ಬಿಜೆಪಿ ಹೈಕಮಾಂಡ್‌ಗೆ ಕಪ್ಪ , ವಿ.ಎಸ್‌. ಉಗ್ರಪ್ಪ ಇಂದ ಸಿ.ಡಿ ಪುರಾವೆ

0
781

ಬೆಂಗಳೂರಿನಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕಾರಿಣಿ ವೇಳೆ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್‌ ನಡುವೆ ನಡೆದ ಮಾತುಕತೆ ವಿವರಗಳನ್ನು ಒಳಗೊಂಡ ಸಿ.ಡಿಯನ್ನು ಸಚಿವರು ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಸಿ.ಡಿಯಲ್ಲಿನ ಸಂಭಾಷಣೆಯನ್ನು ವಿವರಿಸಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮತ್ತು ವಿಧಾನಪರಿಷತ್ತಿನ ಸದಸ್ಯ ವಿ.ಎಸ್‌. ಉಗ್ರಪ್ಪ, ‘ಬಿಜೆಪಿ ಹೈಕಮಾಂಡ್‌ಗೆ ಕಪ್ಪ ನೀಡಿರುವುದನ್ನು ಇಬ್ಬರ ಮಾತುಕತೆಯು ದೃಢಪಡಿಸಿದೆ. ₹65 ಕೋಟಿ ಪಡೆದಿದ್ದಾರೆ ಎಂಬ ಆಪಾದನೆ ರಾಜಕೀಯ ಪ್ರೇರಿತ ಎಂಬುದಕ್ಕೆ ಈ ಸಿ.ಡಿ ಪುರಾವೆ ಒದಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ವಿಚಾರಣೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ವಿರುದ್ಧ ಮಾಡಲಾಗಿರುವ ಆರೋಪ ಕುರಿತು ಪ್ರಸ್ತಾಪಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಆದಾಯ ತೆರಿಗೆ(ಐ.ಟಿ) ಕಾಯ್ದೆ ಸೆಕ್ಷನ್‌ 138ರ ಪ್ರಕಾರ ಯಾರ ಮನೆ ಮೇಲೆ ದಾಳಿ ನಡೆಯುವುದೋ ಅವರಿಗೆ ಮತ್ತು ಅಧಿಕಾರಿಗಳನ್ನು ಬಿಟ್ಟು ಮೂರನೆ ವ್ಯಕ್ತಿಗೆ ಮಾಹಿತಿ ನೀಡುವುದು ಕಾನೂನು ಬಾಹಿರ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೂಡ ಮಾಹಿತಿ ನೀಡಲು ಬರುವುದಿಲ್ಲ. ಯಡಿಯೂರಪ್ಪ ಅವರು ಎಲ್ಲಿಂದ ಈ ಮಾಹಿತಿ ಪಡೆದರು ಎಂದು ಪ್ರಶ್ನಿಸಿದರು.

ಆರೋಗ್ಯ ಸಚಿವ ಕೆ.ಆರ್‌. ರಮೇಶಕುಮಾರ್‌, ‘ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಯಡಿಯೂರಪ್ಪ ಐ.ಟಿ. ಇಲಾಖೆಗೆ ಸೇರಿಕೊಂಡಿದ್ದು ಯಾವಾಗ ಎಂದು ಗೊತ್ತಾಗುತ್ತಿಲ್ಲ. ಹಾಗೊಂದು ವೇಳೆ ಅವರು ಸೇರಿಲ್ಲ ಎಂದಾದರೆ ಐ.ಟಿ ಇಲಾಖೆ ಬಿಜೆಪಿಯ ವಿಭಾಗ ಎಂದು ಭಾವಿಸಬೇಕಾಗುತ್ತದೆ’ ಎಂದು ವ್ಯಂಗ್ಯವಾಡಿದರು.