ಊಟ ಸರಿಯಿಲ್ಲ ಎಂದ ಯೋಧ ತೇಜ್‍ ಬಹದ್ದೂರ್‍ ಬಂಧನ? ವಿಆರ್‍ಎಸ್‍ ಕೊಡದೇ ಹಿಂಸೆ?

0
793

ಗಡಿಯಲ್ಲಿ ದೇಶ ಕಾಯುವ ನಮಗೆ ಗುಣಮಟ್ಟದ ಊಟ ಕೊಡುತ್ತಿಲ್ಲ ಎಂದು ಸಾಕ್ಷಿ ಸಮೇತ ಸಾಮಾಜಿಕ ಜಾಲತಾಣದಲ್ಲಿ ಅಲವತ್ತುಗೊಂಡಿದ್ದ ಬಿಎಸ್‍ಎಫ್‍ ಯೋಧ ತೇಜ್‍ ಬಹದ್ದೂರ್‍ ಅವರನ್ನು ಬಂಧಿಸಲಾಗಿದ್ದು, ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ!

ಹಾಗಂತ ತೇಜ್‍ ಬಹದ್ದೂರ್‍ ಅವರ ಪತ್ನಿ ಶರ್ಮಿಳಾ ಯಾದವ್‍ ಈ ಆಘಾತಕಾರಿ ವಿಷಯವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದು, ಅಧಿಕಾರಿಗಳ ವರ್ತನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಒಂದೆಡೆ ವಿಆರ್‍ಎಸ್‍ ತಗೊಂಡು ಹೋಗು ಎಂದು ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ತನಿಖೆ ಪೂರ್ಣ ಆಗುವವರೆಗೂ ನಿವೃತ್ತಿಗೆ ಅನುಮತಿ ನೀಡುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಯೋಧನ ಪತ್ನಿ ಆರೋಪಿಸಿದ್ದಾರೆ.

ಜನವರಿ 31 ರಂದು ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರು. ಆದರೆ ಅವರಿನ್ನೂ ಬಂದಿಲ್ಲ. ಅದೇ ದಿನ ರಾತ್ರಿ 8 ಗಂಟೆಗೆ ಕರೆ ಮಾಡಿದ ಅವರು ಈಗ ಬರಲು ಆಗುತ್ತಿಲ್ಲ. ಅಲ್ಲದೇ ನಿವೃತ್ತಿ ತಗೊಂಡು ಮನೆಗೆ ಹೋಗು ಎನ್ನುತ್ತಿದ್ದಾರೆ ಎಂದು ಶರ್ಮಿಳಾ ಯಾದವ್‍ ವಿವರಿಸಿದ್ದಾರೆ.

ಮತ್ತೆ ಕೆಲವೇ ಗಂಟೆಯಲ್ಲಿ ಬೇರೊಬ್ಬರ ಮೊಬೈಲ್‍ನಿಂದ ಮತ್ತೆ ಕರೆ ಮಾಡಿದ ಅವರು, ನಿವೃತ್ತಿ ಆದೇಶವೂ ರದ್ದಾಗಿದ್ದು, ನನ್ನನ್ನು ಬಂಧಿಸಲಾಗಿದ್ದು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ ಎಂದು ಹೇಳಿಕೊಂಡರು ಎಂದು ಪತ್ನಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ಆದರೆ ಬಿಎಸ್‍ಎಫ್‍ ಅಧಿಕಾರಿಗಳನ್ನು ವಿಚಾರಿಸಿದಾಗ ತೇಜ್ ‍ಬಹದ್ದೂರ್‍ ಅವರನ್ನು ಬಂಧಿಸಲಾಗಿಲ್ಲ. ಆದರೆ ನಿಯಮ ಉಲ್ಲಂಘಿಸಿದ್ದು ಸಾಬೀತಾಗಿದ್ದು, ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದ್ದು, ಈ ಬಗ್ಗೆ ಅನುಮತಿ ದೊರೆಯಬೇಕಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತೇಜ್‍ ಬಹದ್ದೂರ್‍ ಗಡಿಯಲ್ಲಿ ತಮಗೆ ಪರೋಟಾ ಜೊತೆ ಏನನ್ನೂ ಕೊಡಲ್ಲ. ಕೇವಲ ಟೀ ತಿನ್ನಬೇಕಾಗಿದೆ. ಮಧ್ಯಾಹ್ನದ ಊಟದಲ್ಲಿ ಬೇಳೆ ಬೇಯಿಸಿದ್ದು ಬಿಟ್ಟರೆ ಬೇರೇನೂ ಇರುವುದಿಲ್ಲ ಎಂದು ವೀಡೀಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದು ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿದ್ದೂ ಅಲ್ಲದೇ ಯೋಧರ ಆಹಾರ ಗುಣಮಟ್ಟ ಕಾಯ್ದುಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಯಿತು.