಾಗ್ತಿದೆ. ಆದ್ರೆ ಇನ್ನೂ ಯಾವುದೇ ನಿರ್ಣಯವೂ ಆಗಿಲ್ಲ. ಈ ಬಾರಿ ಬರದ ನಡುವೆ ಬೆಂದಿರುವ ಉತ್ತರ ಕರ್ನಾಟಕದ ರೈತರಿಗಂತೂ ಈ ಅಧಿವೇಶನದಿಂದ ಸಿಕ್ಕಿದ್ದೇನಿಲ್ಲ.