ಜೆಡಿಎಸ್ ಶಾಸಕರಿಗೆ 100 ಕೋಟಿ ಆಫರ್ ನೀಡಿದ್ಯ ಬಿಜೆಪಿ ??

0
431

ಜೆಡಿಎಸ್ ಶಾಸಕರಿಗೆ ನೂರು ಕೋಟಿ ರೂಪಾಯಿ ಹಾಗೂ ಕ್ಯಾಬಿನೆಟ್ ದರ್ಜೆ ಸ್ಥಾನ ಕೊಡುವ ಆಫರ್ ಅನ್ನು ಬಿಜೆಪಿ ಕೊಟ್ಟಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನಾಗಿ ಆಯ್ಕೆಯಾದ ಬಳಿಕ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಹೆಚ್.ಡಿ.ಕೆ, ಆಪರೇಷನ್ ಕಮಲ ನಡೆಸಲು ಬಿಜೆಪಿಯವರಿಗೆ ಹಣ ಎಲ್ಲಿಂದ ಬರುತ್ತದೆ? ಬಿಜೆಪಿಯವರು ಕುದುರೆ ವ್ಯಾಪಾರಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಗಂಭೀರವಾಗಿ ದೂರಿದರು.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಅಧಿಕಾರವನ್ನು ದುರುಪಯೋಗಪ ಮಾಡುತ್ತಿರುವುದನ್ನು ಅವರ ಹೇಳಿಕೆಯೇ ತೋರಿಸಿಕೊಟ್ಟಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಕಪ್ಪುಹಣ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎನ್ನುವ ಪ್ರಧಾನಿ ಮೋದಿಯವರು ಈಗ ಕರ್ನಾಟಕದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಖರೀದಿಸಲು ಬಿಜೆಪಿ ಯಾವ ಹಣ ಬಳಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಬಿಜೆಪಿಗೆ ದೊರೆತಿರುವ 104 ಸ್ಥಾನಗಳು ಕೆಲ ವರ್ಗದ ಜನರ ತಪ್ಪು ನಿರ್ಧಾರದಿಂದ ಬಂದಿರುವುದು ಎಂದೂ ಕುಮಾರಸ್ವಾಮಿ ಪ್ರತಿಪಾದಿಸಿದರು. ಅಲ್ಲದೆ, ಜೆಡಿಎಸ್‌ಗೆ ಧಕ್ಕೆ ಉಂಟುಮಾಡಲು ಹೋಗಿ ಬಿಜೆಪಿಗೇ ಧಕ್ಕೆಯಾಗಿದೆ ಎಂದರು. ಗೋವಾದಲ್ಲಿ ಕಾಂಗ್ರೆಸ್‌ಗೆ ಅತಿ ಹೆಚ್ಚು ಸ್ಥಾನ ಪಡೆದಿದ್ದರೂ ಬಿಜೆಪಿ ಮೈತ್ರಿ ಸರ್ಕಾರ ರಚಿಸಿತು. ಕರ್ನಾಟಕದಲ್ಲಿ ಜೆಡಿಎಸ್, ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚಿಸಲು ಬಿಡುವುದಿಲ್ಲ ಎಂದು ಮೋದಿ ಹೇಳುತ್ತಿದ್ದಾರೆ. ಇದು ಅಧಿಕಾರದ ದುರುಪಯೋಗವಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆದಾಯ ತೆರಿಗೆ ಇಲಾಖೆ, ಸಿಬಿಐ, ಜಾರಿ ನಿರ್ದೇಶನಾಲಯ ಮತ್ತಿತರ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಆಪರೇಷನ್ ಕಮಲ ಮಾಡಲು ಮುಂದಾದರೆ ನಾವೂ ಬಿಜೆಪಿಯ ಶಾಸಕರನ್ನು ಸೆಳೆಯಲಿದ್ದೇವೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಕಾಂಗ್ರೆಸ್, ಬಿಜೆಪಿಯಿಂದ ನನಗೂ ಆಫರ್ ಬಂದಿದೆ. ಆದರೆ ನಮ್ಮದು ಅಧಿಕಾರಕ್ಕಾಗಿ ಹಾತೊರೆಯುವ ಕುಟುಂಬವಲ್ಲ. ಈ ಹಿಂದೆ ನಾನು ತಂದೆಗೆ ತಿಳಿಸದೆ ಬಿಜೆಪಿ ಜತೆ ಕೈಜೋಡಿಸಿದ್ದೆ. ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೆ. ಇದು ನನ್ನಿಂದಾದ ದೊಡ್ಡ ತಪ್ಪು. ಹೀಗಾಗಿ ಈಗ ನನ್ನ ತಂದೆಗೆ ಅಂಟಿದ್ದ ಕಪ್ಪು ಚುಕ್ಕೆಯನ್ನು ತೊಳೆಯುವ ಅವಕಾಶ ಒದಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಆಫರ್ ತಿರಸ್ಕರಿಸಿ, ಕಾಂಗ್ರೆಸ್ ಜತೆ ಮೈತ್ರಿಗೆ ಒಪ್ಪಿಗೆ ನೀಡಿರುವುದಾಗಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.