ನಿಮ್ಮ ಮೆದುಳು ಎಂಥ ವಿಸ್ಮಯಕಾರಿ ಕೆಲಸಗಳನ್ನು ಮಾಡುತ್ತೆ ಗೊತ್ತ??

0
1882

ನಿಮ್ಮ ತಲೆಯೊಳಗಿರುವ ಪುಟ್ಟ ಮೆದುಳು ಎಷ್ಟು ಅದ್ಭುತವಾದ ವಸ್ತು ಗೊತ್ತೆ? ಶರೀರದ ಎಲ್ಲ ಅಂಗಗಳ ಪೈಕಿ ಅತ್ಯಂತ ಮಹತ್ವದ ಅಂಗ ಮೆದುಳು. ನೀವು ಸಮಸ್ತ ಕೆಲಸಗಳನ್ನೂ ಮಾಡಲು ಅದೇ ಕಾರಣ. ನೀವು ಗಮನಿಸಲಾಗದಿದ್ದರೂ ಅದು ನಿಮ್ಮ ಇಡೀ ಶರೀರವನ್ನು ನಿಯಂತ್ರಿಸುತ್ತಿರುತ್ತದೆ. ನೀವು ನಿದ್ರೆ ಮಾಡುವಾಗಲೂ ಅದು ಸದ್ದಿಲ್ಲದೇ ತನ್ನ ಕೆಲಸವನ್ನು ಮಾಡುತ್ತಿರುತ್ತದೆ. ನಿಮ್ಮ ಆಲೋಚನೆ, ಚಿಂತೆ, ಸಂತೋಷ – ಎಲ್ಲ ಭಾವನೆಗಳಿಗೂ ಮೆದುಳೇ ಕಾರಣ. ನಿಮ್ಮ ಕಣ್ಣು ರೆಪ್ಪೆಗಳ ಬಡಿತ, ಹೃದಯದ ಮಿಡಿತ, ನರಗಳ ಸಂವೇದನೆ, ರಕ್ತ ಪರಿಚಲನೆ ಎಲ್ಲವನ್ನೂ ನಿಯಂತ್ರಿಸುವ ಅಂಗ ಮೆದುಳು.

Image result for human brain wonder

ಈ ಬ್ರಹ್ಮಾಂಡದಲ್ಲಿ ನಾವು ಈವರೆಗೆ ಪತ್ತೆ ಮಾಡಿರುವ ವಸ್ತುಗಳ ಪೈಕಿ ಅತಿ ಸಂಕೀರ್ಣವಾದ ವಸ್ತು ಎಂದರೆ ನಮ್ಮ ಮೆದುಳು!

ಮಾನವನ ಮೆದುಳಿನ ಕುರಿತು ಹೆಚ್ಚು ಹೆಚ್ಚು ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೂ ಅದರ ಪೂರ್ಣ ಸ್ವರೂಪ ಪತ್ತೆಯಾಗಿಲ್ಲ! ಅದರ ಗುಟ್ಟು ವಿಜ್ಞಾನಿಗಳಿಗೆ ಸರಿಯಾಗಿ ತಿಳಿದಿಲ್ಲ. ದೂರದ ಗ್ಯಾಲಕ್ಸಿಯಷ್ಟೇ ನಿಗೂಢವಾದದ್ದು ನಮ್ಮ ಸ್ವಂತ ಮೆದುಳು!

ನಿಮ್ಮ ಅಡುಗೆಮನೆಯಲ್ಲಿ ಇಟ್ಟಿರುವ ಹಾಲಿನ ಪಾತ್ರೆಗೆ ಬೆಕ್ಕು ಇನ್ನೇನು ಬಾಯಿ ಹಾಕುವುದರಲ್ಲಿದೆ; ನೀವು ಅದನ್ನು ತಡೆಯಬೇಕಿದೆ; ತಕ್ಷಣ ನಿಮ್ಮ ಮೆದುಳು ಯಾವಾಗ, ಎಲ್ಲಿ ಮತ್ತು ಯಾವ ವೇಗದಲ್ಲಿ ನೀವು ಬೆಕ್ಕನ್ನು ಅಡ್ಡಗಟ್ಟಬೇಕು ಎಂಬುದನ್ನು ಲೆಕ್ಕಹಾಕಿ ಮಾಹಿತಿ ನೀಡುತ್ತದೆ. ಶರೀರದ ಮಾಂಸಖಂಡಗಳಿಗೆ ಕಾರ್ಯ ಕೈಗೊಳ್ಳುವ ಆದೇಶ ರವಾನಿಸುತ್ತದೆ. ಹೇಗೆ ಕಾರ್ಯವೆಸಗಬೇಕು ಎಂಬ ನಿರ್ದೇಶನವನ್ನೂ ನೀಡುತ್ತದೆ. ತಕ್ಷಣ ನೀವು ಈ ಮಾಹಿತಿಯ ಅನುಸಾರ ಕಾರ್ಯಪ್ರವೃತ್ತರಾಗುತ್ತೀರಿ. ಬೆಕ್ಕು ಹಾಲಿಗೆ ಬಾಯಿ ಹಾಕುವುದರೊಳಗೆ ನೀವು ಅದನ್ನು ತಳ್ಳಿ ಹಾಲಿನ ಪಾತ್ರೆಯನ್ನು ಎಳೆದುಕೊಳ್ಳುತ್ತೀರಿ.

Image result for human brain wonder

ಇದು ಸಾಧಾರಣ ಕ್ರಿಯೆ. ಆದರೆ ಇದು ಎಷ್ಟು ವೇಗವಾಗಿ ನಡೆಯುತ್ತದೆ ಗೊತ್ತೆ? ನಿಮ್ಮ ಕಣ್ಣು, ಕಿವಿ ಹಾಗೂ ಇತರ ಸಂವೇದನಾ ಅಂಗಗಳ ಮೂಲಕ ಮಾಹಿತಿಯನ್ನು `ಡೌನ್‍ಲೋಡ್’ ಮಾಡಿಕೊಂಡು, ಅದನ್ನು ವಿಶ್ಲೇಷಿಸಿ, ಬೇಗ ಒಂದು ನಿರ್ಧಾರಕ್ಕೆ ಬಂದು, ಆ ನಿರ್ಧಾರವನ್ನು ಕಾರ್ಯಗತಗೊಳಿಸಲು ಮುಂದಾಗುವ ಮೆದುಳಿನ ವೇಗ ಅದ್ಭುತವಾದದ್ದು. ಇಷ್ಟು ದಕ್ಷವಾಗಿ, ಇಷ್ಟು ವೇಗವಾಗಿ ಜಗತ್ತಿನ ಯಾವ ಸೂಪರ್‍ಕಂಪ್ಯೂಟರ್ ಸಹ ಕೆಲಸ ಮಾಡಲಾರದು!

ಮೆದುಳಿನಲ್ಲಿ 100 ಶತಕೋಟಿಗೂ ಹೆಚ್ಚು ಸೂಕ್ಷ್ಮ ಕೋಶಗಳಿವೆ. ಅವುಗಳನ್ನು ನ್ಯೂರಾನ್‍ಗಳು ಎನ್ನುತ್ತಾರೆ. ಪ್ರತಿ ನ್ಯೂರಾನ್‍ಗಳ ನಡುವೆಯೂ ಸಂಪರ್ಕ ಮಾರ್ಗಗಳಿವೆ. ನೀವು ನಗುವಾಗ, ಅಳುವಾಗ, ಎಲ್ಲ ಸಮಯಗಳಲ್ಲೂ ನ್ಯೂರಾನ್‍ಗಳ ನಡುವೆ ರಾಸಾಯನಿಕ ಹಾಗೂ ವಿದ್ಯುತ್ ಸಂಚಾರ ಆಗುತ್ತದೆ.

Image result for human brain wonder

ನಿಮ್ಮ ಕಾಲಿನ ಮೇಲೆ ದುಂಬಿ ಕುಳಿತುಕೊಂಡಿತು ಎಂದುಕೊಳ್ಳೋಣ. ತಕ್ಷಣ ಸಂವೇದನಾ ನ್ಯೂರಾನ್‍ಗಳ ನಡುವೆ 241 ಕಿ.ಮೀ/ಗಂಟೆ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಸಂದೇಶಗಳು ರವಾನೆಯಾಗುತ್ತದೆ. `ಕಾಲನ್ನು ಅಲ್ಲಾಡಿಸಿ ದುಂಬಿಯನ್ನು ಒದರಿಹಾಕು’ ಎಂಬ ಸಂದೇಶವನ್ನು ಚಲನಾ ನ್ಯೂರಾನ್‍ಗಳು ಬೆನ್ನುಹುರಿಯ ಮೂಲಕ ಕಾಲಿನ ಮಾಂಸಖಂಡಗಳಿಗೆ 322 ಕಿ.ಮೀ/ಗಂಟೆ ವೇಗದಲ್ಲಿ ರವಾನಿಸುತ್ತವೆ!

ನ್ಯೂರಾನ್ ಸಹ ತನ್ನ ಮಟ್ಟದಲ್ಲಿ ಅತ್ಯಲ್ಪ ಪ್ರಮಾಣದ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ಎಲ್ಲ ನ್ಯೂರಾನ್‍ಗಳ ವಿದ್ಯುತ್ ಅನ್ನು ಒಟ್ಟುಗೂಡಿಸಿದರೆ ವಿದ್ಯುತ್ ಬಲ್ಬ್ ಅನ್ನು ಹೊತ್ತಿಸಬಹುದು! ಆಲ್ಬರ್ಟ್ ಐನ್‍ಸ್ಟೈನ್ 1955ರಲ್ಲಿ ನಿಧನರಾದ ನಂತರ ಅವರ ಮೆದುಳನ್ನು ತೆಗೆದು ಅದರ ವೈಶಿಷ್ಟ್ಯಗಳನ್ನು ಪರೀಕ್ಷಿಸುವ ಅಸಾಮಾನ್ಯ ಪ್ರಯೋಗಗಳು ನಡೆದವು. ಅದ್ಭುತ ವಿಜ್ಞಾನಿಯ ಮೆದುಳು ಜನರ ತೀವ್ರ ಕುತೂಹಲ ಹಾಗೂ ಸಂಶೋಧನೆಯ ವಸ್ತುವಾಯಿತು (ಇದು ಎಷ್ಟು ಸರಿ ಎಂಬ ವಿಷಯದಲ್ಲಿ ವಿವಾದಗಳಿವೆ. ಅವುಗಳ ವಿವರ ಇಲ್ಲಿ ಅನಗತ್ಯ).

ಐನ್‍ಸ್ಟೈನ್‍ರ ಮೆದುಳಿನ ಸ್ವರೂಪ, ಅದರ ನರಸಂಯೋಜನೆ, ಕೋಶಗಳ ಸ್ವರೂಪ, ಆಕಾರ, ಲಕ್ಷಣಗಳ ಬಗ್ಗೆ ಅಧ್ಯಯನ ನಡೆಸಲು ಸತ್ತ 7 ಗಂಟೆಗಳ ಒಳಗಾಗಿ ಅಮೆರಿಕದ ನ್ಯೂಜೆರ್ಸಿಯ ಪ್ರಿನ್ಸ್‍ಟನ್ ಆಸ್ಪತ್ರೆಯಲ್ಲಿ ಅವರ ಶರೀರದಿಂದ ಮೆದುಳನ್ನು ಬೇರ್ಪಡಿಸಿ ಹೊರತೆಗೆಯಲಾಯಿತು. ಈವರೆಗೆ ಅವರ ಮೆದುಳಿನ ಬಗ್ಗೆ ಮೂರ್ನಾಲ್ಕು ಪ್ರತ್ಯೇಕ ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಅವರ ಮೆದುಳಿನಲ್ಲಿ ಮಾತು ಹಾಗೂ ಭಾಷೆಗೆ ಸಂಬಂಧಿಸಿದ ಭಾಗಗಳು ಚಿಕ್ಕದಾಗಿದ್ದವು,  ಸಂಖ್ಯೆಗಳ ಹಾಗೂ ವೈಜ್ಞಾನಿಕ ವಿಶ್ಲೇಷಣೆಯ ಕ್ಷೇತ್ರಗಳು ದೊಡ್ಡದಾಗಿದ್ದವು ಎನ್ನಲಾಗಿದೆ.  ಹಾಗೆಯೇ `ಗ್ಲಿಯಲ್’ ಎಂಬ ಬುದ್ಧಿಕೋಶಗಳ ಸಂಖ್ಯೆ ಹೆಚ್ಚಾಗಿರುವುದು ಕಂಡುಬಂದಿತ್ತು. ಅವರ ಮೆದುಳಿನ ಕೆಲವು ಭಾಗಗಳು ಸಾಮಾನ್ಯ ಮನುಷ್ಯರ ರೀತಿ ಇರಲಿಲ್ಲ ಎಂಬ ಅಂಶ 1999ರ ಒಂದು ಅಧ್ಯಯನದಿಂದ ತಿಳಿದುಬಂದಿದೆ.