ಸಾರಿಗೆ ಸಂಸ್ಥೆಯ ನಿರ್ವಾಹಕರು ಹಾಗೂ ಚಾಲಕರು ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳುವಂತಿಲ್ಲ; ನಿಯಮ ಮೀರಿದರೆ ಪಕ್ಕಾ ಅಮಾನತ್ತು!!

0
298

ಇನ್ಮುಂದೆ ಸಾರಿಗೆ ಬಸ್ ಡ್ರೈವರ್ ಮತ್ತು ಕಂಡೆಕ್ಟರ್-ಗಳು ಕರ್ತವ್ಯದ ವೇಳೆ ಮೊಬೈಲ್ ಬಳಕೆ ಮಾಡುವುದನ್ನು ನಿಷೇಧಿಸಿದೆ. ಒಂದು ವೇಳೆ ಇವರಲ್ಲಿ ಮೊಬೈಲ್ ಕಂಡು ಬಂದರೆ ಅಮಾನತು ಮಾಡಲಾಗುತ್ತದೆ. ಹಾಗೆ ಮೊಬೈಲ್-ನ್ನು ಕೂಡ ವಶಪಡಿಸಿಕೊಳ್ಳಲಾಗುತ್ತದೆ. ಏಕೆಂದರೆ ಬಸ್ ಚಲಾಯಿಸುವಾಗ ಮೊಬೈಲ್ ಬಳಕೆಯಿಂದ ಅಫಘಾತ ಹೆಚ್ಚುತ್ತಿದ್ದು, ಹಾಗೆಯೇ ಸಂಸ್ಥೆಯ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಕಾರಣದಿಂದ ಈ ನಿರ್ಣಯಕ್ಕೆ ಚಿಂತನೆ ನಡೆಸಿದೆ.

ಬಸ್-ಗಳಲ್ಲಿ ಮೊಬೈಲ್ ಬ್ಯಾನ್?

ಹೌದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದ ನಿರ್ವಾಹಕರು ಹಾಗೂ ಚಾಲಕರ ಕರ್ತವ್ಯದ ವೇಳೆ ಫೋನ್ ಬಳಕೆಗೆ ಈಗ ಹೊಸ ನಿಯಮ ಜಾರಿಗೆ ತಂದಿದ್ದು. ಸೆ. 1ರಿಂದ ಮುಂಗಡ ಟಿಕೆಟ್ ಕಾಯ್ದಿರಿಸುವ ಬಸ್‌ಗಳ ನಿರ್ವಾಹಕರನ್ನು ಹೊರತುಪಡಿಸಿ ಇತರೆ ಚಾಲಕರು-ನಿರ್ವಾಹಕರು ಮೊಬೈಲ್ ಇಟ್ಟುಕೊಳ್ಳುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಮೊಬೈಲ್ ಜಪ್ತಿ ಜತೆಗೆ ಅಮಾನತು ಶಿಕ್ಷೆ ಖಚಿತವಾಗಿದೆ. ಕರ್ತವ್ಯದ ವೇಳೆ ಮೊಬೈಲ್ ಹೊಂದುವುದನ್ನು ನಿಷೇಧಿಸುವ ಕುರಿತು ಇಲಾಖೆ ಮುಖ್ಯಸ್ಥರ ಸಭೆಯಲ್ಲಿ ನಿರ್ಧರಿಸಲಾಗಿದೆ. ತನಿಖಾ ಸಿಬ್ಬಂದಿಯ ಚಲನವಲನಗಳನ್ನು ನಿರ್ವಾಹಕರು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರುವುದರಿಂದ ಸಂಸ್ಥೆಯ ಆದಾಯಕ್ಕೆ ಖೋತಾ ಬೀಳುತ್ತಿದೆ. ಹೀಗಾಗಿ ನಿಷೇಧ ಅನಿವಾರ್ಯ ಎಂದು ನಿರ್ಣಯಿಸಲಾಗಿದೆ.

ಈ ಹಿಂದೆ ಇದಕ್ಕೆ ಮೊಬೈಲ್ ಅಗತ್ಯ ಎನ್ನುವ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ 2012ರಲ್ಲಿ ಕರ್ತವ್ಯ ವೇಳೆ ಮೊಬೈಲ್ ಇಟ್ಟುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಳಸಲು ಅನುಮತಿ ನೀಡಲಾಗಿತ್ತು. ಈ ಆದೇಶವನ್ನು ಹಿಂಪಡೆದು ಕರ್ತವ್ಯ ವೇಳೆಯಲ್ಲಿ ಮೊಬೈಲ್ ಹೊಂದುವುದನ್ನು ಸಂಪೂರ್ಣ ನಿಷೇಧಿಸಿ ಈಗ ಆದೇಶ ಹೊರಡಿಸಲಾಗಿದೆ.

ತನಿಖಾ ಸಿಬ್ಬಂದಿಗಳಿಗೆ ಅಧಿಕಾರ

ತನಿಖಾ ಸಿಬ್ಬಂದಿ ನಗದು ಹಾಗೂ ಟಿಕೆಟ್ ಸೇರಿ ಮೊಬೈಲ್ ತಪಾಸಣೆ ಕೂಡ ಮಾಡಲಿದ್ದಾರೆ. ಪತ್ತೆಯಾದ ಮೊಬೈಲ್ ಮಾಹಿತಿಯನ್ನು ಆಪಾದನಾ ಪಟ್ಟಿಯಲ್ಲಿ ನಮೂದಿಸಿ ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ. ಮೊಬೈಲ್ ಹೊಂದಿದ ಪ್ರಕರಣ ದಾಖಲಾದ 30 ದಿನ ಅಥವಾ ವಿಚಾರಣೆ ಪೂರ್ಣಗೊಳ್ಳುವ ದಿನಗಳ ಪೈಕಿ ಯಾವುದು ಮೊದಲೋ ಅದನ್ನು ಪರಿಗಣಿಸಿ ಅಮಾನತು ಆದೇಶ ತೆರವುಗೊಳಿಸಲಾಗುತ್ತದೆ. ಈ ಅಧಿಕಾರವನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನೀಡಲಾಗಿದೆ. ಮುಟ್ಟುಗೋಲು ಹಾಕಿಕೊಂಡ ಮೊಬೈಲ್ ಸಾಧಾರಣಕ್ಕೆ ಸಿಬ್ಬಂದಿ ಕೈ ಸೇರಲ್ಲ. ಪ್ರಕರಣದ ವಿಚಾರಣೆಯ ಅಂತಿಮ ಹಂತದ ವೇಳೆ ಸ್ವಯಂ ಸಂರಕ್ಷಣಾ ಹೇಳಿಕೆ ಪಡೆದು ಮೊಬೈಲ್ ಪಡೆಯಬೇಕಾಗುತ್ತದೆ.

ಮೊಬೈಲ್ ನಿರ್ಬಂಧಕ್ಕೆ ಕಾರಣ?

ಚಾಲಕ-ನಿರ್ವಾಹಕರು ಸಂಸ್ಥೆ ನೀಡಿರುವ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಚಾಲನೆ ವೇಳೆ ಕೆಲ ಚಾಲಕರು ಮೊಬೈಲ್ ಬಳಸುತ್ತಿರುವುದು ಕಂಡು ಬಂದಿದೆ. ಇನ್ನು ನಿರ್ವಾಹಕರು ಮೊಬೈಲ್ ಬಳಸುತ್ತಿರುವುದರಿಂದ ಸಂಸ್ಥೆಯ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮತ್ತು ಕರ್ತವ್ಯ ವೇಳೆ ಮೊಬೈಲ್ ಬಳಸುವುದರಿಂದ ತನಿಖಾ ಸಿಬ್ಬಂದಿಯ ಚಲನವಲನಗಳ ಬಗ್ಗೆ ನಿರ್ವಾಹಕರು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ ಸಂಸ್ಥೆಯ ಆದಾಯದಲ್ಲಿನ ಸೋರಿಕೆಗೆ ಪ್ರಮುಖ ಕಾರಣವಾಗಿದ್ದು, ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವುದು ಕಷ್ಟಸಾಧ್ಯವಾಗಿರುವುದರಿಂದ ಕರ್ತವ್ಯ ವೇಳೆ ಮೊಬೈಲ್ ಇಟ್ಟುಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಸಂಸ್ಥೆ ಬಂದಿದೆ.