ಅಧರಕ್ಕೆ ಕಹಿ ಎನಿಸಿದರೂ ಉದರಕ್ಕೆ ಸಿಹಿಯಾದ ಹಾಗಲಕಾಯಿ ಪಲ್ಯೆ ಮಾಡುವ ವಿಧಾನ..!!

0
1776

ಅತ್ಯಂತ ವೇಗವಾಗಿ ಬೆಳೆಯುವ ತರಕಾರಿ ಬೆಳೆಗಳಲ್ಲಿ ಹಾಗಲಕಾಯಿ ಪ್ರಮುಖವಾದದ್ದು. ಇದರಲ್ಲಿ ವಿಟಮಿನ್ ಎ ಯಥೇಚ್ಛ. ಹಲವು ಔಷಧಿಯ ಗುಣಗಳೂ ಇದರಲ್ಲಿವೆ. ಇದರ ಸೇವನೆಯಿಂದ ಮುಖ್ಯವಾಗಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಅದರಲ್ಲಿ ಹಾಗಲಕಾಯಿಯ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು. ಕರುಳಿನ ಹುಣ್ಣು, ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಯಾಗುವುದು. ಹಾಗಲಕಾಯಿಯೆಂದರೆ ಅದು ಕಹಿ ಎಂದು ಮೂಗು ಮುರಿಯುವವರೆ ಹೆಚ್ಚು. ಆದರೆ ಹಾಗಕಾಯಿಯಿಂದಲೂ, ಅದೂ ಕಹಿ ಮಾಡದೆ ಸುಲಭವಾಗಿ ರುಚಿಯಾಗಿ ಅಡುಗೆ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

 • ಹಾಗಲಕಾಯಿ
 • ಹುಣಸೆಹಣ್ಣಿನ ರಸ
 • ಸಾಸಿವೆ ಸ್ವಲ್ಪ
 • ಇಂಗು ಸ್ವಲ್ಪ
 • ಬೆಲ್ಲ ಸ್ವಲ್ಪ
 • ಉದ್ದಿನಬೇಳೆ
 • ಕಡಲೆಬೇಳೆ
 • ಕೊತ್ತೊಂಬರಿ ಬೀಜ
 • ಜೀರಿಗೆ
 • ಕರಿಬೇವು
 • ಕೆಂಪು ಮೆಣಸಿನಕಾಯಿ
 • ಉಪ್ಪು ರುಚಿಗೆ ತಕ್ಕಷ್ಟು
 • ಎಣ್ಣೆ

ಮಾಡುವ ವಿಧಾನ

 • ಮೊದಲು ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ ಸಾಸಿವೆ, ಇಂಗು, ಹೆಚ್ಚಿದಹಾಗಲಕಾಯಿ, ಉಪ್ಪು, ಬೆಲ್ಲ ಹಾಗು ಹುಣಸೆ ರಸ ಸೇರಿಸಿ ಬೇಯಲು ಬಿಡಿ.
 • ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿಮಾಡಿ ಅದಕ್ಕೆ ಉದ್ದಿನಬೇಳೆ ೧ ಚಮಚ, ಕಡಲೆಬೇಳೆ ೧ ಚಮಚ, ಕೊತ್ತೊಂಬರಿ ಬೀಜ ೧ ಚಮಚ, ಸ್ವಲ್ಪ ಜೀರಿಗೆ, ಕರಿಬೇವು ಮತ್ತು ಕೆಂಪು ಮೆಣಸಿನಕಾಯಿ ಹಾಕಿ ಕೆಂಪಗೆ ಹುರಿದು, ತರಿ ತರಿಯಾಗಿ ಪುಡಿ ಮಾಡಿ.
 • ನಂತರ ಹಾಗಲಕಾಯಿ ಬೆಂದು ನೀರಿನಂಶ ಆರಿದಮೇಲೆ ಅದಕ್ಕೆ ಪುಡಿಮಾಡಿಟ್ಟ ಮಸಾಲೆ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಹೊಂದಿಸಿ.

ಮುಂಜಾಗ್ರತೆಗಳು

 • ಹಾಗಲಕಾಯಿಯ ಬೀಜವನ್ನು ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ.
 • ಹಾಗಲಕಾಯಿ ಹಣ್ಣನ್ನು ಪಲ್ಯೆ ಮಾಡಲು ಬಳಸಬೇಡಿ.
 • ಹಾಗಲಕಾಯಿ ಬಳಸಿ ಅಡುಗೆ ಮಾಡುವ ಮುನ್ನ ಅದಕ್ಕೆ ಅರಿಶಿಣ, ಉಪ್ಪು ಸವರಿ ಸ್ವಲ್ಪ ಸಮಯದ ನಂತರ ಬಳಸುವುದರಿಂದ ಅದರ ಕಹಿ ರುಚಿಯನ್ನು ಕಡಿಮೆ ಮಾಡಬಹುದು. ಅಥವಾ ಹಾಗಲಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಬೆಲ್ಲದೊಂದಿಗೆ ಮಿಶ್ರಮಾಡಿ ಎಣ್ಣೆಯಲ್ಲಿ ಹುರಿದು ಅಡುಗೆಗೆ ಬಳಸಬಹುದು.