ಕರೋನ ಬಿಡಿ, ಭಾರತದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ 2025ಕ್ಕೆ 15.7 ಲಕ್ಷಕ್ಕೆ ಏರಿಕೆಯಾಗುತ್ತಂತೆ!!

0
544

ದೆಹಲಿ: ಭಾರತದಲ್ಲಿ ಈಗಾಗಲೇ 13.9 ಲಕ್ಷ ಮಂದಿ ಕ್ಯಾನ್ಸರ್’ನಿಂದ ಬಳಲುತ್ತಿದ್ದು, ಇದು 2025ರ ಹೊತ್ತಿಗೆ 15.7 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಸಿಎಂಆರ್ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಬೆಂಗಳೂರು ಮೂಲದ ರಾಷ್ಟ್ರೀಯ ರೋಗ ಸೂಚನಾ ವಿಜ್ಙಾನ ಮತ್ತು ಸಂಶೋಧನಾ ಕೇಂದ್ರ ಮತ್ತು ಐಸಿಎಂಆರ್ ಕ್ಯಾನ್ಸರ್ ಪ್ರಕರಣಗಳ ಅಂದಾಜು ನಡೆಸಿದೆ. ಕ್ಯಾನ್ಸರ್ ಪ್ರಕರಣಗಳನ್ನು ದಾಖಲಿಸಿಕೊಳ್ಳುವ 28 ಕೇಂದ್ರಗಳಿಂದ ಮಾಹಿತಿ ಸಂಗ್ರಹಿಸಿ ರಾಷ್ಟ್ರೀಯ ಕ್ಯಾನ್ಸರ್ ರೆಜಿಸ್ಟ್ರ ಪ್ರೋಗ್ರಾಮ್ ವರದಿ, 2020 ಸಲ್ಲಿಸಲಾಗಿದೆ. ಇದರೊಂದಿಗೆ 58 ಆಸ್ಪತ್ರೆ ಆಧಾರಿತ ನೋಂದಣಿಗಳಿಂದ ಮಾಹಿತಿ ಪಡೆಯಲಾಗಿದೆ.

ತಂಬಾಕು ಸಂಬಂಧಿ ಕ್ಯಾನ್ಸರ್ ಶೇ.27.1ರಷ್ಟಿದ್ದು, ಇದು 2020ರ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ 3.7 ಲಕ್ಷದಷ್ಟಿದೆ. ಶ್ವಾಸಕೋಶ, ಹೊಟ್ಟೆ, ಗಂಟಲನಾಳ ಕ್ಯಾನ್ಸರ್ ಪುರುಷರಲ್ಲಿ ಕಂಡುಬರುವ ಸಾಮಾನ್ಯ ಕ್ಯಾನ್ಸರ್ ಗಳಾಗಿವೆ ಎಂದು ವರದಿ ತಿಳಿಸಿದೆ.

ಇನ್ನು 2ಲಕ್ಷ (ಶೇ.14.8)ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ. 0.75ಲಕ್ಷ (ಶೇ.5.4ರಷ್ಟು) ದಷ್ಟು ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹಾಗೂ ಮಹಿಳೆ ಮತ್ತು ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಜಠರ ಕ್ಯಾನ್ಸರ್ 2.7 ಲಕ್ಷ (ಶೇ.19.7ರಷ್ಟು)ದಷ್ಟು ಇದ್ದಿರುವುದಾಗಿ ಹೇಳಿದೆ.

ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ತಲೆ ಮತ್ತು ಕುತ್ತಿಗೆ, ಹೊಟ್ಟೆ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಹರಡುವಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ವರದಿ ತಿಳಿಸಿದೆ. ಕ್ಯಾನ್ಸರ್ ಪ್ರಕರಣಗಳ ಪ್ರಮಾಣ 1,00,000 ಪುರುಷರ ಪೈಕಿ ಮಿಜೊರಾಂನ ಐಜೋಲ್ ಜಿಲ್ಲೆಯಲ್ಲಿ 269.4 ಪ್ರಕರಣಗಳಿದ್ದು, ಇದು ಭಾರತದಲ್ಲಿಯೇ ಅತಿ ಹೆಚ್ಚು. ಮಹಾರಾಷ್ಟ್ರದ ಉಸ್ಮಾನಾಬಾದ್ ಮತ್ತು ಬೀಡ್ ಜಿಲ್ಲೆಗಳಲ್ಲಿ 39.5 ಪ್ರಕರಣಗಳಿವೆ. ಪ್ರತಿ 1,00,000 ಮಹಿಳೆಯರ ಪೈಕಿ ಅರುಣಾಚಲ ಪ್ರದೇಶದ ಪಾಪುಂಪಾರೆ ಜಿಲ್ಲೆಯಲ್ಲಿ 219.8 ಕ್ಯಾನ್ಸರ್ ಪ್ರಕರಣಗಳಿಂದ ಹಿಡಿದು ಉಸ್ಮಾನಾಬಾದ್ ಮತ್ತು ಬೀಡ್ ಜಿಲ್ಲೆಗಳಲ್ಲಿ 49.4 ಪ್ರಕರಣಗಳು ದಾಖಲಾಗಿರುವುದಾಗಿ ಪ್ರಕಟಣೆ ತಿಳಿಸಿದೆ.

ದೇಶದ ಈಶಾನ್ಯ ಪ್ರದೇಶದಲ್ಲಿ ತಂಬಾಕು ಬಳಕೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್ ಉಂಟಾಗುತ್ತಿದೆ. ಪುರುಷರಲ್ಲಿ ಶ್ವಾಸಕೋಶ, ಬಾಯಿ, ಜಠರ ಹಾಗೂ ಅನ್ನನಾಳದ ಕ್ಯಾನ್ಸರ್ ಸಾಮಾನ್ಯವಾಗಿದೆ. ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ಹೆಚ್ಚು ಕಾಣಿಸಿಕೊಳ್ಳುತ್ತಿದೆ.

ಶಸ್ತ್ರಚಿಕಿತ್ಸೆ, ಕೀಮೊಥೆರಪಿ ಹಾಗೂ ರೇಡಿಯೇಷನ್ ಥೆರಪಿಗಳ ಮೂಲಕ ಸ್ತನ ಕ್ಯಾನ್ಸರ್, ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗರ್ಭಕಂಠ ಕ್ಯಾನ್ಸರ್ಗೆ ರೇಡಿಯೊಥೆರಪಿ ಹಾಗೂ ಕೀಮೊಥೆರಪಿಗಳ ಸಹಾಯದಿಂದ ಚಿಕಿತ್ಸೆ ನಡೆಸಲಾಗುತ್ತಿದೆ.

Also read: ಕರೋನ ಪರೀಕ್ಷೆ ನೆಗಟಿವ್ ಬಂದರೂ ಕಡ್ಡಾಯ ಕ್ವಾರಂಟೈನ್-ನಲ್ಲಿ ಇಡುವುದು ಸೂಕ್ತವೇ?