ವಿರಾಟ್ ಮತ್ತು ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದಕ್ಕೆ ದೇಶ ಪ್ರೇಮವಿಲ್ಲ ಎಂದ ರಾಜಕಾರಣಿ!! ದೇಶಪ್ರೇಮಕ್ಕೂ ಮದುವೆಗೂ ಎಂದು ಸಂಬಂಧ??

0
383

ವಿರಾಟ್ ಕೊಹ್ಲಿ ಹಾಗು ಅನುಷ್ಕಾ ಶರ್ಮ ಜೋಡಿ ಯಾರಿಗೂ ತಿಳಿಯದ ಹಾಗೆ ಗುಟ್ಟಾಗಿ ಇಟಲಿಯಲ್ಲಿ, ಕೇವಲ ಕೆಲ ಸಂಬಂಧಿಕರ ನಡುವೆ ಮಾತ್ರ ಮದುವೆಯಾಗಿ ನಂತರ ಮದುವೆ ಫೋಟೋ-ಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಾಕಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಆದ್ರೆ ವಿಷಯ ಅದಲ್ಲ. ಭಾರತದಲ್ಲಿ ವಿವಾಹವಾಗದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದೇಶಪ್ರೇಮವಿಲ್ಲದವರು ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಭಾರತೀಯ ಕ್ರಿಕೆಟ್ ಮತ್ತು ಚಿತ್ರರಂಗದಲ್ಲಿ ಸಾಕಷ್ಟು ಹಣ ಮತ್ತು ಹೆಸರು ಮಾಡಿದ್ದಾರೆ ಆದರೆ ಅವರು ಖ್ಯಾತಿಯನ್ನು ಗಳಿಸಿದ್ದು ಇಲ್ಲಿಂದಲೇ ಎಂದು ಮರೆತ ಹಾಗೆ ಕಾಣುತ್ತದೆ. ಭಾರತದಲ್ಲಿ ಮದುವೆಯಾಗಲು ಇವರಿಗೆ ಸ್ಥಳಗಳೇ ಸಿಗಲಿಲ್ಲವೇ, ವಿದೇಶಿಗರು ಭಾರತೀಯ ಸಂಸ್ಕೃತಿಯನ್ನು ಮೆಚ್ಚಿ ಇಲ್ಲಿಗೆ ಬಂದು ಮದುವೆಯಾಗುತ್ತಾರೆ ಆದರೆ ಇವರೇಕೆ ಈ ರೀತಿ ಇಟಲಿಯಲ್ಲಿ ಮದುವೆಯಾಗಿದ್ದಾರೆ, ಬಹುಷಃ ಇವರಿಗೆ ದೇಶಪ್ರೇಮವಿಲ್ಲದಂತೆ ಕಾಣುತ್ತದೆ ಎಂದುಶಾಸಕ ಪನ್ನಾಲಾಲ್ ಶಕ್ಯಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ “ಯುವ ಐಕಾನ್” ಎನ್ನುವಷ್ಟು ಯೋಗ್ಯರಲ್ಲ, ಯಾಕೆಂದರೆ ಅವರು ಭಾರತ ಬಿಟ್ಟು ಇಟಲಿಯಲ್ಲಿ ಮದುವೆಯಾಗಿದ್ದಾರೆ ಶಾಸಕ ಪನ್ನಾಲಾಲ್ ಶಕ್ಯಾ ಹೇಳಿದ್ದಾರೆ. ಮಧ್ಯಪ್ರದೇಶದ, ಭೋಪಾಲ್‍-ನಿಂದ 214 ಕಿಮೀ ದೂರದಲ್ಲಿರುವ ಗುನಾದ ಒಂದು ಸರ್ಕಾರಿ ಯೋಜನೆಗೆ ಚಾಲನೆ ನೀಡಲು ಬಂದಿದ್ದ ಅವರು ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದನ್ನು ತೀವ್ರವಾಗಿ ಖಂಡಿಸಿರುವ ಪ್ರತಿಪಕ್ಷಗಳು ಒಬ್ಬರ ವೈಯಕ್ತಿಕ ವಿಷಯದಲ್ಲಿ ತಲೆಹಾಕುವುದು ತುಂಬ ದೊಡ್ಡ ತಪ್ಪು, ಅದಲ್ಲದೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ತಮ್ಮ ಆಟ ಮತ್ತು ಕಲೆಯ ಮೂಲಕ ದೇಶ-ವಿದೇಶಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಹಾಗು ಸಾಕಷ್ಟು ಖ್ಯಾತಿ ಹೊಂದಿದ್ದಾರೆ, ಅವರ ವೈಯಕ್ತಿಕ ಜೀವನದ ನಿರ್ಧಾರಗಳಲ್ಲಿ ಶಾಸಕರು ತಲೆದೂರಿಸಿ ತುಂಬ ದೊಡ್ಡ ತಪ್ಪನ್ನು ಮಾಡಿದ್ದಾರೆ, ಈ ಕುರಿತು ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.