ಬಲ್ಲಿರಾ ಬೆಲ್ಲದ ಗುಣವ..?

0
1524

ಬೆಲ್ಲ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಬಹುತೇಕ ಮಂದಿ ಸಕ್ಕರೆಯತ್ತ ವಾಲುತ್ತಿರುವುದೇ ಇದಕ್ಕೆ ಕಾರಣ. ಆದರೆ, ಬೆಲ್ಲದಿಂದಾಗುವ ಉಪಯೋಗಗಳ ಬಗ್ಗೆ ಬಲ್ಲವರಿಗೆ ಮಾತ್ರವೇ ತಿಳಿದಿರುತ್ತದೆ. ಉಳಿದವರೂ ತಿಳಿಯಲು ಯತ್ನಿಸಬೇಕು.

ಬೆಲ್ಲ ಕೇವಲ ಸಿಹಿ ಪದಾರ್ಥವಾಗಿರದೆ, ಔಷಧಿಯುಕ್ತ ಸಿಹಿಯಾಗಿದೆ. ನೋಡಲಿಕೆ ಕಂದು ಅಥವಾ ಕಪ್ಪಗಿರುವ ಕಾರಣ ಯುವಪೀಳಿಗೆಯವರು ಬೆಲ್ಲ ತಿನ್ನಲು ಹಿಂದೇಟು ಹಾಕುತ್ತಿರಬಹುದು. ಆದರೆ, ಬೆಳ್ಳಗೆ ಕಾಣುವ ಸಕ್ಕರೆಗಿಂತಲೂ ಬೆಲ್ಲ ಅತ್ಯುತ್ತಮ ಎಂಬುದನ್ನು ಮರೆಯಬಾರದು.

ಬೆಲ್ಲವನ್ನು ನೀರಿನೊಂದಿಗೆ ಸೇವಿಸುವ ಬದಲಿಗೆ ಹಾಲಿನೊಂದಿಗೆ ಸೇವಿಸಿದರೆ ಉತ್ತಮ ಎಂಬ ಅಂಶವನ್ನು ಆಯುರ್ವೇದ ಪ್ರತಿಪಾದಿಸುತ್ತದೆ. ಸಕ್ಕರೆ ಸೇವನೆಯಿಂದ ದೇಹದ ತೂಕ ಹೆಚ್ಚುವುದು ಖಚಿತ. ಆದರೆ, ಬೆಲ್ಲ ಸೇವನೆಯಿಂದ ಈ ರೀತಿಯ ಪ್ರಮಾದ ಆಗುವುದಿಲ್ಲ.

ಹಾಲು ಮತ್ತು ಬೆಲ್ಲ ಸೇರಿದರೆ, ಎರಡರಲ್ಲಿನ ಉತ್ತಮ ಗುಣಗಳು ದೇಹಕ್ಕೆ ಸೇರ್ಪಡೆಯಾಗುತ್ತವೆ. ಪ್ರತಿದಿನ ಒಂದು ತುಂಡು ಬೆಲ್ಲವನ್ನು ಕುಟ್ಟಿ ಪುಡಿಮಾಡಿ ಹಾಲಿನ ಜತೆ ಬೆರೆಸಿ ಕುಡಿದರೆ, ಆರೋಗ್ಯ ಸುಧಾರಣೆಯುತ್ತ ಪರಿಣಾಮ ಬೀರಲಿದೆ.

ವಿಶೇಷವಾಗಿ ಮಹಿಳೆಯರು, ಮಾಸಿಕ ದಿನಗಳಲ್ಲಿ ಅನುಭವಿಸುವ ನೋವನ್ನು ಬೆಲ್ಲದಷ್ಟು ಸಮರ್ಥವಾಗಿ ಕಡಿಮೆಗೊಳಿಸುವ ಔಷಧಿ ಇನ್ನೊಂದಿಲ್ಲ ಎಂಬ ಮಾತಿದೆ. ಸಂಧಿವಾತ, ಅಸ್ತಮಾಗಳಿಗೂ ಬೆಲ್ಲ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.

ಬೆಲ್ಲ ಸೇರಿಸಿದ ಹಾಲನ್ನು ಕುಡಿಯುವುದರಿಂದ ರಕ್ತ ಶುದ್ಧೀಕರಣಕ್ಕೆ ನೆರವಾಗಲಿದೆ. ಪ್ರತಿನಿತ್ಯ ಒಂದು ಲೋಟ ಹಾಲು ಕುಡಿದರೆ, ಅದರ ಪರಿಣಾಮ ತಿಳಿಯಲಿದೆ.

ಇನ್ನೊಂದು ಅಂಶವೆಂದರೆ, ಬೆಲ್ಲ ಬೆರೆಸಿದ ಹಾಲು ಸೇವನೆಯಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳಲಿದೆ.

ಬೆಲ್ಲ ಮಿಶ್ರಿತ ಹಾಲಿನ ಜತೆಗೆ ಚಿಕ್ಕದೊಂದು ಶುಂಠಿ ತುಂಡನ್ನು ಸೇರಿಸಿ ಕುಡಿದರೆ, ಮೂಳೆಗಳ ಸಂದುಗಳಲ್ಲಿ ಆಗುವ ನೋವನ್ನು ಕ್ರಮೇಣ ನಿವಾರಿಸಲಿದೆ. ಪ್ರತಿನಿತ್ಯ ಈ ಅಭ್ಯಾಸವನ್ನು ರೂಢಿಸಿಕೊಂಡರೆ ಒಳ್ಳೆಯದು.

ಬೆಲ್ಲ ಸೇರಿಸಿದ ಹಾಲು ಕುಡಿದರೆ ಚರ್ಮದ ಕಾಂತಿ ವೃದ್ಧಿಯಾಗಲಿದೆ. ತುಂಡು ಬೆಲ್ಲವನ್ನು ಪ್ರತಿದಿನ ನಾವು ತೆಗೆದುಕೊಳ್ಳುವ ಆಹಾರದೊಂದಿಗೆ ಸೇವಿಸಿದರೆ ಮುಖದಲ್ಲಿ ಮೊಡವೆಗಳಾಗುವ ಸಾಧ್ಯತೆಗಳು ಕಡಿಮೆಯಿರುತ್ತವೆ.

ಮಹಿಳೆಯರು ಮಾಸಿಕ ದಿನಗಳ ಹಿಂದಿನ ಮತ್ತು ನಂತರದ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ನೋವಿನಿಂದ ಪಾರಾಗಲು ಚಿಕ್ಕಚಮಚದಷ್ಟು ಬೆಲ್ಲದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ, ದಿನಕ್ಕೆರೆಡು ಬಾರಿ ಕುಡಿದರೆ, ನೋವು ಕ್ರಮೇಣ ಕಡಿಮೆಯಾಗಲಿದೆ.

ಗರ್ಭಿಣಿಯರು ರಕ್ತಹೀನತೆಯಿಂದ ಬಳಲುವುದು ಸಾಮಾನ್ಯ ಸಂಗತಿ. ಇದರ ಪರಿಹಾರಕ್ಕೆ ನಿತ್ಯವೂ ಬೆಲ್ಲ ಸೇರಿಸಿದ ಹಾಲು ಕುಡಿದರೆ, ಈ ಕೊರತೆ ನಿವಾರಣೆಯಾಗಲಿದೆ.

ಪ್ರತಿಯೊಬ್ಬರ ಮನೆಗಳಲ್ಲೂ ಲಭ್ಯವಾಗುವ ಬೆಲ್ಲವನ್ನು ಮನೆಮದ್ದಿನ ರೂಪದಲ್ಲಿ ಉಪಯೋಗಿಸುವ ಮೂಲಕ, ಹಲವು ಬಗೆಯ ಸಮಸ್ಯೆಗಳನ್ನು ದೂರವಿಡಬಹುದು.