ಅನಗತ್ಯವಾದುದನ್ನು ತಿನ್ನುವುದಕ್ಕಿಂತ ಹಸಿ ಸೌತೆಕಾಯಿ ತಿಂದರೆ ಬಾಯಿಗೆ ರುಚಿ, ದೇಹಕ್ಕೆ ಹಿತಕರ…!

0
1349

ದೇಹಕ್ಕೆ ಹಿತಕರ ಸೌತೆಕಾಯಿ

ಸೌತೆಕಾಯಿ ಹಸಿಯಾಗೇ ತಿನ್ನಬಹುದಾದ, ಅಧಿಕ ನೀರಿನಂಶವುಳ್ಳ, ರುಚಿಕಟ್ಟಾದ ತರಕಾರಿ. ಬಾಯಿಗೆ ರುಚಿ, ದೇಹಕ್ಕೆ ತಂಪು ನೀಡುವುದಷ್ಟೇ ಅಲ್ಲದೆ ಚರ್ಮದ ಆರೋಗ್ಯಕ್ಕೂ ಇದು ಉತ್ತಮವಾಗಿದ್ದು, ಚರ್ಮದಲ್ಲಿರುವ ಉಷ್ಣತೆಯನ್ನೂ ತೆಗೆದುಹಾಕುತ್ತದೆ.ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಕೆ ಅಂಶ ಹೊಂದಿರುವುದರಿಂದ ಮೂಳೆಗಳಿಗೆ ಶಕ್ತಿ ನೀಡುತ್ತದೆ. ಜೊತೆಗೆ ಇದರಲ್ಲಿ ಸಿಲಿಕಾ ಇರುವುದರಿಂದ ಕೀಲುಸಂದಿಗಳನ್ನೂ ಬಲಪಡಿಸುವುದರಿಂದ ಮೂಳೆಗಳು ಸದೃಢವಾಗುತ್ತವೆ. ಮೆದುಳಿನ ನರಗಳನ್ನು ಬಲಪಡಿಸುವ ಸಾಮಥ್ರ್ಯ ಹೊಂದಿರುವುದರಿಂದ ಅರವತ್ತರ ನಂತರ ಕಾಡುವ ಮರೆವಿನ ಕಾಯಿಲೆ ಅಲ್ಜಿಮೈರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ರಕ್ತದೊತ್ತಡ ಕಾಪಾಡುವ ಶಕ್ತಿ ಇದರಲ್ಲಿದೆ. ಹಸಿಯಾಗಿ ನಿತ್ಯ ಸೇವಿಸುವುದರಿಂದ ಹಸಿವು ಹೆಚ್ಚುತ್ತದೆ. ಗ್ಯಾಸ್ ಸಮಸ್ಯೆಯೂ ಕಡಿಮೆಯಾಗುತ್ತದೆ. ರಾತ್ರಿ ವೇಳೆ ತಲೆನೋವು ಕಾಡುತ್ತಿದ್ದರೆ ಸೌತೆಕಾಯಿ ತಿಂದು ಮಲಗಿದರೆ ಒಳ್ಳೆಯದು. ಕ್ಯಾನ್ಸರ್‍ಗೆ ಕಾರಣವಾಗುವ ಜೀವಕೋಶಗಳನ್ನು ಕೊಲ್ಲುವ ಶಕ್ತಿ ಸೌತೆಕಾಯಿಗಿರುವುದರಿಂದ ಇದು ಕನಿಷ್ಟ ಎಂಟು ತರಹದ ಕ್ಯಾನ್ಸರ್ ಸಾಧ್ಯತೆಯನ್ನು ತಡೆಗಟ್ಟುತ್ತದೆ. ಮೇದೋಜೀರಕಾಂಗ ಹಾರ್ಮೋನ್ ಉತ್ಪಾದನೆ ಮಾಡಲು ಅನುಕೂಲವಾಗುವ ರಾಸಾಯನಿಕಗಳು ಸೌತೆಕಾಯಿ ರಸದಲ್ಲಿದೆ.

ತಾಜಾ ಸೌತೆಕಾಯಿ ತಿನ್ನುವುದರಿಂದ ಮೈಕೈ ಊತ ಕಡಿಮೆಯಾಗುತ್ತದೆ. ಇದರಲ್ಲಿರುವ ಪ್ರೋಸ್ಟಾಗ್ಲಾಂಡಿನ್ ಎಂಬ ರಾಸಾಯನಿಕಕ್ಕೆ ಇಂತಹ ಊತವನ್ನು ಕಡಿಮೆ ಮಾಡುವ ಶಕ್ತಿ ಇದೆ. ಸೌತೆಯಲ್ಲಿರುವ ಎರಿಪ್ಸಿನ್ ಎಂಬ ಕಿಣ್ವ ಹೊಟ್ಟೆಯಲ್ಲಿರುವ ಲಾಡಿ ಹುಳುಗಳನ್ನು ಸಾಯಿಸುವ ಶಕ್ತಿ ಹೊಂದಿದೆ. ಜೀರ್ಣಶಕ್ತಿ ಹೆಚ್ಚಿಸುವ ಶಕ್ತಿ ಇದರಲ್ಲಿದ್ದು, ಹೊಟ್ಟೆಯ ಪದರಗಳಿಗೆ ತಂಪು ನೀಡುವುದರಿಂದ ಹೊಟ್ಟೆಯುರಿ-ಹುಣ್ಣು ಕ್ರಮೇಣ ಕಡಿಮೆಯಾಗುತ್ತದೆ. ಹೆಚ್ಚಿನ ನೀರಿನಂಶ ಹೊಂದಿರುವುದರಿಂದ ದೇಹದಲ್ಲಿರುವ ಕಲ್ಮಶವನ್ನು ಸುಲಭವಾಗಿ ತೆಗೆದುಹಾಕುತ್ತದೆ. ಅಧಿಕ ನೀರಿನ ಜೊತೆ ನಾರಿನಂಶವೂ ಇರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ.

ಇದನ್ನು ಹಸಿಯಾಗಿ ತಿನ್ನಬಹುದು. ತರಕಾರಿ ಸಲಾಡ್ ಜೊತೆಗೆ ಸೇರಿಸಬಹುದು. ಬೇಯಿಸಿಯೂ ಬಳಸಬಹುದು. ಸೌತೆಕಾಯಿ ರಸವನ್ನು ಸುಮ್ಮನೆ ಚರ್ಮಕ್ಕೆ ಹಚ್ಚಿಕೊಂಡರೆ ಬಿಸಿಲಿನ ಝಳದಿಂದ ಕಪ್ಪಾದ ಚರ್ಮಕ್ಕೆ ಹಾಯೆನಿಸುತ್ತದೆ. ಜೊತೆಗೆ ಇದು ಬ್ಲೀಚ್‍ನಂತೆಯೂ ಚರ್ಮದ ಮೇಲೆ ಕೆಲಸ ಮಾಡುತ್ತದೆ. ಆಯಾಸಗೊಂಡ ಕಣ್ಣಿನ ಮೇಲೆ ಎರಡು ಸೌತೆಕಾಯಿ ಬಿಲ್ಲೆಗಳನ್ನು ಇಟ್ಟು ವಿಶ್ರಮಿಸಿದರೆ ಆಯಾಸ ಪರಿಹಾರವಾಗುತ್ತೆ, ಕಣ್ಣ ಸುತ್ತಲ ಕಪ್ಪು ಉಂಗುರ ಮಾಯವಾಗುತ್ತೆ, ಕಣ್ಣೂ ಅಗಲವಾಗುತ್ತದೆ. ಕಣ್ಣಿನ ಡ್ರಾಪ್ಸ್‍ಗಳಿಲ್ಲದೆ ಈ ಸಮಸ್ಯೆಗಳನ್ನು ಸೌತೆಬಿಲ್ಲೆಯಿಂದಲೇ ಪರಿಹಾರ ಮಾಡಿಕೊಳ್ಳಬಹುದು.

ನಿಂಬೆ ರಸದೊಂದಿಗೆ ಸೌತೆರಸ ಬೆರೆಸಿ ಚರ್ಮಕ್ಕೆ ಹಚ್ಚಿಕೊಂಡರೆ ಮೃದುವಾಗುತ್ತದೆ. ಸೌತೆಕಾಯಿಯಲ್ಲಿ ಸಿಲಿಕಾನ್, ಸಲ್ಫರ್, ಸೋಡಿಯಂ, ಕ್ಯಾಲ್ಸಿಯಂ, ಫಾಸ್ಪರಸ್ ಮುಂತಾದ ಪೋಷಕಾಂಶಗಳಿದ್ದು ಇವೆಲ್ಲವೂ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ತಲೆಗೆ ಸೌತೆಕಾಯಿ ರಸ ಹಚ್ಚಿ ಒಂದು ಗಂಟೆಯ ನಂತರ ತೊಳೆದರೆ ಕೂದಲು ಉದುರುವಿಕೆ ಕಡಿಮೆಯಾಗುವುದರ ಜೊತೆಗೆ ಮಿರಿಮಿರಿ ಮಿಂಚುತ್ತದೆ. ಈಗಂತೂ ಬೇಸಿಗೆ ಕಾಲ. ಅನಗತ್ಯವಾದುದನ್ನು ತಿನ್ನುವುದಕ್ಕಿಂತ ಹಸಿ ಸೌತೆಕಾಯಿ ತಿಂದರೆ ಬಾಯಿಗೆ ರುಚಿ, ದೇಹಕ್ಕೆ ಹಿತ.