ಎಲ್ಲಾ ಹಗರಣಗಳನ್ನೂ ಮೀರಿಸುವಂತಿದೆ ಬಿ.ಬಿ.ಎಂ.ಪಿ.ಯ ಈ ಹಗರಣ; ನಮ್ಮ ನಿಮ್ಮ ತೆರಿಗೆ ಹಣ ದೋಚುತ್ತಿದೆ ಬಿ.ಬಿ.ಎಂ.ಪಿ.!!

0
163

ಬಹೃತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬೃಹತ್ ಹಗರಣವೊಂದು ನಡೆದಿರುವ ಆರೋಪ ಕೇಳಿ ಬಂದಿದೆ. 2015 ರಿಂದ 2020ರ ತನಕ ನಡೆದ ಕಾಮಗಾರಿಗಳ ಗುತ್ತಿಗೆಯನ್ನು ಒಂದೇ ಸಂಸ್ಥೆಗೆ ನೀಡಲಾಗಿದೆ ಎಂಬ ಗಂಭಿರವಾದ ಆರೋಪ ಬಿಬಿಎಂಪಿ ವಿರುದ್ಧ ಕೇಳಿಬಂದಿದೆ.

ಈ ಬಗ್ಗೆ ಅಂಕಿ-ಅಂಶಗಳ ಸಮೇತ ಮಾಹಿತಿಯನ್ನು ಬೆಂಗಳೂರು ನವ ನಿರ್ಮಾಣ ಪಕ್ಷ ಬಹಿರಂಗಪಡಿಸಿದೆ. ಅಷ್ಟೇ ಅಲ್ಲ ಬಿಬಿಎಂಯಲ್ಲಿ ನಡೆದ 4ಜಿ ಮಾದರಿಯ ಹಗರಣವಿದು ಎಂದು ಉಲ್ಲೇಖಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಗಂಭೀರ ಆರೋಪ ಮಾಡಿದ್ದಾರೆ.

ಕಳೆದ 5 ವರ್ಷಗಳಲ್ಲಿ 28,314 ವಿವಿಧ ಯೋಜನೆಗಳ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ. ಕೆಲವೊಂದು ಕಾಮಗಾರಿಗೆ ಟೆಂಡರ್ ಕರೆಯದೇ ನೇರವಾಗಿ ನೀಡಲಾಗಿದೆ ಎನ್ನಲಾಗಿದ್ದು, ಇದಕ್ಕಾಗಿ ಶೇ 10ರಷ್ಟು ಕಮೀಷನ್ ಪಡೆಯಲಾಗಿದೆ ಎಂಬ ಆರೋಪ ಬಂದಿದೆ.

ಪಾಲಿಕೆಯಲ್ಲಿ 2015-20ನೇ ಸಾಲಿ ನಲ್ಲಿ ಅಧಿಕಾರದಲ್ಲಿದ್ದ ಸದಸ್ಯರು ಸಾವಿರಾರು ಕೋಟಿ ರೂ. ವಿವಿಧ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನೀಡುವ ಮೂಲಕ ಬಹು ಕೋಟಿ ಅವ್ಯವಹಾರ ನಡೆಸಿದ್ದಾರೆ.

ಇದು ಪಾಲಿಕೆ ಸದಸ್ಯರು ನಡೆಸಿರುವ 4ಜಿ ಹಗರಣ ಎಂದು ಬೆಂಗಳೂರು ನವ ನಿರ್ಮಾಣ ಪಕ್ಷ ಅಂಕಿ- ಅಂಶ ಮತ್ತು ದಾಖಲೆಯ ಸಹಿತ ಆರೋಪ ಮಾಡಿದೆ. ಈ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನವ ನಿರ್ಮಾಣ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್‌ ನರಸಿಂಹನ್‌ ಮಾತನಾಡಿ, 2015ರಿಂದ 2020ರ ಅವಧಿಯಲ್ಲಿ 10 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ನೀಡಲಾಗಿದೆ. ಈ ರೀತಿ ಒಂದೇ ಏಜೆನ್ಸಿಗೆ ಸಾವಿರಾರುಕೋಟಿ ರೂ. ಮೊತ್ತದ ಕಾಮಗಾರಿ ನೀಡುವ ಮೂಲಕ ಬಹುದೊಡ್ಡ ಹಗರಣ ಮಾಡಲಾಗಿದೆ.

ಇದನ್ನು ಪಾಲಿಕೆಯ 4ಜಿ ಹಗರಣ ಎಂದೇ ವ್ಯಾಖ್ಯಾನಿಸಬಹುದಾಗಿದೆ. ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳಲ್ಲೂ ಕೆಆರ್‌ ಐಡಿಎಲ್‌ಗೆಕಾಮಗಾರಿ ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ 21,653 ಕೋಟಿ ರೂ. ಮೌಲ್ಯದ 63,629 ಕಾಮಗಾರಿಗಳನ್ನು ಕೆಆರ್‌ ಐಡಿಎಲ್‌ಗೆ ನೀಡಲಾಗಿದ್ದು, ಇದರಲ್ಲಿ 10,018 ಕೋಟಿ ರೂ. ಮೌಲ್ಯದ 28,314 ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಇನ್ನುಕೆಲವುಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪೈಕಿ, ಸುಮಾರು 4721ಕೋಟಿ ರೂ. ಮೌಲ್ಯದ ಶೇ.50 ಕಾಮಗಾರಿಗಳನ್ನು ಒಂದೇ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಉದ್ದೇಶಪೂರ್ವಕ ವಾಗಿ ಅವ್ಯವಹಾರ ನಡೆಸಲು ಒಂದೇ ಏಜೆನ್ಸಿಗೆ ನೀಡಲಾಗಿದೆ ಎಂದು ಆರೋಪಿಸಿದರು. ಪ್ರತಿ ಯೊಜನೆಯಲ್ಲಿ ಶೇ.10 ಕಮಿಷನ್‌ ಪಡೆದುಕೊಳ್ಳಲಾಗಿದೆ. ಇದು ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಒಂದು ಉದಾಹರಣೆ ಮತ್ತು ಆಡಳಿತದ ದುರ್ಬಳಕೆಗೆ ಹಿಡಿದಕನ್ನಡಿ ಎಂದರು.

ಬಿಎನ್‌ಪಿ ಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಅರುಣ್‌ ಮಹೇಂದ್ರನ್‌ ಮಾತನಾಡಿ, ನಗರದ ಸಾರ್ವಜನಿಕರು ತಮ್ಮ ವಾರ್ಡ್‌ಗಳಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ಕೆಆರ್‌ಐಡಿಎಲ್‌ಗೆನೀಡಲಾಗಿರುವ ಕಾಮಗಾರಿಗಳ ವಿವರವನ್ನು ವಾರ್ಡುವಾರು ವಿಂಗಡಿಸಿ, ಬೆಂಗಳೂರು ನವ ನಿರ್ಮಾಣ ಪಕ್ಷದ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಕ್ಷದ ವಿಷ್ಲೇಷಣಾ ಘಟಕದ ಮುಖ್ಯಸ್ಥ ಸಂಜಯ್‌ ಮೆಹ್ರೋತ್ರ, ಬಿಎನ್‌ಪಿಯ ಖಜಾಂಚಿ ಸುಬ್ಬು ಹೆಗ್ಡೆ, ಬಿಎನ್‌ಪಿಯ ಸಂಶೋಧನಾ ವಿಭಾಗದ ಮುಖ್ಯಸ್ಥ ಸೌಮ್ಯಾ ರಾಘವನ್‌ ಹಾಗೂ ಪದ್ಮನಾಭ ನಗರ ಕ್ಷೇತ್ರದ ಬಿಎನ್‌ಪಿ ಮುಖಂಡರಾದ ಸಿದ್ಧಾರ್ಥ ಶೆಟ್ಟಿ ಇತರರಿದ್ದರು.

Also read: ನೌಕಾಪಡೆಯ ಯುದ್ಧ ಹೆಲಿಕಾಪ್ಟರ್ ನಿರ್ವಹಣಾ ಅಧಿಕಾರಿಯಾಗಿ ನೇಮಕಗೊಂಡು ಇತಿಹಾಸ ಸೃಷ್ಟಿಸಿದ ಮಹಿಳಾ ಅಧಿಕಾರಿಗಳು!!