ಪ್ರಪಂಚದ ಅತಿ ಹೆಚ್ಚು ಶ್ರೀಮಂತನಾಗಿರುವ ಬಿಲ್ ಗೇಟ್ಸ್ ಅವರಿಂದ ಈ 7 ಯಶಸ್ಸಿನ ರಹಸ್ಯಗಳ ಬಗ್ಗೆ ತಿಳಿಯಿರಿ..

0
1396

ಬಿಲ್ ಗೇಟ್ಸ್ ಬಗ್ಗೆ ಯಾರಿಗೆ ಗೊತ್ತಿಲ್ಲ, ಮೈಕ್ರೋಸಾಫ್ಟ್ ಸಂಸ್ಥಾಪಕ, ಅತಿ ಹೆಚ್ಚು ಶ್ರೀಮಂತ ವ್ಯಕ್ತಿ, ಕಂಪ್ಯೂಟರ್ ಮೇಧಾವಿ ಹೀಗೆ ಹಲವಾರು ವಿಚಾರಗಳಿಂದ ವಿಶ್ವ ವಿಖ್ಯಾತರಾಗಿದ್ದರೆ. ಒಂದು ಮಾಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ಕಾಲೇಜನ್ನು ಅರ್ಧದಲ್ಲೇ ನಿಲ್ಲಿಸಿ ವಿಶ್ವದ ಅತಿ ದೊಡ್ಡ ಕಂಪೆನಿಗಳಲ್ಲಿ ಒಂದನ್ನು ನಿರ್ಮಿಸುವುದು ಸಾಮಾನ್ಯ ಮಾತಲ್ಲ. ಇವರಂತೆಯೇ ಶ್ರೀಮಂತರಾಗಬೇಕು ಎಂಬ ಹಂಬಲ ಯಾರಿಗಿರೋಲ್ಲ ಅದರಲ್ಲೂ ಮಹತ್ವಾಕಾಂಶೆ ಇರುವ ಯುವಕ-ಯುವತಿಯರಿಗಂತೂ ಇವರಂತೆ ಶ್ರೀಮಂತರಾಗಬೇಕು ಎಂಬ ಆಸೆ ಇನ್ನು ಹೆಚ್ಚು. ಆದರೆ ಅವರಂತೆಯೇ ದುಡಿಯುವ ಬಗೆ ಮಾತ್ರ ಹಾಗು ಅವರು ಹೇಗೆ ಯಶಸ್ಸುಗಳಿಸಿದರು ಅಂತ ತುಂಬಾ ಜನರಿಗೆ ಗೊತ್ತೇ ಇರೋಲ್ಲ.

ಈಗ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್-ನಲ್ಲಿ ಹೆಚ್ಚು ಕಾರ್ಯನಿರತರಾಗಿಲ್ಲ, ಮೆಲಿಂಡಾ-ಗೇಟ್ಸ್ ಎಂಬ ಸಂಸ್ಥೆಯ ಮೂಲಕ ಅವರ ಹೆಚ್ಚು ಸಮಯ ಹಾಗು ಹಣವನ್ನು ಲೋಕೋಪಕಾರಕ್ಕಾಗಿ ಬಳಸುತ್ತಿದ್ದಾರೆ. ಇತ್ತೀಚಿಗೆ ಅವರ ಒಂದು ಸಂದರ್ಶನದಲ್ಲಿ ಅವರ ಜೀವನದ ಹಾದಿಯ ಬಗ್ಗೆ ನೆನೆಯುತ್ತ, ಅವರ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟರು..

1. ನಿಮ್ಮಲ್ಲಿ ಒಳ್ಳೆ ಐಡಿಯಾ ಇದ್ದರೆ, ತಾಳ್ಮೆ ಇರಲಿ.
ಒಳ್ಳೆ ಐಡಿಯಾ ತುಂಬಾ ಜನರಿಗೆ ಇರುತ್ತದೆ, ಆದರೆ ತಾಳ್ಮೆ ಇರೋದಿಲ್ಲ. ಕೇವಲ ಕೆಲವು ತಿಂಗಳುಗಳ ಕಾಲದಲ್ಲಿಯೇ ತಮಗೆ ಯಶಸ್ಸು ಸಿಗಬೇಕು ಅಂದರೆ ಅದು ಸತ್ಯಕ್ಕೆ ದೂರವಾದ ಮಾತು. ಮೈಕ್ರೋಸಾಫ್ಟ್-ನ ಅತಿ ಹೆಚ್ಚು ಜನಪ್ರಿಯ ವಿಂಡೋಸ್-ಗೆ ಆರಂಭದಲ್ಲಿ ಸ್ವಲ್ಪಾನು ಯಶಸ್ಸು ಸಿಗಲೇ ಇಲ್ಲ. ಅವರ ತಂತ್ರಜ್ಞಾನ ಮತ್ತು ಐಡಿಯಾ ಮೇಲಿದ್ದ ದೃಢ ನಂಬಿಕೆಯಿಂದ ನಾಲ್ಕು ವರ್ಷ ಸತತವಾಗಿ ದುಡಿದರು, ಈಗ ವಿಂಡೋಸ್ ಕೋಟ್ಯಂತರ ಕಂಪ್ಯೂಟರ್-ಗಳಲ್ಲಿ ಇದೆ.

2. ಕಷ್ಟ ಪಡಿ, ಯಾವ ಕಾರಣಾನು ನಿಮ್ಮನ್ನು ತಡೆಯಬಾರದು.
ಶ್ರಮವಿಲ್ಲದೆ ಈ ಪ್ರಪಂಚದಲ್ಲಿ ಏನು ಸಿಗೋಲ್ಲ, ದೊಡ್ಡ ಮಟ್ಟದ ಯಶಸ್ಸು ಕಾಣಬೇಕೆಂದರೆ ದೊಡ್ಡ ಮಟ್ಟದಲ್ಲಿ ಪರಿಶ್ರಮವಿರಲೇಬೇಕು. ಬಿಲ್ ಗೇಟ್ಸ್ ವೀಕೆಂಡ್-ಗಳಲ್ಲಿ ಹಾಗು ಹಲವಾರು ಬಾರಿ ರಾತ್ರಿ ಇಡೀ ಕೆಲಸ ಮಾಡಿದ್ದಾರೆ, ವರ್ಷವಿಡೀ ಕೆಲಸ ಮಾಡಿ ವರ್ಷದಲ್ಲಿ ೨ ವಾರ ಮಾತ್ರ ರಜೆ ತೆಗೆದುಕೊಳ್ಳುತ್ತಾರೆ. ಈ ಎರಡು ವಾರಗಳಲ್ಲಿ, ನಿಮ್ಮ ಹಿಂದಿನ ವರ್ಷದ ಪರಿಶ್ರಮದ ಬಗ್ಗೆ ಯೋಚಿಸಿ ಮುಂದಿನ ವರ್ಷ ಇನ್ನು ಏನು ಮಾಡಬೇಕು ಅಂತ ಯೋಜನೆ ರೂಪಿಸುತ್ತಾರೆ.

3. ನಿಮ್ಮ ಪ್ರತಿ ಸ್ಪರ್ಧಿಗಳಿಗೆ ಗೌರವ ಕೊಡಿ ಅವರಿಂದ ಕಲಿಯಿರಿ.
ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಇಲ್ಲದೆ ಇರುವುದು ಸಾಧ್ಯವೇ ಇಲ್ಲ. ಮೊದಲು ನಿಮ್ಮ ಸ್ಪರ್ಧಿಗಳಿಗೆ ಗೌರವ ಕೊಟ್ಟು, ಹಾಗು ಅವರಿಂದ ಸಾಕಷ್ಟು ಪಾಠಗಳನ್ನು ಕಲಿಯಬಹುದು. ಸ್ಪರ್ಧಿಗಳನ್ನು ನಿರ್ಲಕ್ಷಿಸಿದರೆ, ಶೀಘ್ರವೇ ನೀವು ಸ್ಪರ್ಧೆಯಿಂದಾನೆ ಹೊರಹೋಗಬೇಕಾಗುತ್ತದೆ. ಬಿಲ್ ಗೇಟ್ಸ್ ಹಾಗು ಆಪಲ್-ನ ಸ್ಟೀವ್ ಜಾಬ್ಸ್ ನಡುವೆ ಸಾಕಷ್ಟು ಸ್ಪರ್ಧೆ ಇತ್ತು, ಆದರೂ ಒಬ್ಬರನ್ನೊಬ್ಬರು
ಗೌರವಿಸುತ್ತಿದ್ದರು. ಸ್ಟೀವ್ ಜಾಬ್ಸ್-ರಿಂದ ಮಾರ್ಕೆಟಿಂಗ್ ಹಾಗು ಒಂದು ಉತ್ತಮ ಉತ್ಪನ್ನವನ್ನು ಹೇಗೆ ಮಾರುಕಟ್ಟೆಗೆ ತರಬೇಕು ಅನ್ನೋದನ್ನು ಕಲಿತಿದ್ದಾರೆ ಬಿಲ್ ಗೇಟ್ಸ್.

4. ಕೆಲುವೊಮ್ಮೆ ಬದಲಾವಣೆ ಅನಿವಾರ್ಯ.
ಎಷ್ಟೇ ಪ್ರಯತ್ನ ಪಟ್ಟರು ಫಲ ಸಿಗುತ್ತಿಲ್ಲವೆಂದರೆ, ಸ್ವಲ್ಪ ಬದಲಾವಣೆ ಮಾಡಿಕೊಂಡು ಹೋಗಬೇಕು. ಬದಲಾವಣೆಗೆ ಅಂಜಿ ಕುಳಿತರೆ ಸೋಲು ಕಟ್ಟಿಟ್ಟ ಬುತ್ತಿ. ಜಾಗತಿಕ ಹಾಗು ಆಂತರಿಕ ಮಾರುಕಟ್ಟೆ ಸದಾ ಬದಲಾಗುತ್ತನೇ ಇರುತ್ತದೆ ನಾವು ಅದರೊಂದಿಗೆ ಬದಲಾಗದಿದ್ದರೆ, ಏಳಿಗೆ ಹೊಂದುವುದು ಅಸಾಧ್ಯ. ಬಿಲ್ ಗೇಟ್ಸ್-ರವರಿಗೂ ಇಂಟರ್ನೆಟ್ ಬಂಡ ಹೊಸತರಲ್ಲಿ ಏನು ಮಾಡುವುದು ಎಂದು ತೋಚಿರಲಿಲ್ಲ, ಕೊನೆಗೆ ಇಂಟರ್ನೆಟ್ explorer ಬಿಡುಗಡೆ ಮಾಡಲೇ ಬೇಕಾಯಿತು. ಇದು ಅವರ ವಿಂಡೋಸ್-ಅನ್ನು ಇನ್ನು ಹೆಚ್ಚು ಯಶಸ್ವಿಯಾಗುವಂತೆ ಮಾಡಿದ್ದು ಇತಿಹಾಸ.

5. ನಿಮ್ಮ ಕನಸುಗಳ ಮೇಲೆ ನಂಬಿಕೆ ಇರಲಿ.
ಹಲವಾರು ಜನ ನಿಮ್ಮನ್ನು ನೋಡಿ ನಗಬಹುದು. ತುಂಬಾ ಜನರಿಗೆ ನಿಮ್ಮ ಮೇಲೆ ನಂಬಿಕೆ ಇಲ್ಲದಿರಬಹುದು. ಏನೇ ಆದರೂ ನಿಮ್ಮ ಮೇಲೆ ಹಾಗು ನಿಮ್ಮ ಕನಸಿನ ಮೇಲೆ ಸದಾ ನಂಬಿಕೆ ಇರಲಿ. ಬಿಲ್ ಗೇಟ್ಸ್-ರವರು ಕಾಲೇಜ್-ಅನ್ನು ಅರ್ಧದಲ್ಲೇ ಬಿಟ್ಟಾಗ ಹಾಗು ಅವರ ಮೊದಲ ಪ್ರಾಡಕ್ಟ್ ಮಾಡಿದಾಗ ಯಾರು ಅವರನ್ನ ನಂಬಿರಲಿಲ್ಲ, ಆದರೆ ಅವರ ಕನಸ್ಸು ಹಾಗು ಅವರ ಮೇಲೆ ಅಪಾರವಾದ ನಂಬಿಕೆ ಇತ್ತು. ಈ ನಂಬಿಕೆ ಜೀವನದಲ್ಲಿ ಯಶಸ್ಸು ಕಾಣಲು ಬಹಳ ಮುಖ್ಯವಾದ ಅಂಶ.

6. ನೀವು ಏನೇ ಮಾಡಿದರು, ಅದರಲ್ಲಿ ಖುಷಿ ಪಡಿ.
ನಿಮಗೆ ಇಷ್ಟವಾಗದ ಕೆಲಸದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ನಿಮ್ಮ ಮನಸ್ಸು ಆ ಕೆಲಸದ ಮೇಲೆ ಇಲ್ಲದಿದ್ದರೆ, ನಿಮ್ಮ ಪ್ರಯತ್ನಗಳೆಲ್ಲ ವ್ಯರ್ಥವಾಗುವುದು ಶತಸಿದ್ಧ. ನೀವು ಪ್ರೀತಿ ಮಾಡುವ ಕೆಲಸವನ್ನು ಹುಡುಕಿಕೊಳ್ಳಿ, ಅದರಲ್ಲೇ ಪರಿಣಿತಿ ಹೊಂದಿ ಅದನ್ನೇ ಪ್ರತಿನಿತ್ಯವೂ ಮಾಡುತ್ತಿದ್ದರೆ, ನಿಮಗೆ ಖಂಡಿತ ಸಿಕ್ಕೇ ಸಿಗುತ್ತದೆ. ಬಿಲ್ ಗೇಟ್ಸ್-ರವರು ಕಂಪ್ಯೂಟರ್-ನಲ್ಲಿ ಪಳಗಿದ್ದರು, ಇವರಿಗಿಂತ ಚೆನ್ನಾಗಿ ಪ್ರೋಗ್ರಾಮಿಂಗ್ ಮಾಡಲು ಅನೇಕರಿದ್ದರು, ಆದರೆ ಇವರಿಗಿದ್ದ ಕನಸ್ಸು ಹಾಗು ಮಾಡಲು ಇದ್ದ ಇಚ್ಛೆ ಇವರಿಗೆ ಯಶಸ್ಸನ್ನು ತಂದು ಕೊಟ್ಟಿತು.

7. ನಿಮ್ಮ ಸುತ್ತಲಿರುವ ಜನರು ನಿಮ್ಮಂತೆಯೇ ಇರಲಿ.
ನಿಮ್ಮ ಜೊತೆಗಿರುವ ಜನರು ಸಕಾರಾತ್ಮಕರಾಗಿರಬೇಕು ಹಾಗು ನಿಮ್ಮನ್ನು ಹುರಿದುಂಬಿಸಬೇಕು ಮತ್ತು ನಿಮ್ಮ ಯಶಸ್ಸಿನ್ನಲ್ಲಿ ಪಾಲುದಾರರಾಗಬೇಕು. ಸದಾ ನಕಾರಾತ್ಮಕವಾಗಿ ಯೋಚಿಸುವವರಿಂದ ದೂರವಿರಿ, ಇಂಥವರು ಜೀವನದಲ್ಲಿ ಅವರು ಯಶಸ್ಸು ಕಾಣುವುದಿಲ್ಲ ಹಾಗು ಇನ್ನೊಬ್ಬರಿಗೆ ಕಾಣಲು ಅವರು ಬಿಡುವುದಿಲ್ಲ. ಬಿಲ್ ಗೇಟ್ಸ್-ರವರು ಅವರ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುವವರು ಕೌಶಲ್ಯಕ್ಕಿಂತ ಸಕಾರಾತ್ಮಕವಾಗಿ ಯೋಚನೆ ಮಾಡುವವರನ್ನೇ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದರು.