ಕನಕಪುರ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣದ ವಿಚಾರವನ್ನು ಕೈ ಬಿಡದ ಸರ್ಕಾರ; ವರದಿ ನೀಡೋ ಮುನ್ನವೇ ತಹಶೀಲ್ದಾರ್ ರಾತ್ರೋರಾತ್ರಿ ವರ್ಗಾವಣೆ.!

0
151

ಡಿ.ಕೆ ಶಿವಕುಮಾರ್ ಶಂಕುಸ್ಥಾಪನೆ ಮಾಡಿದ ಏಸು ಪ್ರತಿಮೆ ನಿರ್ಮಾಣ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಬಿಜೆಪಿ ಸರ್ಕಾರ ಕೈ ತೊಳೆದುಕೊಂಡು ವಿರೋಧಕ್ಕೆ ನಿಂತುಕೊಂಡಿದೆ, ಈ ಹಿನ್ನೆಲೆಯಲ್ಲಿ ಏಸು ಕ್ರಿಸ್ತ ಪ್ರತಿಮೆ ವಿಚಾರದಲ್ಲಿ ಅನಗತ್ಯ ಟೀಕೆ-ಟಿಪ್ಪಣಿ ಮಾಡಿ ಕಾಂಗ್ರೆಸ್‌ಗೆ ರಾಜಕೀಯ ಅಸ್ತ್ರ ಕೊಡಬಾರದು ಎಂದು ಸಂಪುಟದ ಸಹೋದ್ಯೋಗಿಗಳಿಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರಕ್ಕೆ ವರದಿ ನೀಡುವ ಮುನ್ನವೇ ಕನಕಪುರ ತಹಶೀಲ್ದಾರ್ ಆನಂದಯ್ಯ ಅವರನ್ನು ಸ್ಥಳ ನಿಯೋಜನೆ ಮಾಡದೇ ಏಕಾಏಕಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೌದು ಕನಕಪುರ ತಾಲೂಕಿನ ಹಾರೊಬೆಲೆ ಸಮೀಪದಲ್ಲಿನ ಕಪಾಲ ಬೆಟ್ಟದಲ್ಲಿನ 10 ಎಕರೆ ಸರ್ಕಾರಿ ಗೋಮಾಳದಲ್ಲಿ ಶಾಸಕ ಡಿ.ಕೆ ಶಿವಕುಮಾರ್ ಅವರು ಅತೀ ಎತ್ತರದ ಏಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಡಿ.25 ರಂದು ಚಾಲನೆ ನೀಡಿದ್ದರು. ಇದಾದ ಬಳಿಕ ಡಿಕೆಶಿ ನಡೆ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಈ ಬಗ್ಗೆ ಕಂದಾಯ ಸಚಿವರು ತನಿಖೆಗೆ ಆದೇಶಿಸಿ, ವರದಿ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ತನಿಖೆಗೆ ಆದೇಶ ಮಾಡಿದ ಮೂರೇ ದಿನದಲ್ಲಿ ಕನಕಪುರ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಕಂದಾಯ ಇಲಾಖೆಗೆ ಸೇರಿದ ಭೂಮಿಯಲ್ಲಿಯೇ ಏಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದರಿಂದ ಸಹಜವಾಗಿ ಅಲ್ಲಿನ ತಹಶೀಲ್ದಾರ್ ಅವರೇ ಜಿಲ್ಲಾಧಿಕಾರಿಗಳಿಗೆ ಪ್ರಾಥಮಿಕ ವರದಿ ಸಲ್ಲಿಸಬೇಕಿತ್ತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೇ, ಕನಕಪುರ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ತಹಶೀಲ್ದಾರ್ ಆನಂದಯ್ಯ ವರ್ಗಾವಣೆಯಲ್ಲಿ ಸಾಕಷ್ಟು ಅನುಮಾನಗಳು ಮೂಡಿದ್ದು, ಡಿಕೆಶಿ ಆಪ್ತರು ಎಂಬ ಕಾರಣಕ್ಕೆ ಹಲವಾರು ವರ್ಷಗಳಿಂದ ಕನಕಪುರದಲ್ಲೇ ಆನಂದಯ್ಯ ಕೆಲಸ ಮಾಡುತ್ತಿದ್ದಾರೆ. ಡಿಕೆಶಿ ಅಣತಿಯಂತೆ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಹೀಗಾಗಿ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ ಎನ್ನಲಾಗಿದೆ. ಇನ್ನೊಂದೆಡೆ ಆನಂದಯ್ಯ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್​ಗೆ ಆಪ್ತರಾಗಿದ್ದರು. ಏಸು ಪ್ರತಿಮೆ ವಿಚಾರ ಮುನ್ನೆಲೆಗೆ ಬಂದ ಹಿನ್ನೆಲೆ ರಾಮನಗರ ಜಿಲ್ಲೆಯಲ್ಲಿ ಕ್ಲೀನಿಂಗ್ ಮಾಡಲಾಗುವುದು ಎಂದು ಸೂಚನೆ ನೀಡಿದ್ದ ಡಿಸಿಎಂ ಅಶ್ವತ್ಥನಾರಾಯಣ ಡಿಕೆಶಿ ಆಪ್ತರನ್ನು ಎತ್ತಂಗಡಿ ಮಾಡಿಸತೊಡಗಿದ್ದಾರೆ. ಹೀಗಾಗಿಯೇ ರಾತ್ರೋರಾತ್ರಿ ಕನಕಪುರ ತಹಶೀಲ್ದಾರ್​​ ಅವರನ್ನು ವರ್ಗಾವಣೆ ಮಾಡಲಾಗಿದೆ.

ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಕೆಲ ದಿನಗಳ ಹಿಂದಯಷ್ಟೇ ಜಿಲ್ಲೆಯಲ್ಲಿ ಕ್ಲೀನಿಂಗ್ ಕೆಲಸ ಆರಂಭಿಸಲಾಗುವುದು ಎಂದಿದ್ದರು. ಹಾಗಾಗಿ ತಹಶೀಲ್ದಾರ್ ಆನಂದಯ್ಯ ವರ್ಗಾವಣೆ ಆಗಿದ್ದಾರೆ ಎನ್ನಲಾಗಿದೆ. ಆದರೆ, ಕನಕಪುರ ತಾಲೂಕಿನ ಏಸು ಪ್ರತಿಮೆ ವಿವಾದದ ಬೆನ್ನಲ್ಲೇ ಅಲ್ಲಿನ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಮಾತ್ರ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೆಲ್ಲ ನೋಡಿದರೆ ಡಿ.ಕೆ.ಶಿವಕುಮಾರ್ ಅವರ ಅಭಿವೃದ್ದಿಯ ಕೆಲಸವನ್ನು ಬಿಜೆಪಿ ಸರ್ಕಾರ ಸಹಿಸಲು ಆಗದೆ ಇವೆಲ್ಲ ಕೆಲಸಕ್ಕೆ ಕೈಹಾಕಿದೆ ಎನ್ನಲಾಗಿದೆ.

Also read: ಬಿಜೆಪಿ ಧಾರ್ಮಿಕ ವಿವಾದಗಳನ್ನು ಸೃಷ್ಟಿಸುತ್ತಿದೆ, ಮತಗಳನ್ನು ಪಡೆಯಲು ಸುಳ್ಳುಗಳನ್ನು ಹೇಳಿ ಜನರು ನಂಬುವಂತೆ ಮಾಡುತ್ತಿದ್ದಾರೆ, ಡಿ.ಕೆ.ಶಿವಕುಮಾರ್.!