ನಂದಿ ಬೆಟ್ಟಕ್ಕೆ ಚಾರಣ ಹೋಗೋವ್ರು ಶಿಲ್ಪಕಲಾ ವೈಭವದ ಶ್ರೀ ಭೋಗನಂದೀಶ್ವರ ದೇವಾಲಯವನ್ನು ನೋಡಲು ಮರೆಯದಿರಿ…

0
750

ನಂದಿ ಬೆಟ್ಟದ ಬುಡದಲ್ಲಿರುವ ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವೃತವಾದ ರಮ್ಯ ಪರಿಸರದಲ್ಲಿರುವ ನಂದಿಗ್ರಾಮದ ಭೋಗನಂದೀಶ್ವರ ದೇಗುಲವು ವಿಶಾಲವಾದ ಆವರಣದಲ್ಲಿ ನೂರಾರು ಕಂಬಗಳಿಂದ ಆವೃತಗೊಂಡಿದ್ದು ತನ್ನ ಶಿಲ್ಪಕಲೆ, ಚೌಕಾಕಾರದಲ್ಲಿ ನಿರ್ಮಿತವಾದ ಕಲ್ಯಾಣಿಯಿಂದ ಕಲಾರಸಿಕರ ಮನ ರೆಗೊಳ್ಳುತ್ತದೆ.ಚೋಳ,ಚಾಲುಕ್ಯ,ಹೊಯ್ಸಳ,ಪಲ್ಲವ ಹಾಗು ವಿಜಯನಗರದ ಅರಸರನ್ನೊಳಗೊಂಡಂತೆ ಐದು ಮನೆತನದ ಆಳ್ವಿಕೆಯನ್ನು ಕಂಡಂತಹ ಸುಮಾರು ೧೨ ಶತಮಾನಗಳಷ್ಟು ಇತಿಹಾಸವನ್ನು ಹೊಂದಿದ ಕ್ಷೇತ್ರವಿದು. ಕ್ರಿ ಶ ೭ ಮತ್ತು ೮ ನೇ ಶತಮಾನದಲ್ಲಿ ರಾಷ್ಟ್ರಕೂಟರು, ಚಾಲುಕ್ಯರ ಸಾಮಂತರಾಗಿದ್ದ ಬಾಣ ವಂಶಿಗರು ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗಿದೆ.

 

ರಾಷ್ಟ್ರಕೂಟರ ಆಳ್ವಿಕೆಯ ಅವಧಿಯಲ್ಲಿ ಬಾಣ ರಾಜನ ಪಟ್ಟದರಾಸಿಯಾದ ರತ್ನಾವಳಿಯು ವೃಷಭ ದೇವನ ಆರಾಧಕಳಾಗಿದ್ದಾಳೆಂದು, ನಂದಿ ಗ್ರಾಮದ ಈ ಭೋಗನಂದೀಶ್ವರ ದೇವಾಲಯವನ್ನು ನಿರ್ಮಾಣವಾಗಲು ಕಾರಣಳಾದಳು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ನಂದಿ ಬೆಟ್ಟದ ಮೇಲೆ ಯೋಗ ನಂದೀಶ್ವರ ದೇವಾಲಯವು ನಿರ್ಮಿತವಾಗಿದ್ದರೆ, ಇಲ್ಲಿ ಭೋಗನಂದೀಶ್ವರ ಹಾಗು ಉಮಾ ಮಹೇಶ್ವರರ ಪ್ರತ್ಯೇಕ ಗರ್ಭಗುಡಿಗಳಿಂದ ನಿರ್ಮಿತವಾಗಿದೆ.

 

ಈ ಎರಡು ಗರ್ಭಗುಡಿಗಳು ಸುಂದರ ಕೆತ್ತನೆಯೊಳಗೊಂಡ ಪ್ರತ್ಯೇಕ ನಂದಿಗಳಿಂದ ಕೂಡಿದ ಮಂಟಪಗಳನ್ನು ಹೊಂದಿರುತ್ತದೆ. ಹಾಗೆಯೇ ಅತ್ಯಂತ ಸುಂದರವಾಗಿ ಕೆತ್ತಲ್ಪಟ್ಟ ಸುಕನಾಸಿ, ನವರಂಗ ಹಾಗು ಕಲ್ಯಾಣಮಂಟಪಗಳಿಂದ ಇಡೀ ದೇಗುಲವು ಕಾಲ ಶ್ರೀಮಂತಿಕೆಯಿಂದ ಕೂಡಿದೆ. ಉಮಾಮಹೇಶ್ವರ ದೇವಾಲಯದ ಗರ್ಭಗುಡಿಯ ಮುಂಬಾಗದಲ್ಲಿರುವ ಕಲ್ಯಾಣಮಂಟಪದ ರಚನೆಯಂತೂ ಅಮೋಘವಾಗಿದೆ. ಕಲ್ಯಾಣ ಮಂಟಪದ ನಾಲ್ಕು ಕಂಬಗಳು ಒಂದೇ ರೀತಿಯ ಅತ್ಯಂತ ನವಿರಾದ, ಸೂಕ್ಷ್ಮ ಕೆತ್ತನೆಯಿಂದ ಕೂಡಿದ್ದು ಅಲ್ಲಿನ ಶಿಲಾಬಾಲಿಕೆಯರ ಕೆತ್ತನೆಯ ವೈಭವದ ವೈಖರಿಗೆ ಕನ್ನಡಿ ಹಿಡಿದಂತಿದೆ.

ಇಲ್ಲಿಯ ಕಲ್ಯಾಣಮಂಟಪದ ಕಂಬಗಳಲ್ಲಿ ಸಂಗೀತ ಹೋರಾಡುವುದೆಂಬ ಪ್ರತೀತಿ ಇದೆ. ಈ ಉಮಾ ಮಹೇಶ್ವರ ಗರ್ಭಗುಡಿಯ ಸುತ್ತಲ ಗೋಡೆಗಳಲ್ಲಿ ಕೆತ್ತಲ್ಪಟ್ಟಿರುವ ಸಪ್ತ ಋಷಿಗಳು, ನೃತ್ಯಗಾರ್ತಿಯರ ಶಿಲ್ಪಗಳು ನೋಡುಗರ ಹೃನ್ಮನವನ್ನು ತಣಿಸುತ್ತವೆ.ಪಕ್ಕದ ಮುಖ್ಯ ಗರ್ಭಗುಡಿಯಲ್ಲಿ ಸುಂದರವಾದ ಬೃಹತ್ ಗಾತ್ರದ ಶಿವಲಿಂಗದಿಂದ ಕೂಡಿದ ಭೋಗ ನಂದೀಶ್ವರನನ್ನು ಕಾಣಬಹುದು. ಈ ದೇಗುಲದ ಗೋಪುರಗಳು, ಗೋಡೆಗಳು, ಮಹಿಷಾಸುರ ಮರ್ಧಿನಿ, ಉಗ್ರನರಸಿಂಹ, ಲಕ್ಷ್ಮಿ ಗಣಪತಿ ಮೊದಲಾದ ಶಿಲ್ಪಗಳಿಂದ ಅಲಂಕರಿಸಲ್ಪಟ್ಟಿದೆ.

ದೇವಾಲಯದ ಮುಂಭಾಗದಲ್ಲಿ ಹಿಂದೆ ರಥೋತ್ಸವಕ್ಕೆ ಬಳಸುತ್ತಿದ್ದ ಬೃಹತ ಗಾತ್ರದ ಕಲ್ಲಿನ ಚಕ್ರಗಳನ್ನು ಕಾಣಬಹುದು.೧೯೫೮ ರಲ್ಲಿ ಈ ದೇವಾಲಯದ ಆವರಣವನ್ನು ರಾಷ್ಟ್ರೀಯ ಸ್ಮಾರಕ ಪ್ರದೇಶವೆಂದು ಘೋಷಿಸಲಾಗಿದೆ.