ದಿವಾಕರ್-ನ ಮಿತಿ ಮೀರಿದ ವರ್ತನೆಗೆ ತಕ್ಕ ಪಾಠ ಕಲಿಸಿದ ಕಿಚ್ಚ..

0
703

ಬಿಗ್‌ಬಾಸ್‌ನ “ವಾರದ ಕಥೆ ಕಿಚ್ಚನ ಜೊತೆ” ಈ ವಾರದ ಸಂಚಿಕೆಯಲ್ಲಿ ಸ್ಪರ್ಧಿ ದಿವಾಕರ್‌ನನ್ನು ಚೆನ್ನಾಗಿಯೇ ತರಾಟೆಗೆ ತೆಗೆದುಕೊಂಡರು, ಇದಕ್ಕೆ ಕಾರಣ ದಿವಾಕರ್ ಅವರ ಮಿತಿ ಮೀರಿದ ವರ್ತನೆ ಹಾಗೂ ಲಗಾಮು ಇಲ್ಲದ ಮಾತುಗಳು ಎನ್ನಲಾಗುತ್ತಿದೆ.

ಪ್ರತಿವಾರದಂತೆ ಸುದೀಪ್ ಅವರು ಮನೆಯ ಸದಸ್ಯರ ಕುಶಲೋಪರಿಯನ್ನು ವಿಚಾರಿಸುತ್ತಿದ್ದರು, ಆಗ ದಿವಾಕರ್ ಅವರು ಸ್ಪರ್ಧಿ ಜಯ ಶ್ರೀನಿವಾಸ್‌ ಅವರ ವೃತ್ತಿಯ ಬಗ್ಗೆ ಅಗೌರವದಿಂದ ಮಾತನಾಡಿದರು, ಜನರಿಂದ ಹಣ ಪಡೆದು ಮೋಸ ಮಾಡುವ ೪೨೦ ಇವರು ಎಂದರು. ನನಗೆ ಬಿಗ್‌ಬಾಸ್‌ ಗೆಲ್ಲುವ ಬಗ್ಗೆ ಆಸೆಯಿಲ್ಲ, ಬೇಕಾದರೆ ಇಂದೇ ಹೊರಗೆ ಹೋಗುತ್ತೇನೆ, ನಾನು ಇವರಂತೆ ನಾಟಕ ಮಾಡೊಲ್ಲ, ಜನ ನನಗೆ ವೋಟ್‌ ಅಥವಾ ಮತ ಹಾಕದಿದ್ದರೂ ಪರವಾಗಿಲ್ಲ ಎನ್ನುವ ಮೂಲಕ, ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಮತ ಚಲಾಯಿಸುವ ಜನರ ಬಗ್ಗೆಯೂ ತುಂಬ ಬೇಜವಾಬ್ದಾರಿಯಾಗಿ ಮಾತನಾಡಿದರು.

ಇದನ್ನು ಗಮನಿಸಿದ ಸುದೀಪ್, ಬಿಗ್‌ಬಾಸ್‌ ಮನೆಗೆ ನಾವೇನು ನಿಮಗೆ ಆಹ್ವಾನ ನೀಡಿಲ್ಲ, ನೀವಾಗಿಯೇ ಇಲ್ಲಿ ಬಂದಿದ್ದು. ನಿಮಗೆ ವೋಟ್ ಮಾಡಿದ ಜನರ ಬಗ್ಗೆ ಹೀಗೆ ಕೇವಲವಾಗಿ ಮಾತನಾಡೋದು ಸರಿಯಲ್ಲ. ಮನೆಯ ಸದಸ್ಯರು ನಿಮ್ಮ ಬಗ್ಗೆ ಆಗಲಿ, ನಿಮ್ಮ ವೃತ್ತಿಯ ಬಗ್ಗೆ ಆಗಲಿ ಮಾತನಾಡಿಲ್ಲ. ಆದರೆ, ನೀವು ಅವರ ವೃತ್ತಿಯ ಬಗ್ಗೆ ಹೀಗೆ ಮಾತನಾಡಿದ್ದು ಸರಿಯಲ್ಲ. ನೀವೊಬ್ಬರೇ ಕಷ್ಟಪಟ್ಟಿಲ್ಲ, ಎಲ್ಲರೂ ನಿಮ್ಮಷ್ಟೇ ಕಷ್ಟಪಟ್ಟು ಮೇಲೆ ಬಂದಿದ್ದಾರೆ, ನಾನು ಕೂಡ ಕಷ್ಟಪಟ್ಟೇ ಮೇಲೆ ಬಂದವನು ಎಂದರು.

ನೀವೇನಿದ್ದಿರೋ ನಮಗೆ ಬೇಕಾಗಿಲ್ಲ, ಆದರೆ ಮನೆಯ ಸದಸ್ಯರಿಗಾಗಲಿ, ವೋಟ್ ಮಾಡುವ ಜನರಿಗಾಗಲಿ, ಅಹಂಕಾರದಿಂದ ಕೇವಲವಾಗಿ ಮಾತನಾಡಬೇಡಿ ಎಂದು ತಮ್ಮ ಮಾತುಗಳಿಂದಲೇ ದಿವಾಕರ್-ಗೆ ಪಾಠ ಕಲಿಸಿದರು.