ಕೇಕ್ನಲ್ಲಿ ಲಂಡನ್ ಮೇಲ್ಸೆತುವೆ, ಡ್ರಾಗನ್, ಶಂಕರ್ನಾಗ್, ಲೇಡೀಸ್ ಪರ್ಸ್…
ಕಣ್ಮನ ಸೆಳೆಯುವ ಲಂಡನ್ ಮೇಲ್ಸೆತುವೆ. ಭಯ ಹುಟ್ಟಿಸುವ ನಾಲ್ಕು ಕಾಲಿನ ಡ್ರಾಗನ್, ಕನ್ನಡ ಸಿನಿಮಾ ಪ್ರಿಯರ ನೆಚ್ಚಿನ ಹೀರೊ ಶಂಕರ್ನಾಗ್, ನರ್ತನ ಭಂಗಿಯಲ್ಲಿ ಸೆಳೆಯುವ ನವಿಲು, ಹೆಂಗೆಳೆಯರು ಮನಸೋಲುವ ಲೇಡೀಸ್ ಪರ್ಸ್…
ಇವೆಲ್ಲಾ ಒಂದೇ ಸೂರಿನಡಿ ಜನರ ಮನಸೆಳೆಯಲು ಸಜ್ಜಾಗಿ ನಿಂತಿವೆ. ಇವುಗಳ ವಿಶೇಷವೇನು ಗೊತ್ತೇ? ಇವು ಕೇಕ್ ಕಲಾಕೃತಿಗಳು. ಕಲಾವಿದರು ಹಲವು ದಿನಗಳ ಶ್ರಮದಿಂದ ಕೇಕ್ನಿಂದಲೇ ನಿರ್ಮಿಸಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣ ಸಮೀಪದ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ 42ನೇ ಕೇಕ್ ಪ್ರದರ್ಶನ ಮೇಳವನ್ನು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಆರಂಭಗೊಳಿಸಲಾಗಿದೆ.
ಈ ಕೇಕ್ ಮೇಳ ಡಿ. 16ರಿಂದ ಜನವರಿ 1ರ ವರೆಗೆ ನಡೆಯಲಿದ್ದು, ಸುಮಾರು 10 ಸಾವಿರ ಚದರ ಅಡಿಗಳ ವಿಸ್ತೀರ್ಣದಲ್ಲಿ ನಡೆಯುತ್ತಿರುವ ವಿಶ್ವದ ಅತ್ಯಂತ ದೊಡ್ಡ ಕೇಕ್ ಪ್ರದರ್ಶನ ಇದಾಗಿದೆ.
ಈ ಬಾರಿಯ ವಿಶೇಷ ಆಕರ್ಷಣೆ ಲಂಡನ್ನ ಪ್ರಸಿದ್ಧ ಥೇಮ್ಸ್ ನದಿಗೆ ಅಡ್ಡವಾಗಿ ನಿರ್ಮಾಣಗೊಂಡು ವಿಶ್ವದ ಗಮನ ಸೆಳೆಯುತ್ತಿರುವ ಲಂಡನ್ ಸೇತುವೆಯ ಪ್ರತಿಕೃತಿಯನ್ನು 14 ಅಡಿ ಉದ್ದ, 7 ಅಡಿ ಅಗಲ, 8 ಅಡಿ ಎತ್ತರ, ಸುಮಾರು 500 ಕೆಜಿ ತೂಕ ಇರುವಂತೆ 5 ಕೇಕ್ ತಯಾರಕರು 65 ದಿನಗಳ ಶ್ರಮದಲ್ಲಿ ತಯಾರಿಸಿದ್ದಾರೆ.
ನಾಲ್ಕು ಕಾಲಿನ ಚೀನಾದ ಡ್ರಾಗನ್ನ್ನು 14 ಅಡಿ ಉದ್ದ, 4 ಅಡಿ ಅಗಲ, 7.5 ಅಡಿ ಎತ್ತರ ಹಾಗೂ 400 ಕೆಜಿ ಕೇಕ್ನಲ್ಲಿ ನಿರ್ಮಿಸಲಾಗಿದೆ. ಜತೆಗೆ ಅಲ್ಲಾವುದ್ದೀನ್ ಹಾಗೂ ಮ್ಯಾಜಿಕ್ ಚಾಪೆಯನ್ನು 40ಕೆಜಿ ಕೇಕ್, ಮಕ್ಕಳ ಪಾಲಿನ ಮೆಚ್ಚಿನ ಪುಸ್ತಕ ಜಾಕ್ ಮತ್ತು ಬೀನ್ ಸ್ಟಾಕ್ ಕಥೆಗೆ ಕೇಕ್ ರೂಪ ನೀಡಿದ್ದು, 80 ಕೆಜಿ ತೂಕದ ಕೇಕ್ನಲ್ಲಿ ಕಲಾವಿದರು ತಯಾರಿಸಿದ್ದಾರೆ.
ಮಕ್ಕಳಿಗೆ ಉಚಿತ ಪ್ರವೇಶ
ಕೇಕ್ ಪ್ರದರ್ಶನದಲ್ಲಿ ಶಾಪಿಂಗ್, ಊಟ, ಕೇಕ್ ಪ್ರಿಯರಿಗಾಗಿ 72 ಮಳಿಗೆಗಳನ್ನು ತೆರೆಯಲಾಗಿದೆ. 23 ಬಗೆಯ ಕೇಕ್ ಕಲಾಕೃತಿಗಳನ್ನು ನೋಡುತ್ತಲೇ ಶಾಪಿಂಗ್ ಮಾಡಬಹುದು, ಬೇಕಾದ ಕೇಕ್ ಖರೀದಿ ಮಾಡಿ, ಸವಿಯಾದ ಊಟ ಸವಿಯಲು ಕೂಡ ಅವಕಾಶವಿದೆ. ಆದರೆ ಈ ಕೇಕ್ ಪ್ರದರ್ಶನಕ್ಕೆ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶಾವಕಾಶವಿದೆ. ಉಳಿದವರು 49 ರೂಪಾಯಿ ಪಾವತಿಸಿ ಟಿಕೆಟ್ ಪಡೆಯುವುದು ಕಡ್ಡಾಯ.