ಬಿಎಂಡಬ್ಲೂ ಕೊಟ್ಟು ಹೈಂಡುವಿ ಎಲಾಂಟ್ರಾ ಕಾರು ಖರೀದಿಸಿದ ದೀಪಾ ಕಾರ್ಮಾಕರ್‍..!

0
1143

ಅಗರ್ತಲಾದಲ್ಲಿ ಒಳ್ಳೆಯ ರಸ್ತೆಗಳಿಲ್ಲ. ಸರ್ವಿಸ್‍ ಸ್ಟೇಷನ್‍ ಇಲ್ಲ, ಜೊತೆಗೆ ಅದನ್ನು `ಸಾಕಲು’ ಆಗಲ್ಲ ಎಂಬ ಕಾರಣಕ್ಕೆ ಸಚಿನ್‍ ತೆಂಡುಲ್ಕರ್‍ ಮೂಲಕ ಉಡುಗೊರೆಯಾಗಿ ಪಡೆದಿದ್ದ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಕೊನೆಗೂ ಹಿಂತಿರುಗಿಸಿದ ಭಾರತದ ಜಿಮ್ನಾಸ್ಟ್‍ ತಾರೆ ದೀಪಾ ಕರ್ಮಾಕರ್‍, ಅದರ ಬದಲಿಗೆ ಹೈಂಡುವಿ ಎಲಾಂಟ್ರಾ ಕಾರನ್ನು ಪಡೆದಿದ್ದಾರೆ.

pv-sindhu-bmw-dipa-karmakar-sachin-tendulkar-sakshi-malik

ರಿಯೊ ಒಲಿಂಪಿಕ್ಸ್‍ನಲ್ಲಿ 4ನೇ ಸ್ಥಾನ ಪಡೆದಿದ್ದ ದೀಪಾ ಕರ್ಮಾಕರ್‍, ಈ ಸಾಧನೆ ಮಾಡಿದ ಮೊದಲ ಭಾರತದ ಅಥ್ಲೀಟ್‍ ಎಂಬ ಐತಿಹಾಸಿಕ ಸಾಧನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಬ್ಯಾಡ್ಮಿಂಟನ್‍ ಸಂಸ್ಥೆ ಅಧ್ಯಕ್ಷ ವಿ. ಚಾಮುಂಡೇಶ್ವರನಾಥ್‍ ಪದಕ ವಿಜೇತ ಅಥ್ಲಿಟ್‍ಗಳ ಜೊತೆ ದೀಪಾಗೂ ಬಿಎಂಡಬ್ಲೂ ಕಾರು ಉಡುಗೊರೆಯಾಗಿ ನೀಡಿದ್ದರು. ಬ್ಯಾಟಿಂಗ್‍ ದಂತಕತೆ ಸಚಿನ್‍ ತೆಂಡುಲ್ಕರ್‍ ಈ ಉಡುಗೊರೆಯನ್ನು ದೀಪಾ ಅವರಿಗೆ ಹಸ್ತಾಂತರಿಸಿದ್ದರು.

ಬಿಎಂಡಬ್ಲ್ಯೂ ಕಾರು ಪಡೆದು ತವರಿಗೆ ಮರಳಿದ ಕೆಲವೇ ದಿನಗಳಲ್ಲಿ ದೀಪಾ ಈ ಉಡುಗೊರೆಯನ್ನು ಮರಳಿಸಲು ನಿರ್ಧರಿಸಿದ್ದರು. ಕಾರಣ ಸಣ್ಣ ಪಟ್ಟಣವಾದ ಅಗರ್ತಲಾದಲ್ಲಿ ಉತ್ತಮ ರಸ್ತೆಗಳಿಲ್ಲ. ಸರ್ವಿಸ್‍ ಸ್ಟೇಷನ್ ಇಲ್ಲ ಎಂದಿದ್ದರು.

ದೀಪಾ ಅವರ ಸಮಸ್ಯೆ ಅರ್ಥಮಾಡಿಕೊಂಡ ಚಾಮುಂಡೇಶ್ವರನಾಥ್‍, ಬಿಎಂಡಬ್ಲೂ ಕಾರಿನ  ಬೆಲೆಯಷ್ಟೇ ಮೊತ್ತವನ್ನು ನೀಡುವುದಾಗಿ ಪ್ರಕಟಿಸಿದ್ದರು. ದೀಪಾ ಅವರ ಕೋಚ್‍ ಬಿಶ್ವೇಶ್ವರ್‍ ನಂದಿ, ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ನಮಗೆ ಇಷ್ಟೇ ಹಣ ಬೇಕು ಅಂತೇನಿಲ್ಲ. ಕಾರಿನ ಬದಲು ಎಷ್ಟೇ ಕೊಟ್ಟರೂ ಒಳ್ಳೆಯದು ಎಂದಿದ್ದರು.

ಇದೀಗ ಚಾಮುಂಡೇಶ್ವರ್‍ನಾಥ್‍ 2 ಲಕ್ಷ ರೂ. ನೀಡಿದ್ದು, ಈ ಮೊತ್ತದಲ್ಲಿ ದೀಪಾ ಹೈಂಡುವಿ ಎಲಾಂಟ್ರಾ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಸರ್ವಿಸ್‍ ಸ್ಟೇಷನ್‍ ಅಗರ್ತಲಾದಲ್ಲಿ ಇದೆ ಎಂಬುದೇ ನಮಗೆ ಸಮಧಾನದ ವಿಷಯ ಎಂದು ಕೋಚ್‍ ಪ್ರತಿಕ್ರಿಯಿಸಿದ್ದಾರೆ,